ಮೇಲ್ಸೇತುವೆಯಿಂದ ಜಿಗಿದು ನವವಿವಾಹಿತ ಆತ್ಮಹತ್ಯೆಗೆ ಶರಣು

Crime Logo
Published on

ಬೆಂಗಳೂರು: ನಾಯಂಡಹಳ್ಳಿ ಮೇಲ್ಸೇತುವೆಯಿಂದ ಜಿಗಿದು ನವವಿವಾಹಿತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಉಲ್ಲಾಳ ಸಮೀಪದ ಸೊಣ್ಣೇನಹಳ್ಳಿ ನಿವಾಸಿ ನವೀನ್(೩೦) ಮೃತ. ಶುಕ್ರವಾರ ಬೆಳಗ್ಗೆ ಈ ಘಟನೆ ನಡೆದಿದೆ. ನವೀನ್ ಕರ್ನಾಟಕ ವಿದ್ಯುತ್ ಕಾರ್ಖಾನೆಯಲ್ಲಿ(ಕವಿಕಾ) ಕಳೆದ ಮೂರು ತಿಂಗಳಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ. ಬೆಳಗ್ಗೆ ಸುಮಾರು ೮.೩೦ಕ್ಕೆ ನಾಯಂಡಹಳ್ಳಿ ಮೇಲ್ಸೇತುವೆಯಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿ ಬಳಿಕ ಏಕಾಏಕಿ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ನವೀನ್ ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಬೆಳಗ್ಗೆ ಕೆಲಸಕ್ಕೆ ತೆರಳುವುದಾಗಿ ಮನೆಯಲ್ಲಿ ತಿಳಿಸಿ ದ್ವಿಚಕ್ರ ವಾಹನದಲ್ಲಿ ಮನೆಯಿಂದ ಹೊರಟ್ಟಿದ್ದು, ಮಾರ್ಗ ಮಧ್ಯೆ ನಾಯಂಡಹಳ್ಳಿ ಮೇಲ್ಸೇತುವೆಯಲ್ಲಿ ದ್ವಿಚಕ್ರ ವಾಹನ ನಿಲುಗಡೆ ಮಾಡಿ ಬಳಿಕ ಏಕಾಏಕಿ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವೇಳೆ ಅಲ್ಲೇ ಸಂಚಾರ ನಿರ್ವಹಣೆ ಕರ್ತವ್ಯದಲ್ಲಿ ನಿರತರಾಗಿದ್ದ ಸಂಚಾರ ಪೊಲೀಸರು ಹಾಗೂ ಸಾರ್ವಜನಿಕರು ಓಡಿ ಬಂದು ರಕ್ತದ ಮಡುವಿನಲ್ಲಿ ಬಿದ್ದಿದ್ದ ನವೀನ್‌ನನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ. ಪರೀಕ್ಷಿಸಿದ ವೈದ್ಯರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ನವೀನ್ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಆಸ್ಪತ್ರೆಗೆ ಬಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ನವೀನ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆತನ ಬಳಿ ಯಾವುದೇ ಮರಣಪತ್ರವೂ ಸದ್ಯಕ್ಕೆ ಸಿಕ್ಕಿಲ್ಲ. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net