ಲಿವಿಂಗ್ ಟುಗೆದರ್‌ನಲ್ಲಿ ಇದ್ದವನ ಎದೆಗೆ ಇರಿದು ಹತ್ಯೆ

Living together
Published on

ಬೆಂಗಳೂರು: ಸರ್ವೀಸ್ ಅಪಾರ್ಟ್‌ಮೆಂಟ್‌ನಲ್ಲಿ ಲಿವಿಂಗ್ ಟುಗೆದರ್‌ನಲ್ಲಿ ಇದ್ದ ಮಹಿಳೆ, ತನ್ನ ಪ್ರಿಯಕರನ ಎದೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾಳೆ. ಕೇರಳ ಮೂಲದ ಜಾವೇದ್ (29) ಮೃತ ವ್ಯಕ್ತಿ. ಈತನ ಹತ್ಯೆ ಮಾಡಿದ ರೇಣುಕಾ (34) ಎಂಬಾಕೆಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇರಳ ಜಿಲ್ಲೆ ಕಣ್ಣೂರಿನ ಜಾವೇದ್, ಮೊಬೈಲ್ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ರೇಣುಕಾ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಮೂರೂವರೆ ವರ್ಷದಿಂದ ಪರಿಚಯವಿದ್ದು, ಲಿವಿಂಗ್ ಟುಗೆದರ್‌ನಲ್ಲಿದ್ದರು. ರೇಣುಕಾಗೆ 8 ವರ್ಷದ ಹೆಣ್ಣು ಮಗುವಿದೆ.

ಹುಳಿಮಾವು ಸಮೀಪದ ಅಕ್ಷಯನಗರದ ಸರ್ವೀಸ್ ಅಪಾರ್ಟ್‌ಮೆಂಟ್‌ನಲ್ಲಿನ 2ನೇ ಮಹಡಿಯಲ್ಲಿ ರಿಯಾಜ್ ಎಂಬಾತನ ಹೆಸರಿನಲ್ಲಿ ಪ್ಲ್ಯಾಟ್ ಬುಕ್ ಮಾಡಿದ್ದರು. ಆದರೆ, ಪ್ಲ್ಯಾಟ್‌ನಲ್ಲಿ ಜಾವೇದ್ ಮತ್ತು ರೇಣುಕಾ ವಾಸವಾಗಿದ್ದರು. ಮಂಗಳವಾರ ಮಧ್ಯಾಹ್ನ ಇಬ್ಬರ ನಡುವೆ ಜಗಳ ಶುರುವಾಗಿದೆ. ಅಪಾರ್ಟ್‌ಮೆಂಟ್ ಮ್ಯಾನೇಜರ್ ಸುನೀಲ್, ್ಲ್ಯಾಟ್‌ಗೆ ಹೋಗಿ ನೋಡಿದಾಗ ರೇಣುಕಾ ತನ್ನ ತೊಡೆಯ ಮೇಲೆ ಜಾವೇದ್‌ನನ್ನು ಮಲಗಿಸಿಕೊಂಡಿದ್ದಳು.

ಅದನ್ನು ನೋಡಿದ ಸುನೀಲ್, ಏನಾಯಿತು ಎಂದು ಪ್ರಶ್ನಿಸಿದಾಗ ವೈಯಕ್ತಿಕ ಸಮಸ್ಯೆ ಎಂದು ಹೇಳಿದ್ದಾಳೆ. ಕೂಡಲೇ ಸುನೀಲ್ ಮತ್ತು ಅಕ್ಕಪಕ್ಕದವರು ಆಟೋ ಮಾಡಿ ಜಾವೇದ್ ಮತ್ತು ರೇಣುಕಾಳನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ. ಅಷ್ಟರಲ್ಲಿ ತೀವ್ರ ರಕ್ತಸ್ರಾವ ಉಂಟಾಗಿ ಜಾವೇದ್ ಸಾವನ್ನಪ್ಪಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಪ್ಲ್ಯಾಟ್ ಮಾಲೀಕ ಗಣೇಶ್ ನೀಡಿದ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net