ಯುವ ಪೀಳಿಗೆಗೆ ದಾರಿದೀಪ; ತಲೆಮಾರಿನ ಹೊಂದಾಣಿಕೆಗೆ ನೀತಿ ಪರಿಷ್ಕರಣೆ, ವಾರದಲ್ಲಿ ಸಮಿತಿ..

State Story
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ರಾಜ್ಯದ ಯುವ ಸಮುದಾಯ ದಾರಿ ತಪ್ಪದಂತೆ ಎಚ್ಚರವಹಿಸುವ ಹಾಗೂ ಅವರ ಅಭ್ಯುದಯದ ಆಶಯ ಇರಿಸಿಕೊಂಡು ನೂತನ ಯುವ ನೀತಿ ರೂಪಿಸುವ ಕಾರ್ಯಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ 2012ರಲ್ಲಿ ಯುವ ನೀತಿ ರೂಪಿಸಲಾಗಿತ್ತು. ವಿವೇಕಾನಂದ ಯುವ ನಿಗಮ ಸೇರಿದಂತೆ ಅನೇಕ ಉದ್ದೇಶಗಳನ್ನು ಹೊಂದಿ ರೂಪಿಸಿದ್ದ ಯುವ ನೀತಿ ಪ್ರಾಮಾಣಿಕವಾಗಿ ಜಾರಿಗೆ ಬರಲಿಲ್ಲ. ಈಗಿನ ಸರ್ಕಾರ ಪರಿಷ್ಕರಣೆ ಮಾಡುವ ಮೂಲಕ ಇಂದಿನ ದಿನಗಳಿಗೆ ಹೊಂದಾಣಿಕೆ ಆಗುವಂತೆ ನೀತಿಯನ್ನು ರೂಪಿಸಲು ನಿರ್ಧರಿಸಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿವಿಧ ಯೋಜನೆಗಳಲ್ಲಿ ಯುವ ಸಮುದಾಯಕ್ಕಾಗಿ ಕೋಟಿ ಕೋಟಿ ರೂ.ಗಳನ್ನು ವೆಚ್ಚ ಮಾಡುತ್ತಿವೆ. ಕೇಂದ್ರದಿಂದ ಸುಮಾರು 90 ಸಾವಿರ ಕೋಟಿ ರೂ.ಗಳ ಯೋಜನೆಗಳಿವೆ, ರಾಜ್ಯ ಸರ್ಕಾರ 5 ಸಾವಿರ ಕೋಟಿ ರೂ. ಮೊತ್ತವನ್ನು ವಿವಿಧ ಇಲಾಖೆಗಳ ಮೂಲಕ ಖರ್ಚು ಮಾಡುತ್ತಿದೆ. ಆ ಯೋಜನೆಗಳು ಸರಿ ರೀತಿಯಲ್ಲಿ ಯುವಕರಿಗೆ ತಲುಪಬೇಕು ಎಂಬುದು ನೀತಿ ರೂಪಿಸುವುದಕ್ಕೆ ಪ್ರಮುಖ ಕಾರಣವಾಗಿದೆ.

ಜನಸಂಖ್ಯೆಯ ಶೇ.27.5 ಯುವ ಸಮುದಾಯವಿದೆ ಎಂಬ ಅಂದಾಜಿದೆ. ಅದರ ಪ್ರಕಾರ, ರಾಜ್ಯದಲ್ಲಿ 2 ಕೋಟಿಗೂ ಹೆಚ್ಚಿನ ಯುವ ಸಮುದಾಯವಿದೆ. ದೇಶದ ಜಿಡಿಪಿಗೆ ಯುವ ಸಮುದಾಯದ ಕೊಡುಗೆ ಶೇ.34 ಎಂಬ ಅಂದಾಜಿದೆ. ರಾಜ್ಯದಲ್ಲಿಯೂ ಅದೇ ಪ್ರಮಾಣದಲ್ಲಿ ಕೊಡುಗೆ ನೀಡುತ್ತಿದೆ. ಕೇಂದ್ರದ ಮುದ್ರಾ ಸೇರಿ ಅನೇಕ ಯೋಜನೆಗಳಲ್ಲಿ ಯುವ ಸಮುದಾಯಕ್ಕೆ ಆದ್ಯತೆ ಇದೆ. ರಾಜ್ಯದಲ್ಲಿಯೂ ಕೃಷಿ, ಕಾರ್ವಿುಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕೌಶಲಾಭಿವೃದ್ಧಿ ಹೀಗೆ ಅನೇಕ ಇಲಾಖೆಗಳಲ್ಲಿ ಪ್ರತ್ಯೇಕ ಯೋಜನೆಗಳಿವೆ. ಅವುಗಳ ಲಾಭ ಪಡೆಯವುದು ಯುವ ಸಮುದಾಯಕ್ಕೆ ಸ್ಪಷ್ಟ ಮಾಹಿತಿ ಒಂದೆಡೆ ಸಿಗುತ್ತಿಲ್ಲ.

ನಿಗಮ ರಚನೆ: ಹಿಂದಿನ ನೀತಿಯಲ್ಲಿ ನಿಗಮವೊಂದನ್ನು ಸ್ಥಾಪನೆ ಮಾಡುವ ಮೂಲಕ ವಿವಿಧ ಇಲಾಖೆಗಳ ಯೋಜನೆಗಳನ್ನು ಜಾರಿಗೆ ತರಲು ಉದ್ದೇಶಿಸಲಾಗಿತ್ತು. ಈಗಲೂ ಅಂತಹದ್ದೆ ಆಲೋಚನೆ ಇದೆ. ಆದರೆ ಸಮಿತಿಯೂ ಅದಕ್ಕಿಂತ ವಿಶೇಷವಾದ ಮಾರ್ಗಗಳನ್ನು ನೀಡಿದರೆ ಅದರ ಬಗ್ಗೆಯೂ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮೂಲಗಳು ಹೇಳುತ್ತವೆ.

ಏನೇನು ಆಗಬೇಕು?: ಸರ್ಕಾರದಲ್ಲಿರುವ ಅಭಿಪ್ರಾಯ ಹಾಗೂ ಹಿಂದಿನ ನೀತಿಯಲ್ಲಿರುವ ಅಂಶಗಳ ಪ್ರಕಾರ, ಯೂಥ್ ಹೆಲ್ಪ್​ಲೈನ್, ಟ್ಯಾಲೆಂಟ್ ಬ್ಯಾಂಕ್, ಪೋರ್ಟಲ್, ಫೆಲೋಶಿಪ್ ನೀಡುವುದು ಆಗಬೇಕು. ಅದಕ್ಕೆ ರಚನೆಯಾಗಲಿರುವ ಸಮಿತಿಯೂ ತನ್ನ ಸಲಹೆಗಳನ್ನು ನೀಡಬೇಕಾಗಿದೆ.

ವಯೋಮಾನಕ್ಕೆ ತಕ್ಕ ಯೋಜನೆ: ಯುವಕರೆಂದರೆ ಕೇಂದ್ರ ಸರ್ಕಾರದ ಪ್ರಕಾರ, 15ರಿಂದ 29 ವರ್ಷ ವಯೋಮಾನದವರು. ವಯೋಮಾನಕ್ಕೆ ತಕ್ಕಂತೆ ಯೋಜನೆಯನ್ನು ರೂಪಿಸುವುದು ಸರ್ಕಾರದಲ್ಲಿರುವ ಆಲೋಚನೆಯಾಗಿದೆ. 15ರಿಂದ 20 ವರ್ಷ, 21ರಿಂದ 25 ವರ್ಷ ಹಾಗೂ 26ರಿಂದ 29 ವರ್ಷ ವಯಸ್ಸಿನವರಿಗೆ ತಕ್ಕಂತೆ ಶಿಕ್ಷಣ, ಉದ್ಯೋಗ ಆಧಾರಿತ ಮಾರ್ಗಸೂಚಿಗಳನ್ನು ಸಿದ್ಧಪಡಿಸಬೇಕಾಗುತ್ತದೆ.

ವರದಿ ಪರಿಶೀಲನೆ ಬಳಿಕ ಜಾರಿ: ಯುವ ನೀತಿ ರೂಪಿಸುವುದಕ್ಕೆ ಸಂಬಂಧಿಸಿದಂತೆ ಸಮಿತಿ ರಚಿಸಿ 2021ರಲ್ಲಿಯೇ ಜಾರಿಗೆ ತರುವುದು ಸರ್ಕಾರದ ಉದ್ದೇಶ. ವಿವೇಕಾನಂದ ಯೂಥ್ ಮೂವ್​ವೆುಂಟ್​ನ ಬಾಲಸುಬ್ರಮಣ್ಯ ಅವರನ್ನು ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಸರ್ಕಾರ ಉದ್ದೇಶಿಸಿದೆ. ಸಮಿತಿ ರಚನೆಯ ಆದೇಶ 1-2 ದಿನಗಳಲ್ಲಿಯೇ ಹೊರ ಬೀಳಲಿದೆ. ಆನಂತರ ಸಮಿತಿಯೂ ವ್ಯಾಪಕ ಅಧ್ಯಯನ, ಅಭಿಪ್ರಾಯ ಸಂಗ್ರಹ, ಪ್ರವಾಸ ಮಾಡುವ ಮೂಲಕ ನೀತಿಯನ್ನು ಸಿದ್ಧಪಡಿಸುತ್ತದೆ. ಸಮಿತಿ ನೀಡುವ ವರದಿಯನ್ನು ಸಂಪುಟದ ಮುಂದಿಟ್ಟು ನಂತರ ಅದನ್ನು ಜಾರಿಗೆ ತರಲಾಗುತ್ತದೆ ಎಂದು ಸರ್ಕಾರದ ಉನ್ನತ ಮೂಲಗಳು ಖಚಿತಪಡಿಸಿವೆ.

ಪ್ರತ್ಯೇಕ ಬಜೆಟ್​ಗೆ ಬೇಡಿಕೆ ಇದೆ: ಯುವ ಸಮುದಾಯಕ್ಕೆ ಪ್ರತ್ಯೇಕ ಬಜೆಟ್ ರೂಪಿಸಬೇಕು. ಎಲ್ಲ ಯೋಜನೆಗಳನ್ನು ಒಂದೆಡೆ ತರಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಇದೆ. ಮಹಿಳಾ, ಮಕ್ಕಳ ಬಜೆಟ್ ಈಗ ರಾಜ್ಯದಲ್ಲಿದೆ.

ಹಿಂದಿನ ನೀತಿಯ ಧ್ಯೇಯ ಏನಿತ್ತು?

  • ನಂಬಿಕೆ, ಶಾಂತಿ, ಅಭಿವೃದ್ಧಿ, ಬದಲಾವಣೆ, ಸಾಧನೆ
  • ಸರ್ಕಾರ ಹಾಗೂ ಕಾಪೋರೇಟ್ ಸಂಸ್ಥೆಗಳ ಸಹಭಾಗಿತ್ವ
  • ಕೌಟುಂಬಿಕ ಹಾಗೂ ಸಾಮಾಜಿಕ ಬಾಂಧವ್ಯ
  • ಕೌಶಲಾಭಿವೃದ್ದಿ
  • ಸಮುದಾಯದ ಸಹಕಾರ
  • ಸಂಘಟನಾ ಸಾಮರ್ಥ್ಯ ಹಾಗೂ ಭಾಗವಹಿಸುವಿಕೆ
  • ಶಿಕ್ಷಣ, ಉದ್ಯೋಗ ಮತ್ತು ಕ್ರೀಡೆ
  • ದೇಶ ಹಾಗೂ ನಂಬಿಕೆಗಳ ಬಗ್ಗೆ ಗೌರವ

ನೀತಿ ಉದ್ದೇಶಗಳು?

  • ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಡ್ರಗ್ಸ್, ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಅಪರಾಧ ಮನೋಭಾವ ಹೆಚ್ಚಾಗುತ್ತಿದೆ. ಯುವಕರು ದಾರಿ ತಪ್ಪದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಹಾಗೂ ಬೇರೆ ಬೇರೆ ಜವಾಬ್ದಾರಿಗಳಲ್ಲಿ ತೊಡಗಿಕೊಳ್ಳಲು ಅವಕಾಶ ಕಲ್ಪಿಸಿಕೊಡುವುದು.
  • ತಂತ್ರಜ್ಞಾನ ಹಾಗೂ ಆವಿಷ್ಕಾರಗಳ ಬಗ್ಗೆ ಆದ್ಯತೆ ನೀಡುವುದು.
  • ಯುವ ಸಂಘಗಳ ಮೂಲಕ ಕ್ರೀಡೆಯಲ್ಲಿ ತೊಡಗುವಂತೆ ಮಾಡಿ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡುವಂತೆ ನೋಡಿಕೊಳ್ಳುವುದು.
  • ಉನ್ನತ ಶಿಕ್ಷಣಕ್ಕೆ ಅಗತ್ಯವಾದ ಅವಕಾಶಗಳ ಬಗ್ಗೆ ಮನವರಿಕೆ ಮಾಡಿಕೊಡುವುದು.
  • ಉದ್ಯೋಗಕ್ಕೆ ಅಗತ್ಯ ಕೌಶಲವನ್ನು ನೀಡುವುದು, ಸ್ವ ಉದ್ಯೋಗಕ್ಕೆ ಇರುವ ಸವಲತ್ತುಗಳ ಬಗ್ಗೆ ವಿವರಣೆ ನೀಡುವುದು. ಸಾಲ ಹಾಗೂ ಇತರ ಸೌಲಭ್ಯಗಳು ಸಿಗುವುದಂತೆ ನೋಡಿಕೊಳ್ಳುವುದು. ಆ ಮೂಲಕ ಉದ್ಯಮಶೀಲರಾಗುವಂತೆ ಪ್ರೋತ್ಸಾಹಿಸುವುದು.
  • ಸಾಮಾಜಿಕ ಮೌಲ್ಯಗಳನ್ನು ತಿಳಿಸುವ ಮೂಲಕ ರಾಷ್ಟ್ರೀಯ ಮನೋಭಾವ ಬೆಳೆಸುವುದು. ಅದರ ಮೂಲಕ ಭಾರತೀಯ ಸಂಸ್ಕೃತಿ ರಕ್ಷಣೆ ಮಾಡುವುದು.
  • ಆರೋಗ್ಯ ಮತ್ತು ಆಹಾರದ ವಿಚಾರದಲ್ಲಿ ಎಚ್ಚರಿಕೆ ಮೂಡಿಸುವುದು.
  • ರಾಜಕೀಯ ಹಾಗೂ ಆಡಳಿತಕ್ಕೆ ಅಗತ್ಯ ನಾಯಕತ್ವದ ಗುಣ ಬೆಳೆಸುವುದು.
  • ಸಮಾಜದಲ್ಲಿ ಅಶಾಂತಿ ತಲೆ ಎತ್ತದಂತೆ ಜಾಗೃತಗೊಳಿಸುವುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net