

ಬೆಂಗಳೂರು: ಐಸಿಸ್ ಉಗ್ರ ಸಂಘಟನೆ ಜತೆ ನಂಟಿನ ಪ್ರಕರಣ ಸಂಬಂಧ ಕರ್ನಾಟಕ ಸೇರಿ ದೇಶದ 6 ರಾಜ್ಯಗಳಲ್ಲಿ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದು, ಹಲವರನ್ನ ವಶಕ್ಕೆ ಪಡೆದಿದ್ದಾರೆ. ತುಮಕೂರಲ್ಲಿ ಓರ್ವ ವಿದ್ಯಾರ್ಥಿ, ಭಟ್ಕಳದಲ್ಲಿ ಸೋಹೋದರರಿಬ್ಬರನ್ನ ವಶಕ್ಕೆ ಪಡೆದು ಕರೆದೊಯ್ದಿರುವ ಎನ್ಐಎ ತಂಡ, ವಿಚಾರಣೆ ಮುಂದುವರಿಸಿದೆ.
6 ರಾಜ್ಯಗಳಲ್ಲಿ ಒಟ್ಟು 13 ಕಡೆ ದಾಳಿ ನಡೆಸಿ ಎನ್ಐಎ ಶೋಧಕಾರ್ಯ ನಡೆಸಿದೆ. ಕರ್ನಾಟಕದ ತುಮಕೂರು ಮತ್ತು ಭಟ್ಕಳದಲ್ಲಿ, ಮಧ್ಯಪ್ರದೇಶದ ಭೂಪಾಲ್ ಮತ್ತು ರಾಯ್ ಸೇನ್ನಲ್ಲಿ, ಗುಜರಾತ್ನ ಬರೂಚ್, ಸೂರತ್, ನವಸಾರಿ, ಅಹ್ಮದಾಬಾದ್ನಲ್ಲಿ, ಬಿಹಾರದ ಅರಾರಿಯದಲ್ಲಿ, ಮಹಾರಾಷ್ಟ್ರದ ಕೊಲ್ಲಾಪುರ ಮತ್ತು ನಾಂದೇಡ್ನಲ್ಲಿ, ಉತ್ತರ ಪ್ರದೇಶದ ದಿಯೋಬಂಡ್ನಲ್ಲಿ ದಾಳಿ ನಡೆಸಿದ್ದು, ಮಹತ್ವದ ದಾಖಲೆಗಳನ್ನು ಪತ್ತೆ ಹಚ್ಚಲಾಗಿದೆ. ಎನ್ಐಎ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
ತುಮಕೂರಿನ ಎಚ್ಎಂಎಸ್ ಯುನಾನಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಮೆಡಿಕಲ್ ವಿದ್ಯಾರ್ಥಿ ಸಾಜೀದ್ ಎಂಬಾತನನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈತ ತುಮಕೂರಿನ ಸದಾಶಿವನಗರದ 7ನೇ ಮುಖ್ಯರಸ್ತೆಯಲ್ಲಿ 8 ತಿಂಗಳ ಹಿಂದಷ್ಟೇ ಮನೆ ಬಾಡಿಗೆ ಪಡೆದು ವಾಸವಿದ್ದ. ಉತ್ತರ ಕನ್ನಡ ಜಿಲ್ಲೆ ಭಟ್ಕಳದ ಮನೆಯೊಂದರ ಮೇಲೂ ದಾಳಿ ಮಾಡಿರುವ ಎನ್ಐಎ ಅಧಿಕಾರಿಗಳು ಅಬ್ದುಲ್ ಮುಖ್ತದರ್(30) ಎಂಬಾತನ ವಶಕ್ಕೆ ಪಡೆದಿದ್ದಾರೆ. ಈತನ ಸಹೋದರನನ್ನೂ ವಿಚಾರಣೆಗೆ ಕರೆದೊಯ್ದಿದ್ದಾರೆ.