ಸೇವಾ ಕ್ಷೇತ್ರದಲ್ಲಿ ನವ ಕ್ರಾಂತಿ

VV Samvaada
Published on

ಚಿಕ್ಕಮಗಳೂರಿನ ದಿ ಸೆರಾಯ್ ಸಭಾಂಗಣದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ಅವರೊಂದಿಗೆ ದಿವ್ಯ ಸಂಜೆ ಸಂವಾದ ಕಾರ್ಯಕ್ರಮವನ್ನು ವಿಜಯವಾಣಿ ಸಂಪಾದಕ ಕೆ.ಎನ್.ಚನ್ನೇಗೌಡ ನಡೆಸಿಕೊಟ್ಟರು.

ಆಧ್ಯಾತ್ಮಿಕ ಹಾಗೂ ಸಾಮಾಜಿಕ ಗುರುಗಳಾದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಉಚಿತ ಶಿಕ್ಷಣ ಜತೆಗೆ ಸಮಾಜಸೇವೆಯ ಮೂಲಕ ಧರ್ಮಜಾಗೃತಿ ಹಾಗೂ ಜನಸೇವೆಯಲ್ಲಿ ದಾಪುಗಾಲು ಇಟ್ಟಿದ್ದಾರೆ. ಇದೀಗ ವೈದ್ಯಕೀಯ ಶಿಕ್ಷಣ ಹಾಗೂ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾರಂಭಿಸುವ ಮೂಲಕ ಹೊಸ ಕ್ರಾಂತಿಯನ್ನೇ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಫಿನಾಡು ಚಿಕ್ಕಮಗಳೂರು ನಗರದ ದಿ ಸರಾಯ್ ಸಭಾಂಗಣದಲ್ಲಿ ಪ್ರಶಾಂತಿ ಬಾಲಮಂದಿರ ಟ್ರಸ್ಟ್​ನಿಂದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರೊಂದಿಗೆ ಗುರುವಾರದಂದು ದಿವ್ಯಸಂಜೆ ಸಂವಾದ ಕಾರ್ಯಕ್ರಮವನ್ನು ವಿಜಯವಾಣಿ ಸಂಪಾದಕ ಕೆ.ಎನ್.ಚನ್ನೇಗೌಡ ಅವರು ನಡೆಸಿಕೊಟ್ಟರು. 200ಕ್ಕೂ ಹೆಚ್ಚು ಶ್ರೋತೃಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಶ್ರೀ ಮಧುಸೂದನ ಸಾಯಿ ಅವರೊಂದಿಗಿನ ಸಂವಾದದ ಪೂರ್ಣ ವಿವರ ಇಲ್ಲಿದೆ.

ಕ್ಯಾಶ್​ ಕೌಂಟರ್ ಇಲ್ಲದ ಆಸ್ಪತ್ರೆ ಆರಂಭಿಸಿದ್ದೀರಿ, ಉಚಿತವಾಗಿ ಔಷಧಗಳನ್ನು ನೀಡುತ್ತಿದ್ದೀರಿ. ಇದು ಹೇಗೆ ಸಾಧ್ಯ?
ಇದೆಲ್ಲವೂ ದೈವಇಚ್ಛೆಯಿಂದ ನಡೆಯುತ್ತಿದೆ. ನಾನು ವ್ಯಾಸಂಗ ಮಾಡುವ ಕಾಲದಿಂದಲೂ ನನಗೆ ಸತ್ಯಸಾಯಿ ಬಾಬಾ ಬಳಿ ಕೆಲಸ ಮಾಡಿ ಕೊಂಡಿರುವ ಬಯಕೆಯಿತ್ತು. ಆದರೆ ಬಾಬಾ ‘ನಿನ್ನ ಕೆಲಸ ಬೇರೆ ಇದೆ’ ಎಂದು ಹೇಳಿ ಕಳುಹಿಸಿ ದ್ದರು. ಆದರೆ ಒಂದು ದಿನ ಬಾಬಾ ನನ್ನ ಕನಸಿನಲ್ಲಿ ಬಂದು ‘ಆಸ್ಪತ್ರೆ ಕಟ್ಟೋಣ, ಶಾಲೆ ಕಟ್ಟೋಣ’ ಎಂದು ಹೇಳಿದರು. ಅವರು ಹೇಳಿದ ಪ್ರಕಾರವೇ ನನಗೆ ಅನಿಸಿದ್ದನ್ನು ಮಾಡಲಾರಂಭಿಸಿದೆ. ಮೊದಲಿಗೆ ಕಲಬುರಗಿಯಲ್ಲಿ ಶಾಲೆ ಆರಂಭಿಸಿ ದೆವು. ಇದೀಗ ಆಸ್ಪತ್ರೆ ಕಟ್ಟಿ ಉಚಿತವಾಗಿಯೇ ಚಿಕಿತ್ಸೆ ನೀಡುತ್ತಿದ್ದೇವೆ. ಇದಕ್ಕೆ ಲ್ಲವೂ ಬಾಬಾ ಅವರ ಪ್ರೇರಣೆಯೇ ಕಾರಣ.

ಮುಖವಾಗಿ ನಿಮ್ಮ ಸಮಾಜಸೇವೆಯ ಸ್ವರೂಪ ಹೇಗಿದೆ?
ಬಾಬಾ ಅವರ ಶಕ್ತಿಯೇ ನಮಗೆ ಸ್ಪೂರ್ತಿ. ಅವರ ಪ್ರೇರಣೆಯಿಂದಲೇ ಇಂದು ನಾವು 61 ದೇಶಗಳಲ್ಲಿ ಸಮಾಜಸೇವಾ ಕಾರ್ಯ ಆರಂಭಿಸಿದ್ದೇವೆ. ಎಲ್ಲ ಸೇವೆಗಳು ಹೇಗೆ ನಡೆಯುತ್ತಿವೆ ಎಂಬುದೇ ಗೊತ್ತಿಲ್ಲ, ಎಲ್ಲವೂ ದೈವ ಇಚ್ಛೆ. 55 ಲಕ್ಷ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಮಾಲ್ಟ್ ನೀಡುತ್ತಿದ್ದೇವೆ. ಬಡಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿದ್ದೇವೆ. ಇದರೊಂದಿಗೆ ಅಧ್ಯಾತ್ಮದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಇದೆಲ್ಲವೂ ತ್ಯಾಗಿಗಳು, ದಾನಿಗಳು ಹಾಗೂ ಬಾಬಾ ಭಕ್ತರ ಸಹಕಾರದಿಂದ ನಡೆಯುತ್ತಿದೆ.

ಆಧ್ಯಾತ್ಮ ಮತ್ತು ಸೇವೆ ಎರಡೂ ಒಟ್ಟಿಗೆ ನಡೆಯುವುದು ಹೇಗೆ ಸಾಧ್ಯ?
ಅಧ್ಯಾತ್ಮ ಮತ್ತು ಸೇವೆ ಇವೆರಡರ ನಡುವೆ ಯಾವುದೇ ಭೇದಭಾವವಿಲ್ಲ. ಭಗವಂತನ ಮೇಲೆ ಆಸಕ್ತಿ ಇದ್ದರೆ ಸೇವೆ ಸಾಧ್ಯವಾಗುತ್ತದೆ. ಅಧ್ಯಾತ್ಮವನ್ನು ಅನುಷ್ಠಾನಕ್ಕೆ ತರಲು ಸೇವೆಯಿಂದ ಮಾತ್ರ ಸಾಧ್ಯ.

ಉಚಿತ ಚಿಕಿತ್ಸೆಯ ಜತೆಗೆ ಇದೀಗ ಉಚಿತ ವೈದ್ಯಕೀಯ ಶಿಕ್ಷಣವನ್ನೂ ನೀಡಲು ಹೊರಟಿದ್ದೀರಿ. ಇದು ಸಾಧ್ಯವೇ?
ಮನಸಿದ್ದರೆ ಮಾರ್ಗ ಇದ್ದೇ ಇರುತ್ತದೆ. ಮೊದಲು ಶಾಲೆ ಆರಂಭಿಸಿದೆವು. ಆದರೆ ನಮಗೆ ಅಧ್ಯಾತ್ಮ ಮತ್ತು ಸೇವೆಯ ಬಗ್ಗೆ ಮಾಹಿತಿ ಹೊಂದಿದ ಶಿಕ್ಷಕರೇ ಸಿಗಲಿಲ್ಲ. ಹೀಗಾಗಿ ವಿಶ್ವವಿದ್ಯಾಲಯವನ್ನು ಆರಂಭಿಸಿ ಅಲ್ಲಿಯೇ ನಮ್ಮ ವಿದ್ಯಾರ್ಥಿಗಳನ್ನೇ ಶಿಕ್ಷಕರನ್ನಾಗಿ ತರಬೇತಿಗೊಳಿಸಿದೆವು. ಇಂದು ವೈದ್ಯಕೀಯ ಶಿಕ್ಷಣ ಎನ್ನುವುದು ವ್ಯಾಪಾರವಾಗಿದೆ. ಸಾಮಾನ್ಯ ವರ್ಗದವರು ವೈದ್ಯಕೀಯ ಶಿಕ್ಷಣ ಪಡೆಯುವುದು ಗಗನಕುಸುಮವಾಗಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಎಂಬಿಬಿಎಸ್ ಓದಿದವರು ಬಳಿಕ ಖರ್ಚು ಮಾಡಿದ ಹಣವನ್ನು ದುಡಿಯಲೇಬೇಕಾಗುತ್ತದೆ. ಆಗ ಚಿಕಿತ್ಸೆ ಎನ್ನುವುದು ಸೇವೆ ಎನಿಸಿಕೊಳ್ಳುವುದಿಲ್ಲ. ಹೀಗಾಗಿಯೇ ಉಚಿತವಾಗಿ ವೈದ್ಯಕೀಯ ಶಿಕ್ಷಣ ನೀಡಲು ತೀರ್ವನಿಸಿದ್ದೇವೆ. ಆದರೆ ನಮ್ಮಲ್ಲಿ ಉಚಿತವಾಗಿ ಶಿಕ್ಷಣ ಪಡೆದವರು 5 ವರ್ಷ ನಮ್ಮದೇ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುವಂತೆ ಕರಾರು ಮಾಡಿಕೊಳ್ಳಲಾಗುತ್ತದೆ. ಈ ಅವಧಿಯಲ್ಲಿ ವೈದ್ಯರಿಗೆ ಉತ್ತಮ ವೇತನವನ್ನೂ ನೀಡುತ್ತೇವೆ. ಜತೆಗೆ ಅವರು ಪಿಜಿ ಮಾಡುವುದಾದರೆ ನಮ್ಮದೇ ಸಂಸ್ಥೆಯಲ್ಲಿ ಪಿಜಿ ಮಾಡಬಹುದು.

ರೈತರು ಕೃಷಿ ಆದಾಯವನ್ನು ಹೆಚ್ಚು ಮಾಡಿಕೊಳ್ಳುವುದು ಹೇಗೆ?
ರೈತರಿಗೆ ತಂತ್ರಜ್ಞಾನದ ಬಗ್ಗೆ ಸೂಕ್ತ ಮಾಹಿತಿ ಇಲ್ಲ. ಬೆಳೆದ ಬೆಳೆಗಳನ್ನು ಹೇಗೆ ಮೌಲ್ಯವರ್ಧನೆ ಮಾಡಬೇಕು ಎಂಬುದು ತಿಳಿದಿಲ್ಲ. ನಮ್ಮ ಮುಂದಿನ ಪೀಳಿಗೆಗೆ ಕೃಷಿ ಮೇಲೆ ಅಭಿಮಾನ ಬರಬೇಕು ಎಂದರೆ ಅದರಲ್ಲಿ ಲಾಭ ಬರುವಂತಾಗಬೇಕು. ನಾವು ನಮ್ಮ ವಿಶ್ವವಿದ್ಯಾಲಯದಲ್ಲಿ ಕೋರ್ಸ್ ಆರಂಭಿಸಿದ್ದೇವೆ. ಜತೆಗೆ ರೈತರನ್ನು ಒಗ್ಗೂಡಿಸಿ ಬೆಳೆಗಳ ಮೌಲ್ಯವರ್ಧನೆ ಮಾಡಿಕೊಳ್ಳಲು ಕ್ರಮ ಕೈಗೊಳ್ಳುವ ಜೊತೆಗೆ ನೇರ ಮಾರುಕಟ್ಟೆ ಒದಗಿಸಲು ಕ್ರಮ ಕೈಗೊಳ್ಳುತ್ತೇವೆ.

VV Samvaada

ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ಉತ್ತಮ ಒಡನಾಟ ಹೊಂದಿದ್ದೀರಿ. ವಿಕಸಿತ ಭಾರತ ಕಲ್ಪನೆ ಬಗ್ಗೆ ನಿಮ್ಮ ಅಭಿಪ್ರಾಯವೇನು?
ವಿಕಸಿತ ಭಾರತ ಎಂದರೆ ಆರ್ಥಿಕ ಅಭಿವೃದ್ಧಿಯ ಜತೆಗೆ ಅಧ್ಯಾತ್ಮವೂ ಇರಬೇಕು. ಇದನ್ನೇ ನಾನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡುವಾಗಲೂ ಹೇಳಿದ್ದೇನೆ. ಆರ್ಥಿಕ ಅಭಿವೃದ್ಧಿ ಎಂದರೆ ಕೇವಲ ಒಂದು ವರ್ಗದ ಅಭಿವೃದ್ಧಿ ಆಗಬಾರದು. ಸಮಾಜದ ಪ್ರತಿಯೊಬ್ಬರೂ ಅಭಿವೃದ್ಧಿಯನ್ನು ಹೊಂದಬೇಕು. ಆರ್ಥಿಕ ಅಭಿವೃದ್ಧಿಯೊಂದಿಗೆ ಅಧ್ಯಾತ್ಮದ ಅಭಿವೃದ್ಧಿಯೂ ಸಮಾನವಾಗಿರಬೇಕು.

ವಿದೇಶಗಳಲ್ಲಿ ನಿಮ್ಮ ಕಾರ್ಯಗಳು ಹೇಗಿವೆ?
ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ರೀತಿಯ ಕೊರತೆಗಳಿವೆ. ಮುಂದುವರಿದ ದೇಶಗಳಲ್ಲಿ ಅಧ್ಯಾತ್ಮದ ಕೊರತೆ ಇದೆ. ಅಲ್ಲಿ ಜನರಿಗೆ ಅಧ್ಯಾತ್ಮದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಇನ್ನು ಬಡ ದೇಶಗಳಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ.

ಸತ್ಯಸಾಯಿ ಸಂಸ್ಥೆಯಲ್ಲಿ ಶಿಕ್ಷಣ, ಆರೋಗ್ಯ ಸೇವೆ ಉಚಿತವಾಗಿದೆ. ಇದಕ್ಕಾಗಿ ಮಾಸಿಕ 20 ಕೋಟಿ ರೂ.ಗೂ ಹೆಚ್ಚು ಖರ್ಚು ಬರುತ್ತದೆ. ಇದನ್ನು ಹೇಗೆ ನಿಭಾಯಿಸುತ್ತೀರಿ?
ಭಗವಂತನ ಅನುಗ್ರಹದಿಂದ ಇದುವರೆಗೆ ಯಾವುದೇ ಸಮಸ್ಯೆ ಇಲ್ಲದೆ ಸಂಸ್ಥೆ ನಡೆದುಕೊಂಡು ಹೋಗುತ್ತಿದೆ. ಜನ ನೀಡುವ ದಾನದಿಂದಲೇ ಇದೆಲ್ಲವೂ ನಿರ್ವಹಣೆಯಾಗುತ್ತಿದೆ. ಶೇ.80ರಷ್ಟು ದಾನ ವಿದೇಶಗಳಿಂದಲೇ ಬರುತ್ತಿದೆ. ಸಿಎಸ್​ಆರ್ ಫಂಡ್ ಸಹ ನಮಗೆ ಬರುತ್ತಿದೆ. ಹತ್ತು ರೂಪಾಯಿಯಿಂದ 10 ಕೋಟಿ ರೂ.ವರೆಗೂ ನಮಗೆ ದಾನ ನೀಡಿದವರಿದ್ದಾರೆ. ಎಲ್ಲರನ್ನೂ ನಾವು ಒಂದೇ ರೀತಿ ಕಾಣುತ್ತೇವೆ. ಇನ್ನೊಂದು ವಿಶೇಷವೆಂದರೆ ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರು ಹಣ್ಣು, ತರಕಾರಿಗಳನ್ನು ತಂದುಕೊಟ್ಟ ಉದಾಹರಣೆಗಳಿವೆ. ಆದರೆ ದಾನ ಮಾಡುವಂತೆ ಯಾರಿಗೂ ನಾವು ಒತ್ತಾಯ ಮಾಡುವುದಿಲ್ಲ.

ಬಾಬಾ ಅವರ 100ನೇ ಜನ್ಮದಿನಕ್ಕೆ 100 ದಿನ ಕಾರ್ಯಕ್ರಮ ನಡೆಸುವ ಸಿದ್ಧತೆಯಲ್ಲಿದ್ದೀರಿ. ಇದು ಹೇಗೆ?
ಬಾಬಾ ಅವರ 100ನೇ ಜನ್ಮದಿನಾಚರಣೆಯನ್ನು ವಿಶೇಷವಾಗಿ ಆಚರಿಸುತ್ತಿದ್ದೇವೆ. 100 ದೇಶಗಳಿಂದ ಜನ ಬರಲಿದ್ದಾರೆ. ಒಂದೊಂದು ದಿನ ಒಂದೊಂದು ದೇಶದ ಜನ ತಮ್ಮ ಸಂಸ್ಕೃತಿಯನ್ನು ಪರಿಚಯಿಸಲಿದ್ದಾರೆ. ಎಲ್ಲರೂ ನಮ್ಮವರೇ ಎಂಬ ಭಾವನೆಯಿಂದ ಈ ಕಾರ್ಯಕ್ರಮ ರೂಪಿಸಿದ್ದೇವೆ. ಇದೇ ಸಂದರ್ಭದಲ್ಲಿ ವಿಶ್ವದ ಅತಿದೊಡ್ಡ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜನ್ನು ಆರಂಭ ಮಾಡಲಿದ್ದೇವೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಸಾಧ್ಯತೆ ಇದೆ.

ಭಾರತವನ್ನು ವಿಶ್ವಗುರುವನ್ನಾಗಿಸುವ ನಿಟ್ಟಿನಲ್ಲಿ ನಿಮ್ಮ ಸಲಹೆ ಏನು?
ಮೊದಲು ನಮ್ಮ ದೇಶವನ್ನು ನಾವು ಸರಿಯಾಗಿ ತಿಳಿದುಕೊಳ್ಳಬೇಕು. ಅತಿ ಹೆಚ್ಚು ಆಧ್ಯಾತ್ಮಿಕತೆ ಇರುವ ದೇಶ ಭಾರತ. ನಮ್ಮ ಧರ್ಮದ ಜತೆಗೆ ವೇದಾಂತವನ್ನು ತಿಳಿದುಕೊಳ್ಳಬೇಕು. ನಾವು ನಮ್ಮ ಅಧ್ಯಾತ್ಮದಿಂದಲೇ ವಿಶ್ವಗುರುವಾಗುತ್ತೇವೆ. ಈಗಾಗಲೇ ಮುಂದುವರಿದ ದೇಶದ ಜನ ನಮ್ಮ ಧರ್ಮ ಪಾಲಿಸಲು ಆರಂಭಿಸಿರುವುದೇ ಇದಕ್ಕೆ ಸಾಕ್ಷಿ.

ಕರೊನಾ ಸಂದರ್ಭದಲ್ಲಿ ಇತರ ದೇಶಗಳಂತೆ ನಾವು ಕುಗ್ಗಲಿಲ್ಲ. ಇದಕ್ಕೆ ಕಾರಣವೇನು?
ನಾವು ಧರ್ಮಪಾಲನೆ ಮಾಡಿದರೆ ಎಲ್ಲವೂ ಒಳ್ಳೆಯದೇ ಆಗುತ್ತದೆ. ಮೊದಲು ತ್ಯಾಗ ಮಾಡಿ ಬಳಿಕ ಭೋಗ ಮಾಡಬೇಕು. ಭೋಗದಿಂದಲೇ ಅವಘಡಗಳು ಹೆಚ್ಚುತ್ತವೆ ಎಂಬುದನ್ನು ಅರಿತುಕೊಳ್ಳಬೇಕು.

ಪುಟ್ಟಪರ್ತಿ ಸಾಯಿಬಾಬಾ, ಸತ್ಯಸಾಯಿ ಬಾಬಾ ಆಯಿತು. ಪ್ರೇಮಸಾಯಿ ಬಾಬಾ ಅವತಾರ ನೀವಾ?
ಯಾರ ಬಳಿ ಪ್ರೇಮ ಇದೆಯೋ ಪ್ರೇಮದಿಂದ ಯಾರು ಸೇವೆ ಮಾಡುತ್ತಾರೆಯೋ ಅವರೇ ಪ್ರೇಮಸಾಯಿ ಬಾಬಾ. ಪ್ರೇಮಸಾಯಿ ಬಾಬಾ ಯಾರು ಎಂಬ ವಿವೇಚನೆಯನ್ನು ಜನರಿಗೆ ಬಿಡುತ್ತಿದ್ದೇನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net