

ತಮಿಳುನಾಡು: ತಮಿಳು ಚಿತ್ರರಂಗದ ಸೂಪರ್‌ಸ್ಟಾರ್, ತಲೈವಾ ರಜನಿಕಾಂತ್ ಅಭಿನಯದ 'ತಲೈವರ್ 170' ಚಿತ್ರದ ಟೈಟಲ್ನಲ್ಲಿ ಈಗ ಬದಲಾವಣೆಯಾಗಿದ್ದು, ರಜನಿ ಮುಂದಿನ ಸಿನಿಮಾಗೆ ಹೊಸ ಶೀರ್ಷಿಕೆ ಇಡಲಾಗಿದೆ ಎಂಬ ಸುದ್ದಿ ಸದ್ಯ ಕಾಲಿವುಡ್ನಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಇತ್ತೀಚೆಗಷ್ಟೇ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ 'ಜೈಲರ್' ಚಿತ್ರವು ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಅದ್ಭುತ ಯಶಸ್ಸನ್ನು ಗಳಿಸುವ ಮುಖೇನ ಬ್ಲಾಕ್‌ಬಸ್ಟರ್ ಚಿತ್ರವಾಗಿ ಹೊರಹೊಮ್ಮಿತು. ಸದ್ಯ ಇದೇ ಸಾಲಿಗೆ ತಲೈವಾ ನಟನೆಯ 'ತಲೈವರ್ 170' ಕೂಡ ಸೇರಲಿದೆ ಎಂಬ ಲೆಕ್ಕಾಚಾರಗಳನ್ನು ಮಾಡಿಕೊಂಡಿರುವ ರಜನಿ ಅಭಿಮಾನಿಗಳಿಗೆ ಇದೀಗ ಹೊಸ ಸುದ್ದಿಯೊಂದು ಸಾಕಷ್ಟು ಕುತೂಹಲ ಕೆರಳಿಸಿದೆ.
ಹೆಸರಾಂತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ನಡಿ ಮೂಡಿಬರಲಿರುವ ರಜನಿಕಾಂತ್ ಅವರ ಮುಂಬರುವ 'ತಲೈವರ್ 170' ಚಿತ್ರದ ಶೀರ್ಷಿಕೆಯಲ್ಲಿ ಬದಲಾವಣೆ ಕಂಡುಬಂದಿದ್ದು, 'ವೆಟ್ಟೈಯಾನ್' ಎಂಬ ಟೈಟಲ್ ಶೀಘ್ರವೇ ಅಧಿಕೃತವಾಗಿ ಘೋಷಣೆಯಾಗಲಿದೆ ಎಂದು ತಿಳಿಸಲಾಗಿದೆ.
ಟಿಜೆ ಜ್ಞಾನವೇಲ್ ನಿರ್ದೇಶನದ ಈ ಚಿತ್ರದಲ್ಲಿ ರಜನಿಕಾಂತ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ,(ಏಜೆನ್ಸೀಸ್).