

ಬೆಂಗಳೂರು: ವಿಶ್ವವನ್ನೇ ತಲ್ಲಣಕ್ಕೆ ದೂಡಿರುವ ಕೋವಿಡ್ ರೂಪಾಂತರಿ 'ಒಮಿಕ್ರಾನ್' ಕರ್ನಾಟಕಕ್ಕೆ ಕಾಲಿಟ್ಟಿದ್ದು, ದೇಶದ ಜನರಲ್ಲಿ ಆತಂಕ ಮೂಡಿಸಿದೆ. ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಇಂದು(ಶುಕ್ರವಾರ) ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದ್ದು, ಹಲವು ಕಟ್ಟುನಿಟ್ಟಿನ ನೂತನ ನಿಯಮಗಳನ್ನು ಜಾರಿ ಮಾಡಲಾಗಿದೆ. ಅದರಂತೆ ಪಾಲಕರು ಕರೊನಾ ವ್ಯಾಕ್ಸಿನ್ನ 2 ಡೋಸ್ ಅನ್ನೂ ಪಡೆದಿರಬೇಕು. ಇಲ್ಲವಾದರೆ ಅವರ ಮಕ್ಕಳು ಶಾಲೆಗಳಿಗೆ ಹೋಗುವಂತಿಲ್ಲ!
ಹೌದು, ಪೋಷಕರು 2 ಡೋಸ್ ಲಸಿಕೆ ಪಡೆದಿದ್ದರೆ ಮಾತ್ರವೇ ಮಕ್ಕಳಿಗೆ ಶಾಲೆ-ಕಾಲೇಜುಗಳಿಗೆ ಪ್ರವೇಶ ನೀಡಲಾಗುತ್ತದೆ. ಶಾಲೆಗಳಲ್ಲಿ ಕೆಲಸ ಮಾಡುವವರೂ ಕಡ್ಡಾಯವಾಗಿ ವ್ಯಾಕ್ಸಿನ್ ಪಡೆದಿರಬೇಕು. ಇನ್ನು ಶಾಲೆ- ಕಾಲೇಜುಗಳಲ್ಲಿ ತಾತ್ಕಾಲಿಕವಾಗಿ ಯಾವುದೇ ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವಂತಿಲ್ಲ ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಈ ಕುರಿತು ಸಭೆ ಬಳಿಕ ಆರ್. ಅಶೋಕ್ ಮಾಹಿತಿ ನೀಡಿದ್ದು, 18 ವರ್ಷದೊಳಗಿನ ಮಕ್ಕಳ ಎಲ್ಲ ಪಾಲಕರು ಕಡ್ಡಾಯವಾಗಿ ಲಸಿಕೆ ಪಡೆಯಬೇಕು ಎಂದರು. ಕ್ರಿಸ್ಮಸ್, ಹೊಸ ವರ್ಷದ ಬಗ್ಗೆ ಮತ್ತೊಮ್ಮೆ ಸಭೆ ನಡೆಲಾಗುವುದು ಎಂದು ತಿಳಿಸಿದರು.
ರೂಲ್ಸ್ ಫಾಲೋ ಮಾಡದಿದ್ರೆ ಬೀಳುತ್ತೆ ದಂಡ: ಮನೆಯಿಂದ ಹೊರಬರುವಾಗ ಮಾಸ್ಕ್ ಹಾಕದಿದ್ದರೆ ಬೆಂಗಳೂರಲ್ಲಿ 250 ರೂಪಾಯಿ ದಂಡ, ಪಾಲಿಕೇತರ ಸ್ಥಳಗಳಲ್ಲಿ 100 ರೂ. ದಂಡ ವಿಧಿಸಲಾಗುತ್ತೆ. ಮದುವೆಗಳಲ್ಲಿ 500ಕ್ಕಿಂತ ಹೆಚ್ಚು ಮಂದಿ ಪಾಲ್ಗೊಳ್ಳುವಂತಿಲ್ಲ. ಮಾಲ್, ಸಿನಿಮಾ ಸಿಬ್ಬಂದಿಗೂ ಎರಡು ಡೋಸ್ ಕಡ್ಡಾಯ ಎಂದು ಹೊಸ ನಿಮಯದಲ್ಲಿ ಸೂಚಿಸಲಾಗಿದೆ. ಇತ್ತೀಚಿಗೆ ಕೆಲ ಶಾಲಾ-ಕಾಲೇಜುಗಳಲ್ಲಿ ಕರೊನಾ ಸ್ಫೋಟಗೊಂಡಿದ್ದು, ಸೋಂಕಿತ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಪಾಲಕರು ಲಸಿಕೆ ಹಾಕಿಸಿಕೊಳ್ಳುವ ಜತೆಗೆ ಜಾಗ್ರತೆ ವಹಿಸಬೇಕು ಎಂದೂ ಸರ್ಕಾರ ಮನವಿ ಮಾಡಿದೆ.