ರಸ್ತೆಯಲ್ಲಿ ಮೈಮಾಟದೊಂದಿಗೆ ಗರಿ ಬಿಚ್ಚಿದ ನವಿಲು

11 HANUR 3
ಮಲೆಮಹದೇಶ್ವರ ಬೆಟ್ಟ ಮಾರ್ಗದಲ್ಲಿ ರಸ್ತೆಯನ್ನು ದಾಟಿ ಲವಲವಿಕೆಯಿಂದ ಕಾಡಿನತ್ತ ಓಟ ಕಿತ್ತ ನವಿಲು.
Published on

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟ-ತಾಳುಬೆಟ್ಟ ಮಾರ್ಗದ ರಸ್ತೆಯಲ್ಲಿ ಶುಕ್ರವಾರ ನವಿಲೊಂದು ತನ್ನ ಮೈಮಾಟದೊಂದಿಗೆ ಲವಲವಿಕೆಯಿಂದ ಗರಿಗೆದರಿ ಕಾಡಿನತ್ತ ಓಟ ಕಿತ್ತಿದ್ದು, ಭಕ್ತರನ್ನು ಪುಳಕಗೊಳಿಸಿತು.

ಈ ಮಾರ್ಗವು ಮಲೆಮಹದೇಶ್ವರ ವನ್ಯಜೀವಿ ವಿಭಾಗಕ್ಕೆ ಸೇರಿದ್ದು, ಅರಣ್ಯ ಪ್ರದೇಶದೊಳಗೆ ಹಾದು ಹೋಗಿದೆ. ಈ ಮಾರ್ಗದಲ್ಲಿ ಹಿಂದೆ ಕಾಡಾನೆಯೊಂದು ರಸ್ತೆಗೆ ಆಗಮಿಸಿ ಭಕ್ತರಲ್ಲಿ ಆತಂಕ ಉಂಟು ಮಾಡುತ್ತಿತ್ತು. ಆದರೀಗ ಇಂತಹ ಸಮಸ್ಯೆ ಇಲ್ಲ. ಆದರೆ ಎಲ್ಲೇಮಾಳದಿಂದ ತಾಳುಬೆಟ್ಟದವರೆಗೆ ಕಳೆದ 15 ದಿನಗಳಿಂದ ಅಲ್ಲಲ್ಲಿ ಕಾಡಾನೆಗಳು ಕಾಣಸಿಗುತ್ತಲೇ ಇವೆ. ಇದರಿಂದ ಭಕ್ತರು ಭಯಭೀತರಾಗುತ್ತಿದ್ದಾರೆ. ಹೀಗಿರುವಾಗ ಕಳೆದ ಮೂರ‌್ನಾಲ್ಕು ದಿನಗಳಿಂದ ಮ.ಬೆಟ್ಟದ ತಪ್ಪಲಿನಲ್ಲಿ ಆಗಾಗ್ಗೆ ಮಳೆ ಬೀಳುತ್ತಿರುವುದರಿಂದ ಅರಣ್ಯ ಪ್ರದೇಶ ಹಸಿರಿನಿಂದ ಕಂಗೊಳಿಸುವುದರತ್ತ ಸಾಗಿದೆ. ಆಗಮಿಸುವ ಪ್ರವಾಸಿಗರು ಹಾಗೂ ಭಕ್ತರಿಗೆ ಅರಣ್ಯ ಪ್ರದೇಶ ಮುದ ನೀಡುತ್ತಿದೆ. ಏತನ್ಮಧ್ಯೆ ಹೆಚ್ಚು ಕಾಣಿಸಿಕೊಳ್ಳದ ನವಿಲುಗಳು ಇದೀಗ ರಸ್ತೆ ಬದಿ ಕಾಣಿಸಿಕೊಳ್ಳುತ್ತಿವೆ.

ಈ ಮಾರ್ಗದಲ್ಲಿ ಹೆಚ್ಚಾಗಿ ಕೋತಿಗಳನ್ನು ಹೊರತುಪಡಿಸಿದರೆ ಪ್ರಾಣಿ, ಪಕ್ಷಿಗಳು ಕಾಣ ಸಿಗುವುದಿಲ್ಲ. ಆದರೆ ಬೆಳಗ್ಗೆ ನವಿಲೊಂದು ರಸ್ತೆಗೆ ಬಂದಿತ್ತು. ಈ ವೇಳೆ ವಾಹನವೊಂದು ಆಗಮಿಸಿದೊಡನೆ ತನ್ನ ಮೈಮಾಟದೊಂದಿಗೆ ಗರಿಗೆದರಿ ಲವಲವಿಕೆಯಿಂದ ಹೆಜ್ಜೆ ಹಾಕುತ್ತಾ ಕಾಡಿನತ್ತ ಓಟ ಕಿತ್ತಿದೆ. ಈ ದೃಶ್ಯ ತೆರಳುತ್ತಿದ್ದವರಿಗೆ ಮುದ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಶ್ರೀ ಮಲೆಮಹದೇಶ್ವರಸ್ವಾಮಿ ದಕ್ಷಿಣ ದ್ವಾರ ಹನೂರು ಕ್ಷೇತ್ರ ಫೇಸ್‌ಬುಕ್ ಖಾತೆಯಲ್ಲಿ ಈ ದೃಶ್ಯವನ್ನು ಹಂಚಿಕೆ ಮಾಡಿರುವುದರ ಜತೆಗೆ ಕಾಡುಪ್ರಾಣಿಗಳು ನಾಡಿನತ್ತ ಮುಖ ಮಾಡುತ್ತಿರುವುದು ಹಾಗೂ ಅತಿಯಾದ ವಾಹನಗಳ ವೇಗದಿಂದ ಪ್ರಾಣಿಗಳು ಮೃತಪಡುತ್ತಿರುವುದರ ಸಂಬಂಧ ಅಗತ್ಯ ಸಲಹೆ, ಸೂಚನೆಯ ವಿವರಣೆಯನ್ನು ಹಂಚಿಕೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net