ಪೊಲೀಸ್ ಠಾಣೆ ಎದುರೇ ಮದ್ಯ ಸೇವಿಸಿದ ವ್ಯಕ್ತಿ

Screenshot_2024-12-05-10-17-00-70.jpg
Published on

ಬೆಳಗಾವಿ: ವೈಯಕ್ತಿಕ ಸಮಸ್ಯೆ ಬಗೆಹರಿಸುವಂತೆ ಪೊಲೀಸ್ ಠಾಣೆಗೆ ಬಂದಿದ್ದ ವ್ಯಕ್ತಿಯೊಬ್ಬ ಪೊಲೀಸರಿಂದ ಯಾವುದೇ ಪರಿಹಾರ ಸಿಗದಿದ್ದಕ್ಕೆ ಠಾಣೆಯ ಮುಂದೆಯೆ ಕುಳಿತು ಮದ್ಯ ಸೇವನೆ ಮಾಡಿದ ಘಟನೆ ಜಿಲ್ಲೆಯ ಗೋಕಾಕ ಶಹರ ಪೊಲೀಸ್ ಠಾಣೆ ಬಳಿ ಬುಧವಾರ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಸಮಸ್ಯೆ ಈಡೇರಿಸುವಂತೆ ಗೋಕಾಕ ಶಹರ ಪೊಲೀಸ್ ಠಾಣೆಗೆ ತೆರಳಿದ್ದ. ಪೊಲೀಸರು ವ್ಯಕ್ತಿಯ ಸಮಸ್ಯೆಗೆ ಸರಿಯಾಗಿ ಸ್ಪಂದಿಸಿಲ್ಲ ಎನ್ನಲಾಗಿದೆ. ಹೀಗಾಗಿ ವ್ಯಕ್ತಿ ಠಾಣೆ ಎದುರಿನ ರಸ್ತೆಯಲ್ಲಿ ಕುಳಿತು ಮದ್ಯ ಸೇವಿಸಲು ಶುರು ಮಾಡಿದ. ರಸ್ತೆಯಲ್ಲಿ ವಾಹನಗಳು ಓಡಾಡುತ್ತಿದ್ದರೂ ಲೆಕ್ಕಿಸದ ವ್ಯಕ್ತಿ ಅಲ್ಲಿಯೆ ಮದ್ಯ ಸೇವಿಸುತ್ತಲೇ ಇದ್ದ. ಕೆಲ ಹೊತ್ತಿನ ಬಳಿಕ ಪೊಲೀಸರು ಆ ವ್ಯಕ್ತಿಯನ್ನು ಸ್ಥಳದಿಂದ ಎಬ್ಬಿಸಿ ಕಳುಹಿಸಿದ್ದಾರೆ. ಈ ಘಟನೆ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ತುಣುಕುಗಳು ವೈರಲ್ ಆಗಿವೆ. ವ್ಯಕ್ತಿಯನ್ನು ಬಂಧಿಸಿ ವಿಚಾರಿಸಲಾಗುತ್ತಿದೆ ಎಂದು ಎಸ್.ಪಿ. ಡಾ.ಬೀಮಾಶಂಕರ ಗುಳೇದ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net