ಮುಂಬೈನಿಂದ ಬಂದು ಸುತ್ತ ಹತ್ತೂರು ಓಡಾಡಿದವನಿಗೆ ಕರೊನಾ ಸೋಂಕು; ಜಿಲ್ಲಾಡಳಿತಕ್ಕೆ ತಲೆನೋವು..

Corona 11 May 20
Published on

ಹಾವೇರಿ: ಇಂದು ಹಾವೇರಿಯಲ್ಲಿ ಇನ್ನೊಂದು ಕರೊನಾ ವೈರಸ್​ ಪ್ರಕರಣ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಮೂರಕ್ಕೇರಿದೆ.

ಆದರೆ ಹಾವೇರಿಯಲ್ಲಿ ಪತ್ತೆಯಾದ ಸೋಂಕಿತನ ಟ್ರಾವೆಲ್​ ಹಿಸ್ಟರಿ ಸ್ವಲ್ಪ ಭಯ ಹುಟ್ಟಿಸುವಂತಿದೆ. ಅದಿನ್ನೆಷ್ಟು ಜನರಿಗೆ ಈತನಿಂದ ಸೋಂಕು ತಗುಲಿದೆಯೋ ಎಂಬ ಆತಂಕ ಶುರುವಾಗಿದೆ.

ಮಾವಿನ ಹಣ್ಣಿನ ವ್ಯಾಪಾರಿಯಾಗಿರುವ ಈತ ತನ್ನದೇ ಮಿನಿ ಲಾರಿಯಲ್ಲಿ ನವೀ ಮುಂಬೈನಲ್ಲಿರೋ ವಾಸಿ ಎಪಿಎಂಸಿ ಮಾರುಕಟ್ಟೆಗೆ ಹೋಗಿಬಂದಿದ್ದಾನೆ. ಏ.23, 26 ಮತ್ತು 29ವರೆಗೆ ಮೂರು ಬಾರಿ ಮುಂಬೈಗೆ ಹೋಗಿದ್ದ. ಅದಾದ ಬಳಿಕ ಮೇ 1ರಿಂದ 6ರವರೆಗೆ ಸ್ವಗ್ರಾಮ ಅಂದಲಗಿ, ಹಾನಗಲ್​, ಹನುಮಸಾಗರ, ಶಡಗರವಳ್ಳಿ,ಕೊಪ್ಪರಸಿಕೊಪ್ಪ, ಬೈಲವಾಳ ಸೇರಿ ಒಟ್ಟು 10 ಗ್ರಾಮಗಳಲ್ಲಿ ಸಂಚಾರ ಮಾಡಿದ್ದಾನೆ.

ಆದರೆ ಮೇ 6ರಂದು ಈತ ಮುಂಬೈಗೆ ಹೋಗಿಬಂದಿದ್ದರ ಬಗ್ಗೆ ಮಾಹಿತಿ ತಿಳಿದ ಆರೋಗ್ಯಾಧಿಕಾರಿಗಳು ಕ್ವಾರಂಟೈನ್​ ಮಾಡಿದ್ದರು. ಈಗ ಆತನಲ್ಲಿ ಸೋಂಕು ದೃಢಪಟ್ಟಿದೆ. ಅವನ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ 16 ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 23 ಜನರನ್ನು ಗುರುತಿಸಿ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಆದರೆ ಈ ಸಂಖ್ಯೆ ಹೆಚ್ಚಾಗುವ ಎಲ್ಲ ಸಾಧ್ಯತೆಗಳೂ ಇವೆ.

ಸೋಂಕಿತ ವ್ಯಕ್ತಿಯೊಂದಿಗೆ ಆತನ ತಮ್ಮ ಹಾಗೂ ಮೂವರು ಕ್ಲೀನರ್​​ಗಳು ಕೂಡ ಮುಂಬೈಗೆ ಹೋಗಿಬಂದಿದ್ದಾರೆ. ಅವರೆಲ್ಲರೂ ಸದ್ಯ ಕ್ವಾರಂಟೈನ್​ನಲ್ಲಿದ್ದಾರೆ. ಈ ವ್ಯಕ್ತಿಯ ನಿವಾಸದಿಂದ 300 ಮೀಟರ್​ ಪ್ರದೇಶವನ್ನು ಸಂಪೂರ್ಣ ಸೀಲ್​ಡೌನ್​ ಮಾಡಲಾಗಿದೆ. ಅನಗತ್ಯವಾಗಿ ಓಡಾಡಲು ಯಾರನ್ನೂ ಬಿಡುತ್ತಿಲ್ಲ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net