

ಬೆಂಗಳೂರು: ವಿದೇಶ ಪ್ರವಾಸದಿಂದ ಮರಳಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ಮಧ್ಯಾಹ್ನ ಹೈದರಾಬಾದ್ಗೆ ಬಂದಿಳಿದರೆ, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಬೆಂಗಳೂರಿಗೆ ದೌಡಾಯಿಸಿದರು.
ಮೋದಿ ಅವರನ್ನು ಸ್ವಾಗತಿಸುವ ಬದಲು ಕರ್ನಾಟಕಕ್ಕೆ ಚಂದ್ರಶೇಖರ ರಾವ್ ಬಂದದ್ದು ತೆಲಂಗಾಣ ರಾಜಕೀಯ ರಂಗದಲ್ಲಿ ಬಿಸಿ ಚರ್ಚೆಗೆ ಗ್ರಾಸವಾಗಿದೆ. ಮೋದಿ ಅವರ ಭೇಟಿ ತಪ್ಪಿಸಿಕೊಳ್ಳುತ್ತಿರುವುದು ಇದು ಮೂರನೇ ಬಾರಿಯಾಗಿದ್ದು, ತೆಲಂಗಾಣ ಪ್ರತಿಪಕ್ಷ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇದೊಂದು ಕೆಳಮಟ್ಟದ ರಾಜಕಾರಣವೆಂದು ಹರಿಹಾಯ್ದಿದೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪದ್ಮನಾಭ ನಗರ ನಿವಾಸಕ್ಕೆ ಆಗಮಿಸಿದ ಕೆಸಿಆರ್, ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಜತೆಗೆ ಮಧ್ಯಾಹ್ನದ ಭೋಜನದ ಬಳಿಕ ದೇಶದ ಪ್ರಸ್ತುತ ರಾಜಕೀಯ ವಿದ್ಯಮಾನ, ತೃತೀಯ ರಂಗಕ್ಕೆ ಚಾಲನೆ ನೀಡುವ ಅಗತ್ಯತೆ ಕುರಿತು ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.
ಉದ್ದೇಶಪೂರ್ವಕ ವಿಳಂಬ?: ಮೋದಿಯವರು ಹೈದರಾಬಾದ್ನ ಇಂಡಿಯನ್ ಬ್ಯುಸಿನೆಸ್ ಸ್ಕೂಲ್ ದ್ವಿಶತಮಾನೋತ್ಸವ, ಪದವಿ ದಿನ ಹಾಗೂ ವಿದ್ವಾಂಸರಿಗೆ ಪದಕ ಪ್ರದಾನದ ಬಳಿಕ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮ ಮುಗಿದು, ಮೋದಿ ದೆಹಲಿಗೆ ಮರು ಪ್ರಯಾಣ ಬೆಳೆಸುವ ತನಕ ಹೈದರಾಬಾದ್ಗೆ ಕಾಲಿಡಬಾರದು ಎಂದು ಪ್ಲ್ಯಾನ್ ಮಾಡಿ ಕೆ.ಚಂದ್ರಶೇಖರ ರಾವ್, ಬೆಂಗಳೂರಿಗೆ ಉದ್ದೇಶಪೂರ್ವಕವಾಗಿ ತಡವಾಗಿ ಬಂದರು ಎಂಬ ಸಂಶಯ ವ್ಯಕ್ತವಾಗಿದೆ.
ಪೂರ್ವ ನಿಗದಿತ ವೇಳಾಪಟ್ಟಿ ಪ್ರಕಾರ ಹೈದರಾಬಾದ್ನಿಂದ ವಿಶೇಷ ವಿಮಾನದಲ್ಲಿ ಹೊರಟು ಅಪರಾಹ್ನ 12ಕ್ಕೆ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಇಳಿದು, ಮಧ್ಯಾಹ್ನ 12.30ಕ್ಕೆ ದೇವೇಗೌಡರ ಮನೆಗೆ ಭೇಟಿ, ಮಾತುಕತೆ ಬಳಿಕ ಮಧ್ಯಾಹ್ನ ಮೂರಕ್ಕೆ ಹೈದರಾಬಾದ್ಗೆ ಮರು ಪ್ರಯಾಣ ಬೆಳೆಸಬೇಕಿತ್ತು. ಆದರೆ ಒಂದು ತಾಸು ತಡವಾಗಿ ಮಧ್ಯಾಹ್ನ 1.30ಕ್ಕೆ ದೇವೇಗೌಡರ ನಿವಾಸಕ್ಕೆ ತೆಲಂಗಾಣ ಸಿಎಂ ಧಾವಿಸಿದರು. ಊಟದ ನಂತರ ಮಧ್ಯಾಹ್ನ 3.15 ಕಳೆದರೂ ಮಾತುಕತೆ ಮುಂದುವರಿದೇ ಇತ್ತು. ಬಹುಶಃ ಮೋದಿಯವರು ಕಾರ್ಯಕ್ರಮ ಮುಗಿಸಿ ಹೈದರಾಬಾದ್ನಿಂದ ಮರಳುತ್ತಿದ್ದಾರೆ ಎಂಬ ಸಂದೇಶಕ್ಕಾಗಿ ಕಾದು ಕುಳಿತು, ದೇವೇಗೌಡರ ಜತೆಗಿನ ಮಾತುಕತೆಯನ್ನು ಚಂದ್ರಶೇಖರ ರಾವ್ ಅವಂಬಿಸಿದರು ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.