ಆಕ್ಸಿಜನ್​ ಸಮಸ್ಯೆ ಜನಪ್ರತಿನಿಧಿಗಳಿಗೆ ಗೊತ್ತಿರ್ಲಿಲ್ವಾ? ಉಸಾಬರಿ ನಮಗೇಕೆ ಆಮೇಲೆ ರಾಜಕೀಯ ಮಾಡೋಣ ಅಂತ ಸುಮ್ಮನಿದ್ರಾ?: ಸಿ.ಟಿ.ರವಿ

CT Ravi
Published on

ಚಿಕ್ಕಮಗಳೂರು: ಚಾಮರಾಜನಗರ ಆಸ್ಪತ್ರೆಯಲ್ಲಿ ಅಕ್ಸಿಜನ್ ಸಮಸ್ಯೆಯಾಗುತ್ತಿದೆ ಎಂದು ಅಲ್ಲಿನ ಜನಪ್ರತಿನಿಧಿಗಳ ಗಮನಕ್ಕೆ ಬರೋದಿಲ್ವಾ? ಬಂದ್ರೆ ಚೀಫ್ ಸೆಕ್ರೆಟರಿಗೆ ಮಾತನಾಡೋಕೆ ಬರ್ತಿಲಿಲ್ವಾ? ಯಾರು ಗಮನಕ್ಕೆ ತಂದಿದ್ದಾರೆ. ಡಿಸಿ ಸ್ಪಂದಿಸ್ತಿಲ್ಲ ಅಂತಾನೇ ಇಟ್ಕೊಳಿ. ಡಿಸಿಗಿಂತ ಮೇಲಧಿಕಾರಿಗಳು ಇದ್ದಾರಲ್ಲ ಹೇಳೋಕೆ. ಪ್ರಭಾವಿಶಾಲಿಗಳು ಅಂತಾ ಸುತ್ತಮುತ್ತ ಜಿಲ್ಲೆಯಲ್ಲಿದ್ರಲ್ಲಾ... ಎಂದು ಜನಪ್ರತಿನಿಧಿಗಳ ಮೇಲೆಯೇ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹರಿಹಾಯ್ದರು.

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್​ ಕೊರತೆಯಿಂದ 20ಕ್ಕೂ ಹೆಚ್ಚು ಕರೊನಾ ಸೋಂಕಿತರು ಮೃತಪಟ್ಟ ಘಟನೆ ಕುರಿತು ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಸುತ್ತಮುತ್ತಲ ಜಿಲ್ಲೆಗಳ ವಿರೋಧ ಪಕ್ಷದ ಪ್ರಭಾವಿಗಳ ವಿರುದ್ಧ ಕಿಡಿ ಕಾರಿದರು. ಚಿಕ್ಕಮಗಳೂರಿನಲ್ಲಿ ಏನಾದ್ರೂ ಘಟನೆಯಾದ್ರೆ ನನ್ನ ಕರ್ತವ್ಯ ಇರಲ್ವಾ? ಜಿಲ್ಲೆಯಲ್ಲಿ ಆ್ಯಕ್ಟಿವ್ ಆಗಿ ಸಕ್ರಿಯವಾಗಿ ಇದ್ದಿದ್ದರೆ ಅಲ್ಲಿ ಅಕ್ಸಿಜನ್ ಸಮಸ್ಯೆಯಾಗುತ್ತಿರುವ ಬಗ್ಗೆ ಗಮನಕ್ಕೆ ಬರೋದಿಲ್ವಾ? ಬಂದ್ರೆ ಚೀಫ್ ಸೆಕ್ರೆಟರಿಗೆ ಮಾತನಾಡೋಕೆ ಬರ್ತಿಲಿಲ್ವಾ? ಯಾರು ಗಮನಕ್ಕೆ ತಂದಿದ್ದಾರೆ? ಯಾಕೆ ಜನಸಂಪರ್ಕ ಕಳೆದುಕೊಂಡಿದ್ದಾರಾ? ಅಥವಾ ಸದ್ಯಕ್ಕೆ ಸಮಸ್ಯೆ ನಿಭಾಯಿಸುವ ಉಸಾಬರಿ ಬೇಡ, ಆಮೇಲೆ ರಾಜಕಾರಣ ಮಾಡೋಣ ಅಂದುಕೊಂಡಿದ್ರಾ? ಎಂದು ತರಾಟೆಗೆ ತೆಗೆದುಕೊಂಡರು.

ಚಾಮರಾಜನಗರ ರೀತಿಯಲ್ಲಿ ಚಿಕ್ಕಮಗಳೂರಿನಲ್ಲಿ ಸಮಸ್ಯೆ ತಲೆದೋರುತ್ತಿತ್ತು. ಬಳ್ಳಾರಿಯಿಂದ ಆಕ್ಸಿಜನ್​ ಬರ್ಲಿಲ್ಲ. ಪರ್ಯಾಯ ಭದ್ರಾವತಿಯಿಂದ ತರಿಸಬೇಕು ಅಂದ್ರು ಡಿಸಿ. ದುಡ್ಡಿನ ಲೆಕ್ಕ ಆಮೇಲೆ ನೋಡೋಣ, ಮೊದಲು ತುಂಬಿಸಿ ಅಂದೆ. ಆಡಿಟ್, ಟೆಂಡರ್ ಅಗಿರೋದು ಬೇರೆ, ಕಾನೂನು ಹೇಳ್ಕೊಂಡು ಕೂತಿದ್ರೆ ಜೀವಗಳು ಹೋಗ್ತಿದ್ವು. ಹಾಗಾಗಿ ನಿರ್ಣಯ ತೆಗೆದುಕೊಂಡ್ವಿ ಎಂದು ಸಿ.ಟಿ.ರವಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net