

ಜೆರುಸಲೇಂ: ಮುಂದಿನ ಕೆಲವು ತಿಂಗಳಲ್ಲಿ ಕರೊನಾ ಸೋಂಕಿನ ಒಮಿಕ್ರಾನ್ ವೈರಸ್ನ ಉಪತಳಿಗಳು ಮುಕ್ತಾಯಗೊಳ್ಳಬಹುದು. ಆದರೆ ಬೇಸಿಗೆ ಕಾಲದಲ್ಲಿ ಡೆಲ್ಟಾ ಅಥವಾ ಬೇರೆ ಯಾವುದಾದರೂ ಕರೊನಾ ವೈರಸ್ನಿಂದಾಗಿ ಸಾಂಕ್ರಾಮಿಕತೆಯ ಹೊಸ ಅಲೆ ಉಂಟಾಗಬಹುದು ಎಂದು ಇಸ್ರೇಲ್ನಲ್ಲಿ ನಡೆಸಲಾದ ಅಧ್ಯಯನವೊಂದರ ಲಿತಾಂಶ ಎಚ್ಚರಿಕೆ ನೀಡಿದೆ.
ಡೆಲ್ಟಾ ತನ್ನ ಹಿಂದಿನ ಉಪತಳಿಗಳನ್ನು ನಾಶ ಮಾಡಿದಂತೆ ಒಮಿಕ್ರಾನ್ ತನ್ನ ಅಪಾಯಕಾರಿ ಉಪಪ್ರಭೇದಗಳನ್ನು ಸ್ಥಗಿತಗೊಳಿಸಿಲ್ಲ. ಅವು ಮತ್ತೆ ತಲೆಯೆತ್ತುವ ಆತಂಕವಿದೆ ಎಂದು "ಸೈನ್ಸ್ ಆ್ ಟೋಟಲ್ ಎನ್ವಿರಾನ್ಮೆಂಟ್' ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿ ಹೇಳಿದೆ. ಇಸ್ರೇಲ್ನ ನೆಗೆವ್ನ ಬೆನ್&ಗುರಿಯಾನ್ ವಿಶ್ವವಿದ್ಯಾಲಯ (ಬಿಜಿಯು) ಸಂಶೋಧಕರು ಅಧ್ಯಯನ ನಡೆಸಿದ್ದರು.
ಬೀಜಿಂಗ್ನಲ್ಲಿ ಸೆಮಿಲಾಕ್ಡೌನ್: ವೇಗವಾಗಿ ಹರಡುವ ಒಮಿಕ್ರಾನ್ ಪ್ರಭೇದವನ್ನು ಕಟ್ಟಿ ಹಾಕಲು ಪ್ರಯಾಸ ಪಡುತ್ತಿರುವ ಚೀನಾದ ಅಧಿಕಾರಿಗಳು, ಕಠಿಣ ಕ್ರಮಗಳ ಅಂಗವಾಗಿ ಬುಧವಾರ ರಾಜಧಾನಿ ಬೀಜಿಂಗ್ನಲ್ಲಿ ಸೆಮಿಲಾಕ್ಡೌನ್ ಜಾರಿಗೊಳಿಸಿದ್ದಾರೆ. ಅನೇಕ ಮೆಟ್ರೋ ಸ್ಟೇಷನ್ಗಳು, ಶಾಲೆಗಳು, ರೆಸ್ಟೋರೆಂಟ್ಗಳು ಹಾಗೂ ವಾಣಿಜ್ಯ ಸಂಕೀರ್ಣಗಳನ್ನು ಅಧಿಕಾರಿಗಳು ಮುಚ್ಚಿದ್ದಾರೆ. ಅತ್ತ ದೇಶದ ಆರ್ಥಿಕ ಚಟುವಟಿಕೆಗಳ ಕೇಂದ್ರ ಶಾಂಘೈಯಲ್ಲಿ ತಿಂಗಳಾನುಗಟ್ಟಲೆಯಿಂದ ಅನುಷ್ಠಾನದಲ್ಲಿರುವ ರ್ನಿಬಂಧಗಳು ಮುಂದುವರಿದಿವೆ. ಬುಧವಾರ ಬೆಳಿಗ್ಗೆ ವರೆಗಿನ 24 ಗಂಟೆ ಅವಧಿಯಲ್ಲಿ ಬೀಜಿಂಗ್ನಲ್ಲಿ ಕರೊನಾ ಸೋಂಕಿನ 53 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ರಾಜಧಾನಿಯ ಸೋಂಕಿತರ ಸಂಖ್ಯೆ 500ನ್ನು ಮೀರಿದೆ. ಮುನ್ನೆಚ್ಚರಿಕೆ ಕ್ರಮವಾಗಿ, ಶಾಲೆಗಳ ಪುನಾರಂಭವನ್ನು ಒಂದು ವಾರದ ಅವಧಿಗೆ ಮುಂದೂಡಲಾಗಿದೆ. ಬೀಜಿಂಗ್ನ ಒಟ್ಟು ಸಬ್ವೇ ಸ್ಟೇಷನ್ಗಳ ಪೈಕಿ ಶೇಕಡ 10 ಸ್ಟೇಷನ್ ಹಾಗೂ 158 ಬಸ್ ರೂಟ್ ಮುಚ್ಚಲಾಗಿದೆ.
ಮರಣ ಹೆಚ್ಚಳಕ್ಕೆ ಕರೊನಾ ಕಾರಣವಲ್ಲ
2019ಕ್ಕೆ ಹೋಲಿಸಿದರೆ 2020ರಲ್ಲಿ ದಾಖಲಾಗಿರುವ ಸಾವಿನ ಸಂಖ್ಯೆಯ ಏರಿಕೆಗೆ ಕರೊನಾವೇ ಸಂಪೂರ್ಣ ಕಾರಣವಲ್ಲ ಎಂದು ನೀತಿ ಆಯೋಗದ ಸದಸ್ಯ ವಿ.ಕೆ. ಪೌಲ್ ಬುಧವಾರ ಪ್ರತಿಪಾದಿಸಿದ್ದಾರೆ. ಭಾರತದಲ್ಲಿ ಕೋವಿಡ್ನಿಂದ "ಅಪಾರ ಪ್ರಮಾಣದಲ್ಲಿ' ಸಾವು ಸಂಭವಿಸಿದೆ ಎಂದು ಕೆಲವು ಸಂಸ್ಥೆಗಳು ವರದಿಗಳನ್ನು ಪ್ರಕಟಿಸುವುದನ್ನು ನಿಲ್ಲಿಸಬೇಕು ಎಂದು ಕೋವಿಡ್&19 ಕಾರ್ಯ ಪಡೆಯ ಮುಖ್ಯಸ್ಥರೂ ಆಗಿರುವ ಪೌಲ್ ಸಲಹೆ ಮಾಡಿದ್ದಾರೆ. 2020 ಜನವರಿಯಿಂದ 2021 ಡಿಸೆಂಬರ್ ನಡುವೆ ಭಾರತದಲ್ಲಿ ಸಂಭವಿಸಿರುವ ಕರೊನಾ ಸಾವಿನ ಸಂಖ್ಯೆ ವರದಿಯಾಗಿರುವುದಕ್ಕಿಂತ ಎಂಟು ಪಟ್ಟು ಹೆಚ್ಚಿದೆ ಎಂದು ಲ್ಯಾನ್ಸೆಟ್ ಈಚೆಗೆ ಮಾಡಿರುವ ವರದಿಯನ್ನು ಉದಾಹರಿಸಿದ ಪೌಲ್, ಈ ಪ್ರವೃತ್ತಿಯನ್ನು ನಿಲ್ಲಿಸಬೇಕೆಂದು ಕೋರಿದರು. ಕೇಂದ್ರ ಸರ್ಕಾರ ಮಂಗಳವಾರ, ಜನನ ಮತ್ತು ಮರಣ ವರದಿಗಳ ಆಧಾರದಲ್ಲಿ 2020ರ ಸಿವಿಲ್ ರಿಜಿಸ್ಟ್ರೆಶನ್ ವರದಿಯನ್ನು ಪ್ರಕಟಿಸಿತ್ತು.
3,205 ಹೊಸ ಕೇಸ್, 31 ಸಾವು
ಬುಧವಾರ ಬೆಳಿಗ್ಗೆ ವರೆಗಿನ 24 ಗಂಟೆ ಅವಧಿಯಲ್ಲಿ ಭಾರತದಲ್ಲಿ ಕರೊನಾ ಸೋಂಕಿನ 3,205 ಹೊಸ ಪ್ರಕರಣಗಳು ವರದಿಯಾಗಿದ್ದು 31 ಜನರು ಮರಣಿಸಿದ್ದಾರೆ. ಸಕ್ರಿಯ ಕೇಸ್ಗಳ ಸಂಖ್ಯೆ 19,509ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕೋವಿಡ್&19 ಸಾಂಕ್ರಾಮಿಕತೆಗೆ ದೇಶದಲ್ಲಿ ಬಲಿಯಾದವರ ಸಂಖ್ಯೆ 5,23,920ಕ್ಕೆ ತಲುಪಿದೆ. ದೈನಿಕ ಹಾಗೂ ಸಾಪ್ತಾಹಿಕ ಪಾಸಿಟಿವಿಟಿ ದರ ಅನುಕ್ರಮವಾಗಿ ಶೇಕಡ 0.98 ಹಾಗೂ ಶೇಕಡ 0.76 ಆಗಿದೆ.