ಬಿಹಾರ ಸಿಎಂ ನಿತೀಶ್​ಕುಮಾರ್​ ರಾಜೀನಾಮೆ: ಬಿಜೆಪಿ-ಜೆಡಿಯು ಮೈತ್ರಿ ಸರ್ಕಾರ ಪತನ

nitish kumar
Published on

ಬಿಹಾರ: ಮುಖ್ಯಮಂತ್ರಿ ನಿತೀಶ್​ಕುಮಾರ್​ ರಾಜೀನಾಮೆ ನೀಡಿದ್ದು, ಎನ್​ಡಿಎ-ಜೆಡಿಯು ಮೈತ್ರಿಕೂಟ ಪತನಗೊಂಡಿದೆ. ಶೀಘ್ರವೇ ಆರ್​ಜೆಡಿ(ರಾಷ್ಟ್ರೀಯ ಜನತಾ ದಳ) ಮತ್ತು ಜೆಡಿಯು ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲಿದೆ.

ಬಿಜೆಪಿ ನಾಯಕರೊಂದಿಗೆ ಹಲವು ವಿಚಾರಕ್ಕೆ ಮುನಿಸಿಕೊಂಡಿದ್ದ ನಿತೀಶ್​ಕುಮಾರ್​ ಕೊನೆಗೂ ಬಿಜೆಪಿ ಜತೆಗಿನ ಮೈತ್ರಿಯಿಂದ ಹೊರ ಬಂದಿದ್ದಾರೆ. ಮಂಗಳವಾರ ಪಟನಾದಲ್ಲಿ ಜೆಡಿಯು ಶಾಸಕರು, ಪರಿಷತ್​ ಸದಸ್ಯರು ಮತ್ತು ಸಂಸದರೊಂದಿಗೆ ಸಭೆ ನಡೆಸಿದ ನಿತೀಶ್​, ಅಂತಿಮವಾಗಿ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. ಅತ್ತ ಆರ್​ಜೆಡಿ ನಾಯಕ ತೇಜಸ್ವಿ ಯಾದವ್​ ಕೂಡ ಪಕ್ಷದ ಶಾಸಕರು ಮತ್ತು ಸಂಸದರ ಜತೆ ಸಭೆ ನಡೆಸಿದ್ದಾರೆ. ಶೀಘ್ರವೇ ಆರ್​ಜೆಡಿ ಮತ್ತು ಜೆಡಿಯೂ ಮೈತ್ರಿ ಸರ್ಕಾರ ರಚನೆಯಾಗಲಿದೆ. ಆರ್​ಜೆಪಿ ಪಕ್ಷದ ಸದಸ್ಯರು ಬೆಂಬಲ ಸೂಚಿಸಿ ಪತ್ರವನ್ನು ರಾಜ್ಯಪಾಲರಿಗೆ ರವಾನಿಸಿದ್ದಾರೆ.

ನಿತೀಶ್ ಆಕ್ರೋಶಕ್ಕೆ ಕೆಲ ಕಾರಣಗಳು

– ವಿಧಾನಸಭೆ ಸ್ಪೀಕರ್ ವಿಜಯ್ ಕುಮಾರ್​ರನ್ನು (ಬಿಜೆಪಿ ಶಾಸಕ) ಹುದ್ದೆಯಿಂದ ಕೆಳಗಿಳಿಸಬೇಕು ಎಂಬ ಬೇಡಿಕೆಗೆ ಒಪ್ಪಿಲ್ಲ.

– ರಾಜ್ಯ ಮಂತ್ರಿಮಂಡಲಕ್ಕೆ ಬಿಜೆಪಿ ಶಾಸಕರನ್ನು ಆಯ್ಕೆ ಮಾಡುವ ವೇಳೆ ತಮ್ಮ ಅಭಿಪ್ರಾಯಕ್ಕೆ ಆದ್ಯತೆ ಸಿಗುತ್ತಿಲ್ಲ.

– ಅಮಿತ್ ಷಾ ಪ್ರಾಬಲ್ಯ ತಪ್ಪಿಸುವುದು ನಿತೀಶ್ ಉದ್ದೇಶ. ಆದರೆ ಇದು ಸಾಧ್ಯವಾಗುತ್ತಿಲ್ಲ.

– ಬಿಹಾರದಲ್ಲಿ ಜಾತಿ ಆಧರಿತ ಜನಗಣತಿ ಮಾಡಬೇಕು ಎಂಬ ಬೇಡಿಕೆಗೆ ಕೇಂದ್ರದಿಂದ ಸೂಕ್ತ ಸ್ಪಂದನೆ ಸಿಗಲಿಲ್ಲ.

– ಏಕಕಾಲದಲ್ಲಿ ಲೋಕಸಭೆ, ವಿಧಾನಸಭೆ ಚುನಾವಣೆ ನಡೆಯಬೇಕು ಎಂಬ ಕೇಂದ್ರದ ಪ್ರತಿಪಾದನೆ ನಿತೀಶ್​ಗೆ ಇಷ್ಟವಾಗಲಿಲ್ಲ.

ರಾಜೀನಾಮೆ ಬಳಿಕ ಮಾತನಾಡಿದ ನಿತೀಶ್​ ಕುಮಾರ್​, ನಾವು ಎನ್​ಡಿಎ ಮೈತ್ರಿಕೂಟ ತೊರೆದಿದ್ದೇವೆ. ನಮ್ಮ ಶಾಸಕರು, ಸಂಸದರ ಜತೆ ಚರ್ಚಿಸಿಯೇ ಈ ತೀರ್ಮಾನ ತೆಗೆದುಕೊಂಡಿದ್ದೇವೆ. ಎನ್​ಡಿಎ ಜತೆ ಮೈತ್ರಿ ಯಾರಿಗೂ ಬೇಕಿಲ್ಲ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net