ಅತಿವೃಷ್ಟಿಯಿಂದ ಹಾನಿಯಾದರೆ ಸರ್ಕಾರದಿಂದಲೇ ಹೊಸ ಮನೆ

kgb 1
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಅತಿವೃಷ್ಟಿಯಿಂದ ಸಂಪೂರ್ಣ ಹಾನಿಗೊಳಗಾದ ಮನೆಗಳನ್ನು ಸರ್ಕಾರದಿಂದಲೇ ಮಂಜೂರು ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ವಿಧಾನಸಭೆಯಲ್ಲಿ ಘೋಷಿಸಿದ್ದಾರೆ.

ವಾಲ್ಮೀಕಿ ಹಗರಣದ ವಿಚಾರದಲ್ಲಿ ಪ್ರತಿಪಕ್ಷದ ಧರಣಿ ನಡುವೆಯೇ ಕೈಗೆತ್ತಿಕೊಂಡ ಅತಿವೃಷ್ಟಿ ಮೇಲಿನ ಚರ್ಚೆಗೆ ಉತ್ತರ ನೀಡಿದ ಸಚಿವರು, ಪರಿಹಾರ ಕಾಮಗಾರಿಗಳಿಗೆಂದು ಜಿಲ್ಲೆಗಳಿಗೆ 777.54 ಕೋಟಿ ರೂ. ಕೊಟ್ಟಿದ್ದೇವೆ. ಬೇಕಿದ್ದರೆ ಇನ್ನೂ ಹಣ ಕೊಡಲು ಸಿದ್ಧರಿದ್ದೇವೆ ಎಂದರು.

ಈವರೆಗೆ 2450 ಮನೆಗಳು ಹಾನಿಯಾಗಿದೆ, ಕೆಲವು ಭಾಗಶಃ ಹಾನಿಗೊಳಗಾಗಿದ್ದು, ಕೆಲವು ಪೂರ್ಣ ನಾಶವಾಗಿವೆ. ಅಂತಹ ಮನೆಗಳಿಗೆ ಪರಿಹಾರದ ಜತೆಗೆ ಸರ್ಕಾರದಿಂದಲೇ ಮನೆ ಮಂಜೂರಾತಿ ನೀಡಲಾಗುತ್ತದೆ ಎಂದು ತಿಳಿಸಿದರು.

ಜೂ.1ರಿಂದ ಈವರೆಗೆ ರಾಜ್ಯಾದ್ಯಂತ 365 ಮಿ.ಮೀ. ವಾಡಿಕೆ ಮಳೆ ಆಗಬೇಕಿತ್ತು. ಆದರೆ, 447 ಮಿ.ಮೀ. (ಶೇ.22) ಮಳೆಯಾಗಿದೆ. 29 ಕಡೆ ಆರೈಕೆ ಕೇಂದ್ರ ತೆರೆದಿದ್ದೇವೆ. 2332 ಸಂತ್ರಸ್ತರಿಗೆ ಊಟ, ವಸತಿ, ಉಪಚಾರ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಮಲೆನಾಡು, ಕರಾವಳಿಯ 6 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಬಂದರೆ ನೆರವು ನೀಡಲು 5 ಎನ್​ಡಿಆರ್​ಎಫ್ ತುಕಡಿ ನಿಯೋಜಿಸಿದ್ದು, ಮುಂಗಾರು ಆರಂಭದಿಂದ ಮುಕ್ತಾಯದವರೆಗೆ ಈ ತುಕಡಿ ಅಲ್ಲೇ ಇರಲಿದೆ. 1247 ಗ್ರಾಪಂ ವ್ಯಾಪ್ತಿಯ 2225 ಗ್ರಾಮಗಳನ್ನು ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಿದ್ದೇವೆ. ಈ ವ್ಯಾಪ್ತಿಯಲ್ಲಿ 2.37 ಲಕ್ಷ ಜನ ಇದ್ದು, ಟಾಸ್ಕ್​ಫೋರ್ಸ್ ರಚಿಸಲಾಗಿದೆ. ತಾಲೂಕು ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿ, ಟಾಸ್ಕ್ ಫೋರ್ಸ್​ಗೂ ಪರಿಹಾರ ಕಾಮಗಾರಿಗಾಗಿ ಅನುದಾನ ಕೊಟ್ಟಿದ್ದೇವೆ ಎಂದು ಹೇಳಿದರು.

ಅಂಕೋಲಾ-ಶಿರೂರು ಸಮೀಪ ಹೆದ್ದಾರಿ ಕುಸಿತಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ವಿನ್ಯಾಸವೇ ಕಾರಣ ಎಂಬ ವರದಿಗಳು ಇವೆ ಎಂದು ಪ್ರದರ್ಶಿಸಿದ ಸಚಿವರು, ಹೆದ್ದಾರಿ ನಿರ್ವಣಕ್ಕೆ ಅಡ್ಡಲಾಗಿದ್ದ ಗುಡ್ಡವನ್ನು ಹಂತಹಂತವಾಗಿ ಇಳಿಜಾರಿನಂತೆ ಮಾಡುವ ಬದಲು ಕಡಿದಾಗಿ ಕತ್ತರಿಸಿರುವುದರಿಂದ ಕುಸಿತ ಉಂಟಾಗಿದೆ. ಹೆದ್ದಾರಿಯಲ್ಲಿ 5 ಅಡಿಯಷ್ಟು ನೀರು ನಿಂತಿದೆ. ಈ ಅವೈಜ್ಞಾನಿಕತೆ ಸರಿಪಡಿಸುವಂತೆ ಪ್ರಾಧಿಕಾರಕ್ಕೆ ಸರ್ಕಾರ ಸೂಚನೆ ಕೊಟ್ಟಿದೆ ಎಂದರಲ್ಲದೆ, ಕಡಲಕೊರೆತ ತಡೆಗೆ ಮೀನುಗಾರಿಕೆ ಸಚಿವರಿಂದ ವಿಶೇಷ ಯೋಜನೆ ರೂಪಿಸಲಾಗುತ್ತಿದೆ. ಮುಂದಿನ ಸಂಪುಟ ಸಭೆಯಲ್ಲಿ ರ್ಚಚಿಸಿ ತೀರ್ವನಿಸುತ್ತೇವೆ ಎಂದರು.

ಶಾಸಕರಾದ ಪೊನ್ನಣ್ಣ, ಅಶೋಕ್ ರೈ, ನಯನಾ ಮೋಟಮ್ಮ, ಶಿವಲಿಂಗೇಗೌಡ, ಶಿವಗಂಗಾ, ಶರತ್ ಬಚ್ಚೇಗೌಡ, ಆರ್.ವಿ.ದೇಶಪಾಂಡೆ ಸೇರಿ ಹಲವು ಶಾಸಕರು ಚರ್ಚೆಯಲ್ಲಿ ಪಾಲ್ಗೊಂಡರು.

ವಾಲ್ಮೀಕಿ ನಿಗಮದ ಹಗರಣ ಮುಚ್ಚಿಹಾಕುವ ಉದ್ದೇಶದಿಂದ ಅತಿವೃಷ್ಟಿ ವಿಷಯವನ್ನು ಬೇಕೆಂದೇ ಚರ್ಚೆಗೆ ತರಲಾಗಿದೆ. ತಿಂಗಳಿಂದ ಮಳೆ ಬರುತ್ತಿದೆ. ಯಾವ ಮಂತ್ರಿ ಸ್ಥಳಕ್ಕೆ ಹೋಗಿ ಪರಿಶೀಲಿಸಿದ್ದಾರೆ? ಎಷ್ಟು ಸಭೆ ಮಾಡಿದ್ದಾರೆ? ಎಷ್ಟು ಪರಿಹಾರ ಕೊಟ್ಟಿದ್ದಾರೆ? | ಆರ್.ಅಶೋಕ್ ವಿಧಾನಸಭೆ ಪ್ರತಿಪಕ್ಷ ನಾಯಕ

ಕಳೆದ ಬಾರಿಗಿಂತ ಅಧಿಕ ನೀರು ಸಂಗ್ರಹ : ರಾಜ್ಯದ ಜಲಾಶಯಗಳ ನೀರಿನ ಸಂಗ್ರಹಣಾ ಸಾಮರ್ಥ್ಯವು 895 ಟಿಎಂಸಿಯಾಗಿದೆ. ಕಳೆದ ಬಾರಿ ಇದೇ ಸಂದರ್ಭದಲ್ಲಿ 243 ಟಿಎಂಸಿ ಸಂಗ್ರಹ ಇತ್ತು. ಈಗ 536 ಟಿಎಂಸಿ ಸಂಗ್ರಹವಿದೆ. ಇದರಿಂದ ಭವಿಷ್ಯದ ಆತಂಕ ನಿವಾರಣೆಯಾಗಿದೆ ಎಂದು ಕೃಷ್ಣಬೈರೇಗೌಡ ವಿವರಿಸಿದರು. ಅತಿವೃಷ್ಟಿಯಿಂದ 371 ಹೆಕ್ಟೇರ್ ಕೃಷಿ ಮತ್ತು 351 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣ ಇನ್ನೂ ಹೆಚ್ಚಬಹುದು. ತಕ್ಷಣ ಪರಿಹಾರ ಕೊಡಲು ಸೂಚಿಸಿದ್ದು, ಪೋರ್ಟಲ್ ತೆರೆಯುತ್ತೇವೆಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net