ರೈತರ ಜಮೀನು ವಶಪಡಿಸಿಕೊಳ್ಳಲು ಕುತಂತ್ರ

bdvt p
ರೈತರಿಗೆ ನೋಟಿಸ್ ನೀಡಿರುವುದನ್ನು ವಿರೋಧಿಸಿ ಗ್ರಾಮಾಂತರ ಬಗರ್ ಹುಕುಂ ರೈತ ಹೋರಾಟ ಸಮಿತಿಯಿಂದ ಭದ್ರಾಔತಿ ವಲಯ ಅರಣ್ಯ ಅಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಲಾಯಿತು. ಎಚ್.ಆರ್.ಬಸವರಾಜಪ್ಪ, ಕೆ.ಬಿ.ಅಶೋಕ್‌ನಾಯ್ಕ, ಎಸ್.ರುದ್ರೇಗೌಡ, ಆರ್.ಪ್ರಸನ್ನಕುಮಾರ್, ಬಿ.ಕೆ.ಶಿವಕುಮಾರ್, ಧರ್ಮಪ್ರಸಾದ್, ಮಲ್ಲೇಶಪ್ಪ, ಮಂಗೋಟೆ ರುದ್ರೇಶ್ ಇತರರಿದ್ದರು.
Published on

ಭದ್ರಾವತಿ: ಅರಣ್ಯ ಇಲಾಖೆಯು ಜಮೀನು ತೆರವುಗೊಳಿಸುವಂತೆ ರೈತರಿಗೆ ನೋಟಿಸ್ ನೀಡಿರುವುದನ್ನು ವಿರೋಧಿಸಿ ಗ್ರಾಮಾಂತರ ಬಗರ್‌ಹುಕುಂ ರೈತ ಹೋರಾಟ ಸಮಿತಿ ಭದ್ರಾವತಿಯ ವಲಯ ಅರಣ್ಯಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿತು.

ಉಳುಮೆ ಮಾಡುತ್ತಿರುವ ಜಮೀನಿನ ರೈತರನ್ನು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಷಡ್ಯಂತ್ರ ರೂಪಿಸಿದೆ. ನ್ಯಾಯಾಲಯ ರೈತರ ವಿರುದ್ಧ ಆದೇಶ ನೀಡಿರುವುದು ರೈತರಲ್ಲಿ ಆತಂಕ ಉಂಟು ಮಾಡಿದೆ. ಪೂರ್ವಜರ ಕಾಲದ ಜಮೀನುಗಳಿಗೂ ನೋಟಿಸ್ ನೀಡಿದರೆ ರೈತರ ಪಾಡೇನು ಎಂದು ರಾಜ್ಯ ರೈತ ಸಂಘ, ಹಸಿರು ಸೇನೆ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಪ್ರಶ್ನಿಸಿದರು.

ಹತ್ತಾರು ದಶಕಗಳ ಜಮೀನು ಉಳುಮೆ ಮಾಡುತ್ತಿರುವವರಿಗೂ ಕಿರುಕುಳ ನೀಡಲಾಗುತ್ತಿದೆ. 70-80 ವರ್ಷಗಳ ಹಿಂದೆ ಅರಣ್ಯ ಮತ್ತು ಕಂದಾಯ ಇಲಾಖೆಗಳು ಭೂಮಿಯಿಲ್ಲದ ರೈತರಿಗೆ ಸಾಗುವಳಿ ಚೀಟಿ ಮತ್ತು ಇತರ ದಾಖಲೆಗಳನ್ನು ನೀಡಿ ಬೆಳೆ ಬೆಳೆಯಲು ಅನುವು ಮಾಡಿಕೊಟ್ಟಿತ್ತು. ಆದರೆ ಇತ್ತೀಚೆಗೆ ಅರಣ್ಯ ಇಲಾಖೆ ಅಧಿಕಾರಿಗಳು ನೋಟಿಸ್ ನೀಡಿರುವುದು ಸರಿಯಾಗಿದೆ. ಭೂಮಿ ಬಿಟ್ಟುಕೊಡಿ ಎಂದು ಒತ್ತಾಯಿಸುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಲಕ್ಷ್ಮೀಪುರ, ಯಡೇಹಳ್ಳಿ, ಅಶೋಕನಗರ ಭಾಗದಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರಿದ್ದಾರೆ. ಜಮೀನು ಬಿಟ್ಟುಕೊಡುವಂತೆ ಇವರಿಗೂ ನೋಟಿಸ್ ನೀಡಿದ್ದಾರೆ. ಭೂಮಿ ಮಂಜೂರು ಪ್ರಶ್ನಿಸಿ ಹೂಡಿದ ದಾವೆಗಳು ನ್ಯಾಯಾಲಯದಲ್ಲಿವೆ. ಅರಣ್ಯಾಧಿಕಾರಿಗಳು ರೈತರೊಂದಿಗೆ ಜಿದ್ದಿಗೆ ಬಿದ್ದವರಂತೆ ವರ್ತಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮಾಂತರ ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಮಾತನಾಡಿ, ಅರಣ್ಯ ಒತ್ತುವರಿ, ಭೂ ಮಂಜೂರಾತಿ ಪ್ರಶ್ನಿಸಿ ಭದ್ರಾವತಿ ತಾಲೂಕಿನ ಆನವೇರಿ, ಇಟ್ಟಿಗೆಹಳ್ಳಿ, ಲಕ್ಷ್ಮೀಪುರ, ಯಡೇಹಳ್ಳಿ, ಅಶೋಕನಗರ ಸುತ್ತಮುತ್ತಲಿನ 1,500ಕ್ಕೂ ಅಧಿಕ ರೈತರಿಗೆ ಅರಣ್ಯ ಇಲಾಖೆ ನೋಟಿಸ್ ಜಾರಿ ಮಾಡಿ ನ್ಯಾಯಾಲಯದಲ್ಲಿ ದಾವೆ ಹೂಡಿದೆ. ರೈತರು ಕೋರ್ಟ್‌ಗೆ ಅಲೆಯುವಂತೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗುಡುಮಗಟ್ಟೆ, ತಡಸ ಭಾಗದಲ್ಲಿ ಸಲಿಗೆ ಬಂದಿದ್ದ ಅಡಕೆ ತೋಟವನ್ನು ಸಂಪೂರ್ಣವಾಗಿ ಕಡಿದುಹಾಕಿದ್ದನ್ನು ಪ್ರಶ್ನಿಸಿ ವಲಯ ಅರಣಾಧಿಕಾರಿಗಳನ್ನು ಮುಖಂಡರು ತರಾಟೆಗೆ ತೆಗೆದುಕೊಂಡರು. ಅರಣ್ಯಾಧಿಕಾರಿ ಮಾತನಾಡಿ, ಸ್ಥಳ ಪರಿಶೀಲನೆ ನಡೆಸಿ ರೈತನಿಗೆ ನ್ಯಾಯದೊರಕಿಸುವ ಭರವಸೆ ನೀಡಿದರು.

ಮಾಜಿ ಶಾಸಕ ಕೆ.ಬಿ.ಅಶೋಕ್‌ನಾಯ್ಕ, ಮಾಜಿ ಎಂಎಲ್‌ಸಿ ಎಸ್.ರುದ್ರೇಗೌಡ, ಆರ್.ಪ್ರಸನ್ನಕುಮಾರ್, ಬಿ.ಕೆ.ಶಿವಕುಮಾರ್, ಧರ್ಮಪ್ರಸಾದ್, ಮಲ್ಲೇಶಪ್ಪ, ಮಂಗೋಟೆ ರುದ್ರೇಶ್, ಸಿ.ಹನುಮಂತಪ್ಪ, ಡಿ.ಮಂಜುನಾಥ್, ಸುಬ್ರಮಣಿ, ಎಚ್.ಜಿ.ಮಲ್ಲಯ್ಯ, ಕಿರಣ್‌ಕುಮಾರ್, ವಿಜಯ್ ಸರ್ಜಿ, ಎಸ್.ಸಿದ್ದಲಿಂಗಪ್ಪ, ರಂಗಪ್ಪ, ರುದ್ರೇಶ್, ಆರ್.ಉಮೇಶ್, ತೀರ್ಥಯ್ಯ, ಕುಬೇಂದ್ರಪ್ಪ, ಎಂ.ಜಿ.ಗುರುಮೂರ್ತಿ, ಜಗದೀಶ ಗೌಡ, ಉಜ್ಜಿನಪ್ಪ, ಎಂ.ಪಾಲಾಕ್ಷಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net