

ಶಿವಮೊಗ್ಗ: ಧಾವಂತ ಸನ್ನಿವೇಶವೇ ಹೆಚ್ಚಿರುವ ಬದುಕಿನಲ್ಲಿ ಪತ್ರಿಕೆಗಳು, ವೆಬ್‌ಸೈಟ್‌ಗಳನ್ನು ನೋಡಿ ಸುದ್ದಿ ತಿಳಿದುಕೊಳ್ಳುವುದಕ್ಕಿಂತಲೂ ಛಾಯಾಚಿತ್ರಗಳನ್ನೇ ನೋಡಿ ಸುದ್ದಿ ಗ್ರಹಿಸುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಕುವೆಂಪು ವಿವಿ ಪ್ರಭಾರ ಕುಲಪತಿ ಪ್ರೊ. ಎಸ್.ವೆಂಕಟೇಶ್ ಹೇಳಿದರು.
ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮತ್ತು ಹಿರಿಯ ವಿದ್ಯಾರ್ಥಿಗಳ ಸಂಘದಿಂದ ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಒಂದು ಛಾಯಾಚಿತ್ರ ಸಾವಿರ ಪದಗಳಿಗೆ ಸಮ ಎಂಬ ಮಾತಿನಿಂತೆ ಸುದ್ದಿಪತ್ರಿಕೆಗಳಲ್ಲಿ ನೀಡುವ ಛಾಯಾಚಿತ್ರಗಳು ಭಾವ ಸಹಿತವಾಗಿ ಓದುಗರಿಗೆ ವಿಷಯ ಮುಟ್ಟಿಸುತ್ತವೆ. ಹೀಗಾಗಿ ಚಿತ್ರಗಳನ್ನು ನೋಡಿ ಸುದ್ದಿಗಳನ್ನು ಓದುವ, ಗ್ರಹಿಸುವ, ಅರ್ಥೈಸಿಕೊಳ್ಳುವ ಪ್ರವೃತ್ತಿ ವೃದ್ಧಿಯಾಗಿವೆ ಎಂದರು.
ಕೋವಿಡ್ ಕಾಲಘಟ್ಟದ ಜನರ ನಿತ್ಯಬದುಕಿನ ಸಂಕಟಗಳು, ಜನಪರ ಚಳವಳಿಗಳು, ವಿಶೇಷ ಪಕ್ಷಿಗಳು, ಸಾಕುಪ್ರಾಣಿಗಳ ಮಾನವಾಸಕ್ತ ಚಿತ್ರಗಳು, ದಸರಾ ಸಂದರ್ಭದ ವಿಶೇಷ ಘಟನಾವಳಿಗಳು ಸೇರಿ 100ಕ್ಕೂ ಅಧಿಕ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಛಾಯಾಗ್ರಹಣದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಹಿರಿಯ ಪತ್ರಿಕಾ ವರದಿಗಾರ ಅನೂಪ್ ಆರ್. ತಿಪ್ಪೇಸ್ವಾಮಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ವಿಭಾಗದ ಅಧ್ಯಕ್ಷ ಡಾ.ಎಂ.ಆರ್.ಸತ್ಯಪ್ರಕಾಶ್, ಪ್ರಾಧ್ಯಾಪಕರಾದ ಡಾ.ವರ್ಗೀಸ್, ಡಾ.ಸತೀಶ್‌ಕುಮಾರ್ ಇತರರಿದ್ದರು.