

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾರಿರುವ ವಾಣಿಜ್ಯ ಸಮರಕ್ಕೆ ಮೂಲ ಕಾರಣವಾಗಿರುವ ಕಚ್ಚಾ ತೈಲದ ಆಮದು ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ‘ರಷ್ಯಾದಿಂದ ಇನ್ನು ಮುಂದೆ ಕಚ್ಚಾ ತೈಲ ಖರೀದಿಸುವುದಿಲ್ಲ ಎಂದು ನನ್ನ ಸ್ನೇಹಿತ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದಾರೆ. ಆದರೆ, ಈ ನಿಟ್ಟಿನಲ್ಲಿ ಕೆಲ ಪ್ರಕ್ರಿಯೆಗಳನ್ನು ಪೂರೈಸಬೇಕಾಗುತ್ತದೆ’ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ. ಆದರೆ, ರಷ್ಯಾದಿಂದ ಕಚ್ಚಾ ತೈಲ ಖರೀದಿ ನಿಲ್ಲಿಸುವ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಮತ್ತು ಟ್ರಂಪ್- ಪ್ರಧಾನಿ ನರೇಂದ್ರ ಮೋದಿಯವರ ನಡುವೆ ಈ ವಿಷಯದ ಕುರಿತಂತೆ ಯಾವುದೇ ಮಾತುಕತೆ ನಡೆದಿಲ್ಲ. ಇಂಧನ ಮಾರುಕಟ್ಟೆಯ ಅಸ್ಥಿರ ಸನ್ನಿವೇಶದಲ್ಲಿ ಭಾರತದ ಗ್ರಾಹಕರ ಹಿತಾಸಕ್ತಿ ಕಾಪಾಡುವುದೇ ನಮ್ಮ ಆದ್ಯತೆಯಾಗಿದೆ ಎಂದು ಭಾರತದ ವಿದೇಶಾಂಗ ಇಲಾಖೆ ಹೇಳಿದೆ. ಆದರೆ, ಭಾರತ ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ನಿಲ್ಲಿಸಿದರೆ ಯಾವೆಲ್ಲ ಪರಿಣಾಮಗಳಾಗಬಹುದು ಎಂಬ ಚರ್ಚೆ ಉದ್ಯಮವಲಯದಲ್ಲಿ ಈಗಾಗಲೇ ಪ್ರಾರಂಭವಾಗಿದೆ.
ಭಾರತ ಮತ್ತು ರಷ್ಯಾ ನಡುವೆ ಸ್ನೇಹ ವೃದ್ಧಿಗೊಂಡಿದೆ. ಅಮೆರಿಕಕ್ಕಿಂತ ಕಡಿಮೆ ದರದಲ್ಲಿ ರಷ್ಯಾ ಭಾರತಕ್ಕೆ ಕಚ್ಚಾ ತೈಲ ನೀಡುತ್ತಿದೆ. ಆದರೆ, ಯೂಕ್ರೇನ್ ಯುದ್ಧಕ್ಕೆ ರಷ್ಯಾ ಇದೇ ಹಣವನ್ನು ಬಳಸುತ್ತಿದೆ ಎಂದು ಮತ್ತೆ ಮತ್ತೆ ಆರೋಪಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿ ನಿಲ್ಲಿಸಬೇಕು ಎಂಬ ಒತ್ತಡ ಹೇರುತ್ತಲೇ ಇದ್ದಾರೆ. ಭಾರತ ಇದಕ್ಕೆ ಮಣಿಯದಿದ್ದಾಗ ಹೆಚ್ಚುವರಿ ಸುಂಕವನ್ನು ವಿಧಿಸಿದ್ದಾರೆ. ‘ಭಾರತ ರಷ್ಯಾದಿಂದ ತೈಲ ಆಮದು ನಿಲ್ಲಿಸಲಿದೆ’ ಎಂದು ಏಕಪಕ್ಷೀಯ ಹೇಳಿಕೆ ನೀಡಿ ಗೊಂದಲ ಹೆಚ್ಚಿಸಿದ್ದಾರೆ. ಭಾರತ-ಅಮೆರಿಕ ನಡುವೆ ವಾಣಿಜ್ಯ ಒಪ್ಪಂದ ಸಂಬಂಧಿತ ಮಾತುಕತೆ ಪ್ರಗತಿಯಲ್ಲಿರುವಾಗಲೇ, ಟ್ರಂಪ್ ಈ ಬಗೆಯ ಹೇಳಿಕೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಈ ನಡುವೆ ಭಾರತಕ್ಕೆ ರಷ್ಯಾದಿಂದ ಕಚ್ಚಾ ತೈಲ ಆಮದು ಸೆಪ್ಟೆಂಬರ್ನಲ್ಲಿ ಸ್ವಲ್ಪ ಕಡಿಮೆಯಾಗಿದ್ದರೂ ಈಗಲೂ ಈ ವಿಷಯದಲ್ಲಿ ಬೇರೆ ದೇಶಗಳಿಗಿಂತ ಆ ರಾಷ್ಟ್ರವೇ ಮುಂಚೂಣಿಯಲ್ಲಿದೆ. ಸೆಪ್ಟೆಂಬರ್ನಲ್ಲಿ ಭಾರತದ ಒಟ್ಟಾರೆ ಕಚ್ಚಾ ತೈಲ ಆಮದು ದಿನಕ್ಕೆ ಸುಮಾರು 47 ಲಕ್ಷ ಬ್ಯಾರೆಲ್ಗಳಾಗಿದ್ದು, ತಿಂಗಳಿಗೆ 2.2 ಲಕ್ಷ ಬ್ಯಾರೆಲ್ಗಳಷ್ಟು ಏರಿಕೆಯಾಗಿದೆ. ಈ ಪೈಕಿ, ರಷ್ಯಾದ ಕಚ್ಚಾ ತೈಲವು 16 ಲಕ್ಷ ಬ್ಯಾರೆಲ್ಗಳಾಗಿದ್ದು (ಶೇಕಡ 34ರಷ್ಟು ಪಾಲು) ಅತಿ ದೊಡ್ಡ ಪೂರೈಕೆದಾರನಾಗಿದೆ. ಆದರೆ 2025ರ ಮೊದಲ 8 ತಿಂಗಳಿನ ಸರಾಸರಿಗಿಂತ 1.6 ಲಕ್ಷ ಬ್ಯಾರೆಲ್ ಕಡಿಮೆಯಾಗಿದೆ ಎಂದು ಕೆಪ್ಲರ್ ಸಂಸ್ಥೆಯ ಅಂಕಿಅಂಶಗಳು ತಿಳಿಸಿವೆ. ಭಾರತಕ್ಕೆ ಇರಾಕ್ನಿಂದ 8.81 ಲಕ್ಷ ಬ್ಯಾರೆಲ್, ಸೌದಿ ಅರೇಬಿಯಾದಿಂದ 6.03 ಲಕ್ಷ ಬ್ಯಾರೆಲ್, ಯುಎಇಯಿಂದ 5.94 ಲಕ್ಷ ಬ್ಯಾರೆಲ್ ಮತ್ತು ಅಮೆರಿಕದಿಂದ 2.06 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಪೂರೈಕೆಯಾಗುತ್ತಿದೆ. ಜುಲೈ-ಸೆಪ್ಟೆಂಬರ್ ತ್ರೖೆಮಾಸಿಕದಲ್ಲಿ ರಷ್ಯಾದಿಂದ ತೈಲ ಖರೀದಿ ಕೊಂಚ ಕಡಿಮೆಯಾಗಿದ್ದರೂ, ಅದಕ್ಕೆ ಅಮೆರಿಕವು ಭಾರತದ ಸರಕುಗಳ ಮೇಲೆ ವಿಧಿಸಿರುವ ಸುಂಕ ಕಾರಣವಲ್ಲ. ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣಾ ಘಟಕಗಳಲ್ಲಿನ ವಾರ್ಷಿಘಕ ನಿರ್ವಹಣಾ ಚಟುವಟಿಕೆಗಳು ಮತ್ತು ಇತರ ಸಂದರ್ಭಗಳು ಇದಕ್ಕೆ ಕಾರಣ.
ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ನಿಲ್ಲಿಸಬೇಕು ಎಂದಾದರೆ ಭಾರತದ ಕಂಪನಿಗಳು ದೊಡ್ಡ ಮಟ್ಟದಲ್ಲಿ ಆರ್ಥಿಕ ಲಾಭವನ್ನು ಬಿಟ್ಟುಕೊಡಬೇಕಾಗುತ್ತದೆ. ಒಂದು ಅಂದಾಜಿನ ಪ್ರಕಾರ ದೇಶದ ವಾರ್ಷಿಕ ಆಮದು ವೆಚ್ಚವು 5 ಬಿಲಿಯನ್ ಡಾಲರ್ವರೆಗೆ (ಅಂದಾಜು 43 ಸಾವಿರ ಕೋಟಿ ರೂ.) ಹೆಚ್ಚಬಹುದು.
ಭಾರತವು ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದನ್ನು ತಕ್ಷಣಕ್ಕೆ ನಿಲ್ಲಿಸುವುದು ಸಾಧ್ಯವಾಗದ ಕೆಲಸ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸಾಮಾನ್ಯವಾಗಿ, ಕಚ್ಚಾ ತೈಲ ಆಮದಿನ ಕುರಿತಂತೆ 4-6 ವಾರಗಳ ಮೊದಲೇ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಹೀಗಾಗಿ, ನವೆಂಬರ್ ಅಂತ್ಯದವರೆಗಿನ ಆಮದು ಬಗ್ಗೆ ಈಗಾಗಲೇ ಒಪ್ಪಂದ ಆಗಿರುತ್ತದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿರುವುದು ನಿಜ ಎಂದಾದರೆ, ರಷ್ಯಾದಿಂದ ಕಚ್ಚಾ ತೈಲ ಆಮದು ನವೆಂಬರ್ ಮೂರು ಅಥವಾ ನಾಲ್ಕನೆಯ ವಾರದಿಂದ ಕೊನೆಗೊಳ್ಳಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ‘ರಷ್ಯಾದಿಂದ ಕಚ್ಚಾ ತೈಲ ಖರೀದಿ ನಿಲ್ಲಿಸಲು ಭಾರತ ಒಪ್ಪಿದೆ’ ಎಂದು ಟ್ರಂಪ್ ಅವರು ಹೇಳಿರುವುದು ರಾಜಕೀಯ ಮಾತಿನಂತೆ ಕಾಣುತ್ತಿದೆ ಎಂದು ವಿಶ್ಲೇಷಣಾ ಸಂಸ್ಥೆ ಕೆಪ್ಲರ್ ಹೇಳಿದೆ. ಅಕ್ಟೋಬರ್ನಲ್ಲಿ ಭಾರತವು ರಷ್ಯಾದಿಂದ ದಿನಕ್ಕೆ 18 ಲಕ್ಷ ಬ್ಯಾರಲ್ ಕಚ್ಚಾ ತೈ ಖರೀದಿ ಮಾಡಿದೆ ಎಂದು ಕೆಪ್ಲರ್ ಅಂದಾಜು ಮಾಡಿದೆ.
ಇತ್ತೀಚಿನ ವರ್ಷಗಳಲ್ಲಿ ಭಾರತ ಮತ್ತು ರಷ್ಯಾ ನಡುವಿನ ರಾಜತಾಂತ್ರಿಕ ಸಂಬಂಧ ಗಮನಾರ್ಹವಾಗಿ ಸುಧಾರಣೆಯಾಗಿದೆ. ಅಂತಾರಾಷ್ಟ್ರೀಯ ವಲಯದಲ್ಲಿ ಹೆಚ್ಚಿರುವ ಭಾರತದ ಶಕ್ತಿಯನ್ನು ಸರಿಯಾಗಿ ಗ್ರಹಿಸಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್, ಸ್ನೇಹವನ್ನು ಹೂಡಿಕೆಯ ಹಾದಿಯಲ್ಲೂ ವಿಸ್ತರಿಸಿದ್ದಾರೆ. ರಷ್ಯಾದ ಅತಿದೊಡ್ಡ ತೈಲ ಕಂಪನಿಯಾಗಿರುವ ರೊಸ್ನೆಫ್ಟ್ ಈಗಾಗಲೇ ಭಾರತದಲ್ಲಿ 20 ಬಿಲಿಯನ್ ಡಾಲರ್ (ಅಂದಾಜು 1.69 ಲಕ್ಷ ಕೋಟಿ ರೂಪಾಯಿ) ಹೂಡಿಕೆ ಮಾಡಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಕಂಪನಿಗಳು ತಯಾರಿಕಾ ಘಟಕಗಳನ್ನು ಸ್ಥಾಪಿಸುವ ಮೂಲಕ ಹೂಡಿಕೆ ಮಾಡಲಿವೆ. ಇದರಿಂದ ಉಭಯ ದೇಶಗಳ ಬಾಂಧವ್ಯದ ಹಾದಿ ಮತ್ತಷ್ಟು ವಿಸ್ತಾರವಾಗಲಿದೆ. 2024ರ ಜುಲೈನಲ್ಲಿ ರಷ್ಯಾಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ‘ಜಗತ್ತು ಆಹಾರ, ಇಂಧನ ಮತ್ತು ರಾಸಾಯನಿಕ ಗೊಬ್ಬರದ ಕೊರತೆಯಿಂದ ತತ್ತರಿಸುತ್ತಿದ್ದಾಗ ಈ ಯಾವುದೇ ಸಮಸ್ಯೆ ನಮ್ಮ ರೈತರಿಗೆ ಎದುರಾಗಲು ನಾವು ಬಿಡಲಿಲ್ಲ. ಈ ವಿಷಯದಲ್ಲಿ ರಷ್ಯಾ ಜತೆಗಿನ ನಮ್ಮ ಸ್ನೇಹ ಪ್ರಮುಖ ಪಾತ್ರ ವಹಿಸಿತು’ ಎಂದಿದ್ದರಲ್ಲದೆ, ಉಭಯ ದೇಶಗಳ ನಡುವಿನ ಇಂಧನ ಕ್ಷೇತ್ರದ ಸಹಕಾರದಿಂದ ಇಡೀ ಜಗತ್ತಿಗೆ ಒಳಿತಾಗಿದೆ ಎಂಬುದನ್ನು ಮೆಲುಕು ಹಾಕಿದ್ದರು. ‘ಭಾರತದಲ್ಲಿ ಹೂಡಿಕೆ ಮಾಡಲು ರಷ್ಯಾ ಸಿದ್ಧವಿದೆ’ ಎಂದು ಪುತಿನ್ ಹಲವು ವೇದಿಕೆಗಳಲ್ಲಿ ಪುನರುಚ್ಚರಿಸಿದ್ದಾರೆ. ‘ಭಾರತದ ನಾಯಕತ್ವವು, ಭಾರತ ಮೊದಲು ಎನ್ನುವ ನೀತಿಯನ್ನು ಪಾಲಿಸುತ್ತಿದೆ. ಹೀಗಾಗಿ ಭಾರತದ ಪ್ರಧಾನಿ ಮತ್ತು ಭಾರತ ಸರ್ಕಾರದ ಅಧಿಕಾರಿಗಳು ಸ್ಥಿರತೆಯನ್ನು ತರುತ್ತಿದ್ದಾರೆ. ಭಾರತದಲ್ಲಿನ ಹೂಡಿಕೆಗಳು ಲಾಭದಾಯಕ ಎಂಬುದು ನಮ್ಮ ನಂಬಿಕೆ’ ಎಂದೂ ಮಾಸ್ಕೋದಲ್ಲಿ 2024ರ ಡಿಸೆಂಬರ್ನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಸ್ಪಷ್ಟಪಡಿಸಿದ್ದಾರೆ.
ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿ ಕೊಳ್ಳುವಲ್ಲಿ ಎರಡನೆಯ ಸ್ಥಾನದಲ್ಲಿರುವ ಭಾರತವು ಆಮದನ್ನು ನಿಲ್ಲಿಸಿದರೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು 100 ಡಾಲರ್ವರೆಗೆ (ಪ್ರಸಕ್ತ 60-61 ಡಾಲರ್ ಇದೆ) ಹೆಚ್ಚಳವಾಗುವ ಅಪಾಯವಿದೆ. ಇದರ ಪರಿಣಾಮವಾಗಿ ಹಣದುಬ್ಬರವು ಜಗತ್ತಿನೆಲ್ಲೆಡೆ ಏರಿಕೆ ಕಾಣಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ನರೇಂದ್ರ ಮೋದಿ ಅವರು ನನ್ನ ಸ್ನೇಹಿತ. ನಮ್ಮಿಬ್ಬರ ನಡುವೆ ಅತ್ಯುತ್ತಮವಾದ ಸ್ನೇಹ ಸಂಬಂಧವಿದೆ. ಭಾರತ ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿರುವುದು ನಮಗೆ ಅಸಮಾಧಾನ ಮೂಡಿಸಿದೆ. ಈ ಹಣವನ್ನು ಬಳಸಿಕೊಂಡು ರಷ್ಯಾ ಯುದ್ಧದಲ್ಲಿ ತೊಡಗಿಕೊಂಡಿದೆ. ರಷ್ಯಾದಿಂದ ಕಚ್ಚಾ ತೈಲ ಖರೀದಿಸುವುದಿಲ್ಲ ಎಂದು ಮೋದಿ ಭರವಸೆ ನೀಡಿದ್ದಾರೆ. ಯೂಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ. ಚೀನಾ ಕೂಡ ಅದೇ ರೀತಿ ಮಾಡಬೇಕು. | ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ