ಅಂಬೆಗಾಲಿಡುತ್ತ ಮನೆಯ ಬಾಗಿಲು ದಾಟಿ ರಸ್ತೆಗೆ ಬಂದ 9 ತಿಂಗಳ ಮಗುವಿನ ದುರ್ಮರಣ ಅಲ್ಲೇ ಕಾದಿತ್ತು..

Child Death 16 Jan 20
Published on

ಆಲಪ್ಪುಳ: ಅದು ವಾಹನಗಳು ಸಂಚರಿಸುವ ರಸ್ತೆಯ ಪಕ್ಕದಲ್ಲಿರುವ ಮನೆ. ಆ ಮನೆಯಲ್ಲೊಂದು 9 ತಿಂಗಳ ಪುಟ್ಟ ಹೆಣ್ಣು ಮಗು. ಆಡುತ್ತ ಆಡುತ್ತ ಅಂಬೆಗಾಲಿಕ್ಕುತ್ತ ರಸ್ತೆಗೆ ಬಂತು..ಆದರೆ ಅದರ ದುರ್ಮರಣ ಅಲ್ಲೇ ಕಾದಿತ್ತು.

ಆಲಪ್ಪುಳದ ಕರಲಗಂ​ನಲ್ಲಿ ದುರ್ಘಟನೆ ನಡೆದಿದೆ. ಶಿವಾಂಗಿ ಎಂಬ 9 ತಿಂಗಳ ಪುಟ್ಟ ಮಗುವಿಗೆ ಬುಧವಾರ ಸಂಜೆ 6.30ರ ಸಮಯದಲ್ಲಿ ಕಾರೊಂದು ಡಿಕ್ಕಿಯಾಗಿ ಅದು ಮೃತಪಟ್ಟಿದೆ. ಶಿವಾಂಗಿ ಅಂಬೆಗಾಲಿಡುತ್ತ ಮನೆಯ ಹೊಸ್ತಿಲು ದಾಟಿ ರಸ್ತೆಗೂ ಬಂದುಬಿಟ್ಟಿದ್ದಳು. ಆದರೆ ಸ್ವಲ್ಪ ಕತ್ತಲಾಗಿದ್ದರಿಂದ ಅವಳು ಹೋಗಿದ್ದು ಯಾರಿಗೂ ಕಾಣಿಸಲೇ ಇಲ್ಲ.

ಅಪಘಾತವಾದ ಕೂಡಲೇ ಮಗುವನ್ನು ತಾಯಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಪ್ರಯೋಜನವಾಗಲಿಲ್ಲ. ಮಗು ಉಳಿಯಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಸೆಪ್ಟೆಂಬರ್​ನಲ್ಲಿ ಕೂಡ ಇಂಥದ್ದೇ ಒಂದು ಅವಘಡ ನಡೆದಿತ್ತು. ಚಲಿಸುತ್ತಿದ್ದ ಜೀಪಿನ ಮೇಲೆ ತಾಯಿ ತನ್ನ ಒಂದು ವರ್ಷದ ಮಗುವನ್ನು ಕೂರಿಸಿಕೊಂಡು ಕುಳಿತಿದ್ದಳು. ಆದರೆ ಆ ಮಗು ತಾಯಿಯ ಮಡಿಲಿನಿಂದ ಜಾರಿ ದಟ್ಟ ಅರಣ್ಯದೊಳಗೆ ಬಿದ್ದಿತ್ತು. ಆದರೆ ಅದಕ್ಕೆ ಹೆಚ್ಚೇನೂ ಗಾಯವಾಗಿರಲಿಲ್ಲ. ಅಂಬೆಗಾಲಿನಲ್ಲಿ ನಡೆಯುತ್ತ ಇಡುಕ್ಕಿಯ ರಾಜಮಾಲಾ ಚೆಕ್​ಪೋಸ್ಟ್​ ಬಳಿ ಹೋಗಿತ್ತು. ಬಳಿಕ ಅದನ್ನು ರಕ್ಷಿಸಲಾಗಿತ್ತು. (ಪಿಟಿಐ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net