

ವಿನ್ಯಾಸಕಾರ ಹಾಗೂ ಯೋಜಕರಾಗಿ ವಾಸ್ತುಶಿಲ್ಪಿ: ವಿನ್ಯಾಸ ಮತ್ತು ಯೋಜನೆ ಅಗತ್ಯವಿರುವ ಪ್ರತಿಯೊಂದು ಇಲಾಖೆಯಲ್ಲಿ ವಾಸ್ತುಶಿಲ್ಪಿ ಇರುವುದು ಅತ್ಯಗತ್ಯ. ಮಾನವಶಾಸ್ತ್ರ, ಮಾನವ ದೇಹದ ಭೌತಿಕ ಗುಣಲಕ್ಷಣ ಶಾಸ್ತ್ರ (ಆಂಥ್ರೊಪೊಮೆಟ್ರಿಕ್ಸ್), ಮಾನವ ಸಮಾಜಶಾಸ್ತ್ರ, ದಿಕ್ಕುಗಳ ಮಹತ್ವ, ಮಾನವ ದೇಹದ ಮೇಲೆ ಸೂರ್ಯ ವಿಕಿರಣದ ಪ್ರಭಾವ, ಬಣ್ಣಗಳ ಪರಿಣಾಮ, ಶಕ್ತಿಯ ಮೂಲ ಪಂಚಭೂತಗಳಾದ ಮಣ್ಣು (ಭೂಮಿ), ನೀರು, ಬೆಳಕು+ಉಷ್ಣ (ಅಗ್ನಿ), ಗಾಳಿ ಮತ್ತು ಧ್ವನಿಗಳ ಪ್ರಭಾವ- ಈ ಎಲ್ಲ ವಿಷಯಗಳ ಅರಿವು ಅವರಿಗೆ ಇರುವುದರಿಂದ ಅವರ ಉಪಸ್ಥಿತಿ ಅಗತ್ಯವಾಗುತ್ತದೆ. ಸಣ್ಣ ಹಳ್ಳಿಯಿಂದ ಹಿಡಿದು ಮಹಾನಗರಗಳವರೆಗೆ ಯೋಗ್ಯ ವಸತಿ ಪ್ರದೇಶಗಳನ್ನು ವಿನ್ಯಾಸಗೊಳಿಸುವಲ್ಲಿ ಆರ್ಕಿಟೆಕ್ಟ್ ಪಾತ್ರ ಮಹತ್ವದ್ದಾಗುತ್ತದೆ. ನಗರದ ಆರೋಗ್ಯ, ಸಂಪತ್ತು ಮತ್ತು ಅರಿವಿನ ವಿಚಾರದಲ್ಲಿ ಒಬ್ಬ ವೈದ್ಯನಂತೆಯೂ ಅವರು ಕಾರ್ಯನಿರ್ವಹಿಸುತ್ತಾರೆ.
ಸಂಚಾರ ಮತ್ತು ಸಾರಿಗೆ: ಇದು ಪ್ರತಿಯೊಂದು ಬೆಳೆಯುತ್ತಿರುವ ನಗರದ ಸಮಸ್ಯೆಗಳಲ್ಲಿ ಒಂದಾಗಿದೆ. ಜನರು ಸಾಮಾನ್ಯವಾಗಿ ಹಳೆಯ ರಸ್ತೆಗಳು ಮತ್ತು ಸರ್ಕಾರಗಳನ್ನು ದೂರುತ್ತಾರೆ. ಯಾವುದೇ ಒಬ್ಬ ದೂರದಷ್ಟಿಯ ನಾಯಕರಾದರೂ ಶಾಶ್ವತವಾಗಿ ಅಲ್ಲದಿದ್ದರೂ ಭವಿಷ್ಯದ ಒಂದು ನಿರ್ದಿಷ್ಟ ಅವಧಿಯ ಬೆಳವಣಿಗೆ ಬಗ್ಗೆ ಚಿಂತಿಸಬಹುದಾಗಿದೆ.
ಸಂಚಾರ ಸಿಕ್ಕು: ಗ್ರಾಮೀಣ ಜನರು ದೊಡ್ಡ ಪ್ರಮಾಣದಲ್ಲಿ ರಾಜಧಾನಿ ನಗರಗಳಿಗೆ ವಲಸೆ ಹೋಗುತ್ತಿರುವುದು ಸಂಚಾರ ಸಿಕ್ಕು ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ. ಬಹುತೇಕ ಜಿಲ್ಲಾ ಕೇಂದ್ರಗಳು ಮತ್ತು ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಲ್ಲಿ ಇನ್ನೂ ಹಿಂದುಳಿದಿವೆ. ಕೆಲವು ನಗರಗಳ ಸುತ್ತ ಮಾತ್ರವೇ ಉಪನಗರಗಳನ್ನು ಅಭಿವೃದ್ಧಿಪಡಿಸುವ ಬದಲು ಎಲ್ಲ ಜಿಲ್ಲಾ ಮಟ್ಟಗಳಲ್ಲಿ ಮೂಲಸೌಕರ್ಯಗಳೊಂದಿಗೆ ಕೈಗಾರಿಕೆಗಳನ್ನು ಸ್ಥಾಪಿಸುವುದು ಒಂದು ಪ್ರಾಯೋಗಿಕ ಪರಿಹಾರವಾಗುತ್ತದೆ. ಇದಕ್ಕೆ ‘ಸಮಗ್ರ ಯೋಜನೆ’ಯ ಅವಶ್ಯಕತೆಯಿದೆ.
ರಸ್ತೆ ಜಂಕ್ಷನ್ಗಳ ಯೋಜನೆ ಮತ್ತು ವಿನ್ಯಾಸ ರೂಪಿಸಲು ಚಲನೆಯ ದಿಕ್ಕುಗಳು, ವಾಹನಗಳ ವಿಧಗಳು ಮತ್ತು ಸಂಚಾರ ದಟ್ಟಣೆಯ ಜ್ಞಾನ ಸರಿಯಾಗಿ ಇರಬೇಕಾಗುತ್ತದೆ.
ರಸ್ತೆ ಜಂಕ್ಷನ್ಗಳ ನಾಲ್ಕೂ ಮೂಲೆಗಳಲ್ಲಿ (ಕಾರ್ನರ್) ಎಡ ತಿರುವಿಗಾಗಿ ವಾಹನಗಳ ಮುಕ್ತ ಚಲನೆಗೆ ಅವಕಾಶವಿರಬೇಕು.
ರಸ್ತೆಗಳು ಖಾಸಗಿ ಆಸ್ತಿಯಲ್ಲವಾದ್ದರಿಂದ ರಸ್ತೆಗಳ ಎರಡೂ ಬದಿಗಳಲ್ಲಿ ವಾಹನಗಳ ನಿಲುಗಡೆ ಕಡ್ಡಾಯವಾಗಿ ನಿಲ್ಲಿಸಬೇಕು. ಖಾಸಗಿ ವಾಹನಕ್ಕೆ ಅವುಗಳ ಮಾಲೀಕರ ಜಾಗದ ಆವರಣದೊಳಗೆ ರ್ಪಾಂಗ್ ವ್ಯವಸ್ಥೆ ಇರಬೇಕು.
ಮೇಲಿನ ನಿಯಮವನ್ನು ಅನುಷ್ಠಾನ ಗೊಳಿಸಬೇಕಾದರೆ ಸರ್ಕಾರವು ಅನುಕೂಲಕರ ಜಾಗದಲ್ಲಿ (1 ಕಿಮೀ ಫಾಸಲೆಯೊಳಗಡೆ) ಸಾರ್ವಜನಿಕ ರ್ಪಾಂಗ್ಗೆ ವ್ಯವಸ್ಥೆ ಕಲ್ಪಿಸಬೇಕು.
ಬಹುತೇಕ ಎಲ್ಲ ನೆರೆಹೊರೆ ಪ್ರದೇಶಗಳಲ್ಲಿ ಅನೇಕ ಬಯಲುಗಳು ಮತ್ತು ಉದ್ಯಾನಗಳು (ಪಾರ್ಕ್) ಇರುತ್ತವೆ. ಈಗಿರುವ ಗಿಡಮರಗಳ ಪರಿಸರವನ್ನು ಹಾಳುಗೆಡವದೆ ಬಹು-ಮಟ್ಟದ ರ್ಪಾಂಗ್ ಸ್ಥಳಗಳನ್ನು ರೂಪಿಸಲು ಸಾಧ್ಯವಿದೆ. ವಾಸ್ತುಶಿಲ್ಪಿಯ ಜಾಣ್ಮೆ ಇದರಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದೆ.
ರಸ್ತೆಗಳ ಮೇಲೆ ಮಳೆ ನೀರು ನಿಲ್ಲುವುದನ್ನು ತಡೆಯಲು ಅಂತರ್ ಸಂರ್ಪತ ಮಳೆ ನೀರು ಕೊಯ್ಲು ಹೊಂಡಗಳನ್ನು ರಸ್ತೆಗಳ ಅಡಿಯಲ್ಲೇ ನಿರ್ವಿುಸಬಹುದು. ಅವುಗಳನ್ನು ಬಯಲು ಪಾರ್ಕ್ಗಳಲ್ಲಿ ದೊಡ್ಡ ಟ್ಯಾಂಕ್ಗಳಿಗೆ ಸಂರ್ಪಸಬಹುದು. ಮುಚ್ಚಿದ ಈ ಟ್ಯಾಂಕ್ಗಳಲ್ಲಿ ಸಂಗ್ರಹಿತ ನೀರನ್ನು ಪಾರ್ಕ್ನ ಉದ್ದೇಶಕ್ಕೆ ಬಳಸಬಹುದಾಗಿದೆ.
ವಾಹನಗಳ ಭಾರವನ್ನು ಕೂಡ ತಡೆಯುವ ರೀತಿಯಲ್ಲಿ ಪಾದಚಾರಿ ಮಾರ್ಗಗಳನ್ನು ಹೆವಿ ಡ್ಯೂಟಿ ಇಂಟರ್ಲಾಕಿಂಗ್ ಬ್ಲಾಕ್ಗಳಿಂದ ನಿರ್ವಿುಸಬೇಕು.
ಎಲ್ಲ ಎಲೆಕ್ಟ್ರಿಕಲ್ ಮುಖ್ಯ ಮಾರ್ಗಗಳಿಗೆ ಭೂಗತ ವ್ಯವಸ್ಥೆ ಮಾಡಬೇಕು. ಬೀದಿದೀಪಗಳ ಕಂಬಗಳನ್ನು ಸೂಕ್ತ ಸ್ಥಳದಲ್ಲಿ ನೆಡಬೇಕು.
ಪಾದಚಾರಿ ರಸ್ತೆಗಳು (ಫೂಟ್ಪಾತ್) ಮತ್ತು ರಸ್ತೆಗಳು ಖಾಸಗಿ ಆಸ್ತಿಯಲ್ಲದಿರುವ ಕಾರಣ ಮನೆಗಳ ಪ್ರವೇಶ ಮತ್ತು ನಿರ್ಗಮನ ಗೇಟ್ಗಳು ಆವರಣದ ಒಳಗಡೆ ತೆರೆಯುವಂತೆ ಇರಬೇಕು. ಕಟ್ಟಡಗಳ ಮೇಲ್ಛಾವಣಿಗಳಿಂದ ಮಳೆ ನೀರು ಫೂಟ್ಪಾತ್ಗೆ ಬಿಡುವಂತೆ ವ್ಯವಸ್ಥೆ ಇರಬಾರದು.
ರಸ್ತೆಗಳಲ್ಲಿ ಧರಣಿ ಮತ್ತು ಮೆರವಣಿಗೆಗಳನ್ನು ಸರ್ಕಾರ ನಿಷೇಧಿಸಬೇಕು. ಪ್ರತಿಯೊಂದು ಕ್ಷೇತ್ರದಲ್ಲಿ ಅದಕ್ಕಾಗಿ ನಿರ್ದಿಷ್ಟ ಸ್ಥಳವನ್ನು ನಿಗದಿಪಡಿಸಬೇಕು.
ಭವಿಷ್ಯದ ವಿಸ್ತರಣೆಯನ್ನು ಗಮನದಲ್ಲಿಟ್ಟುಕೊಂಡು ಮೆಟ್ರೋ ಪ್ರಯಾಣಿಕರ ಅನುಕೂಲಕ್ಕೆಂದು ಸೂಕ್ತ ರ್ಪಾಂಗ್ ಸ್ಥಳವನ್ನು ರೂಪಿಸಬೇಕು.
ಸಾರ್ವಜನಿಕ ರಸ್ತೆಗಳಲ್ಲಿ ಸಂಚರಿಸುವ ಹಳೆಯ ವಾಹನಗಳಿಗೆ ಸರ್ಕಾರ ಕಟ್ಟುನಿಟ್ಟಿನ ನಿಯಮಗಳನ್ನು ಅನ್ವಯಿಸಬೇಕು. ವಿಶೇಷವಾಗಿ ಕಾರ್ಬನ್ ಸೂಸುವಿಕೆ ಮತ್ತು ಟಯರ್ ಸವೆತದ ಬಗ್ಗೆ ನಿಯಮಗಳನ್ನು ಜಾರಿಮಾಡಬೇಕು.
ವಾಹನ ಚಲಾಯಿಸುವಾಗ ಮೊಬೈಲ್ ಫೋನ್ನಲ್ಲಿ ಮಾತನಾಡುವುದನ್ನು ನಿಷೇಧಿಸಬೇಕು. ಅಂಥ ಚಾಲಕರ ಪರವಾನಗಿ ಸ್ವಲ್ಪ ಸಮಯ ಅಮಾನತು ಮಾಡಬೇಕು. ತಪ್ಪನ್ನು ಪುನರಾವರ್ತಿಸಿದರೆ ಲೈಸೆನ್ಸ್ಅನ್ನು ಕಾಯಂ ರದ್ದುಪಡಿಸಬೇಕು.
(ಲೇಖಕರು ವಾಸ್ತುಶಾಸ್ತ್ರ ತಜ್ಞರು)