ಭಾರತಕ್ಕೆ ಹೊಸ ಶತ್ರು ಸೌದಿ? ದೇಶದ ಎದುರು ಹೊಸ ರಕ್ಷಣಾ ಸವಾಲು

Untitled design (1)
Published on

ಪಾಕಿಸ್ತಾನ ಮತ್ತು ಸೌದಿ ಅರೇಬಿಯಾದ ನಡುವೆ ಗುರುವಾರ ಮಹತ್ವದ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಪಾಕಿಸ್ತಾನದ ಮೇಲೆ ದಾಳಿ ನಡೆದರೆ ಸೌದಿ, ಸೌದಿಯ ಮೇಲೆ ದಾಳಿ ನಡೆದರೆ ಪಾಕ್ ಪರಸ್ಪರ ರಕ್ಷಣೆಗೆ ಧಾವಿಸಲಿದ್ದು, ಶತ್ರುರಾಷ್ಟ್ರದ ಮೇಲೆ ದಾಳಿ ನಡೆಸಲಿವೆ. ವಾಸ್ತವದಲ್ಲಿ ಭಾರತ ಮತ್ತು ಸೌದಿ ಅರೇಬಿಯಾ ನಡುವೆ ಉತ್ತಮ ರಾಜತಾಂತ್ರಿಕ ಸಂಬಂಧಗಳು ಮುಂಚಿನಿಂದಲೂ ಇದ್ದು, ಇತ್ತೀಚಿನ ವರ್ಷಗಳಲ್ಲಿ ಇದು ಮತ್ತಷ್ಟು ದೃಢಗೊಂಡಿದೆ. ಆದರೆ, ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ನಡುವಿನ ರಕ್ಷಣಾ ಒಪ್ಪಂದದಿಂದ ಪರಿಸ್ಥಿತಿಗಳು ಬದಲಾಗಲಿವೆಯೇ, ಸೌದಿ ಇಂಥ ನಿರ್ಧಾರ ಕೈಗೊಳ್ಳಲು ಕಾರಣವೇನು? ಭಾರತಕ್ಕೆ ಎದುರಾಗುವ ಸವಾಲುಗಳೇನು? ಈ ಕುರಿತಾದ ಅವಲೋಕನ ಇಲ್ಲಿದೆ.

ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಆಹ್ವಾನದ ಮೇರೆಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಸೌದಿ ರಾಜಧಾನಿ ರಿಯಾದ್​ಗೆ ಭೇಟಿ ನೀಡಿದ್ದು, ಎರಡೂ ದೇಶಗಳ ನಾಯಕರು ಸೆ.18ರಂದು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಎರಡು ದೇಶಗಳಲ್ಲಿ ಯಾವುದೇ ಒಂದು ದೇಶದ ಮೇಲೆ ಆಕ್ರಮಣ ನಡೆದರೆ ಅದು ಎರಡೂ ದೇಶಗಳ ಮೇಲಿನ ಆಕ್ರಮಣ ಎಂದು ಪರಿಗಣಿಸಲಾಗುವುದು ಎಂಬುದು ಒಪ್ಪಂದದ ಪ್ರಮುಖ ಅಂಶವಾಗಿದೆ. ಒಂದು ವೇಳೆ ಪಾಕಿಸ್ತಾನದ ಮೇಲೆ ಯಾರಾದರೂ ದಾಳಿ ನಡೆಸಿದರೆ ಆಗ ಸೌದಿ ಪಾಕಿಸ್ತಾನದ ನೆರವಿಗೆ ಬರಲಿದೆ. ಈ ಒಪ್ಪಂದ ಆಪರೇಷನ್ ಸಿಂಧೂರದ 133ನೇ ದಿನ (ಸೆ.18) ಹಾಗೂ ಇಸ್ರೇಲ್ ಕತಾರ್ ಮೇಲೆ ವಾಯುದಾಳಿ ನಡೆಸಿದ 9ನೇ ದಿನ ಏರ್ಪಟ್ಟಿದೆ. ತಜ್ಞರ ಪ್ರಕಾರ, ಈ ಒಪ್ಪಂದದ ಹೆಚ್ಚು ಪರಿಣಾಮ ಇಸ್ರೇಲ್ ಮತ್ತು ಭಾರತದ ಮೇಲಾಗಲಿದೆ. ಸೌದಿ ಅರೇಬಿಯಾ ಇದ್ದಕ್ಕಿದ್ದಂತೆ ಭಾರತದ ಶತ್ರುರಾಷ್ಟ್ರ ಪಾಕಿಸ್ತಾನದ ಜತೆ ರಕ್ಷಣಾ ಒಪ್ಪಂದ ಮಾಡಿಕೊಳ್ಳುವುದಕ್ಕೆ ಆತ್ಮರಕ್ಷಣೆಯ ತಂತ್ರವೂ ಪ್ರಮುಖ ಕಾರಣವಾಗಿದೆ.

ಸೌದಿ ಕೈಗೆ ಅಣ್ವಸ್ತ್ರ

ಸೌದಿ ಅರೇಬಿಯಾ ತೈಲ ಸಂಪನ್ನ ರಾಷ್ಟ್ರವಾಗಿರುವುದರಿಂದ ಆರ್ಥಿಕವಾಗಿ ಸಮೃದ್ಧಿ ಹೊಂದಿದೆ. ಆದರೆ, ಅದು ಈವರೆಗೆ ಪರಮಾಣು ಅಸ್ತ್ರಗಳನ್ನು ಹೊಂದಿಲ್ಲ. ಇದಕ್ಕೆ ಪ್ರಮುಖ ಕಾರಣ ಅಮೆರಿಕದ ಜತೆಗಿರುವ ಸ್ನೇಹ. ಸೌದಿ ಅಮೆರಿಕಕ್ಕೂ ಕಚ್ಚಾತೈಲ ಪೂರೈಸುತ್ತಿದ್ದು, ಅದರ ಬದಲಿಗೆ ಅಮೆರಿಕದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿದೆ. ಸೇನಾ ತಂತ್ರಜ್ಞಾನದ ನೆರವು ಕೂಡ ಅಮೆರಿಕದಿಂದ ದೊರೆತಿದೆ. ಹೀಗಾಗಿ, ಯಾವುದೇ ಸಂಕಷ್ಟದ ಸನ್ನಿವೇಶ ಎದುರಾದರೂ ತನ್ನ ರಕ್ಷಣೆಗೆ ಅಮೆರಿಕ ಇರಲಿದೆ ಎಂಬ ಭಾವನೆಯಿಂದ ತನ್ನದೇ ಆದ ಅಣ್ವಸ್ತ್ರಗಳನ್ನು ಹೊಂದಲು ಸೌದಿ ಈವರೆಗೆ ಹಪಹಪಿಸಿದ ನಿದರ್ಶನಗಳಿಲ್ಲ. ಆದರೆ, ಸೆಪ್ಟೆಂಬರ್ 8ರಿಂದ 10ರವರೆಗಿನ 72 ಗಂಟೆಗಳಲ್ಲಿ ಇಸ್ರೇಲ್ ಆರು ಇಸ್ಲಾಮಿಕ್ ರಾಷ್ಟ್ರಗಳ ಮೇಲೆ ದಾಳಿ ನಡೆಸಿತು. ಈ ದಾಳಿಗಳಲ್ಲಿ 200 ಜನರು ಪ್ರಾಣ ಕಳೆದುಕೊಂಡರೆ ಸಾವಿರಕ್ಕೂ ಅಧಿಕ ಜನರು ಗಾಯಗೊಂಡರು.

ಕತಾರ್​ನ ರಾಜಧಾನಿ ದೋಹಾ ಮೇಲೂ ಇಸ್ರೇಲ್ ವಾಯುದಾಳಿ ನಡೆಸುತ್ತಿದ್ದಂತೆ ಹಲವು ರಾಷ್ಟ್ರಗಳಲ್ಲಿ ನಡುಕ ಸೃಷ್ಟಿಯಾಯಿತು. ಅಲ್ಲದೆ, ಇಸ್ರೇಲ್​ನ ಮುಂದಿನ ಗುರಿ ಸೌದಿ ಅರೇಬಿಯಾ, ಇರಾಕ್ ಮತ್ತು ಟರ್ಕಿ ಎಂದು ಹೇಳಲಾಗಿದ್ದು, ಇದು ಸೌದಿಯ ನಿದ್ದೆಗೆಡಿಸಿದೆ. ಜತೆಗೆ, ಅಮೆರಿಕ ಮೇಲಿದ್ದ ನಂಬಿಕೆಗೆ ಧಕ್ಕೆ ಬಂದಿದೆ. ಹಾಗಾಗಿಯೇ, ಪಾಕಿಸ್ತಾನದೊಂದಿಗೆ ರಕ್ಷಣಾ ಒಪ್ಪಂದ ಮಾಡಿಕೊಂಡಿದ್ದು, ಇದು ಎಲ್ಲ ಬಗೆಯ ಶಸ್ತ್ರಾಸ್ತ್ರ ಸಹಕಾರದ ಅಂಶವನ್ನೂ ಒಳಗೊಂಡಿದೆ. ಭವಿಷ್ಯದಲ್ಲಿ ಸೌದಿ ಅರೇಬಿಯಾ ಇಸ್ರೇಲ್ ಅಥವಾ ಇತರ ದೈತ್ಯ ರಾಷ್ಟ್ರದಿಂದ ದಾಳಿಗೆ ಒಳಗಾದರೆ, ಪಾಕ್​ನ ಅಣ್ವಸ್ತ್ರಗಳನ್ನು ಬಳಸಬಹುದು. ಇಷ್ಟು ವರ್ಷಗಳ ಕಾಲ ಪಾಕಿಸ್ತಾನ ಇದೇ ಅಣ್ವಸ್ತ್ರಗಳ ಮೂಲಕ ಭಾರತದ ವಿರುದ್ಧ ಬ್ಲ್ಯಾಕ್​​ವೆುೕಲ್ ತಂತ್ರ ಅನುಸರಿಸುತ್ತಿತ್ತು. ಈಗ, ಈ ಸಾಲಿಗೆ ಸೌದಿಯೂ ಸೇರ್ಪಡೆಗೊಂಡರೆ ಭಾರತದ ತಲೆನೋವು ಹೆಚ್ಚುವುದು ಖಚಿತ. ಮುಖ್ಯವಾಗಿ, ಈ ರಕ್ಷಣಾ ಒಪ್ಪಂದದ ಮೂಲಕ ಸೌದಿ ಅರೇಬಿಯಾ ನಿರಾಯಾಸವಾಗಿ ಪಾಕ್​ನಿಂದ ಪರಮಾಣು ಅಸ್ತ್ರಗಳನ್ನು ಪಡೆಯಲಿದೆ. ಅಲ್ಲದೆ, ತನ್ನ ಬೆಂಬಲಕ್ಕೆ ಸೌದಿ ಇರಲಿದೆ ಎಂಬುದು ಪಾಕಿಸ್ತಾನದ ಶಕ್ತಿಯನ್ನು ಹೆಚ್ಚಿಸಲಿದೆ. ಇಸ್ರೇಲ್ ವಿರುದ್ಧ ಸಮರಸನ್ನದ್ಧವಾಗಿ ಇರಲು ಇದರಿಂದ ಸೌದಿಗೆ ಸಾಧ್ಯವಾಗಲಿದೆ.

ಪಾಕ್​ಗೆ ಸಾಥ್ ನೀಡಿದ್ದ ಸೌದಿ

ಪಾಕಿಸ್ತಾನ ಮತ್ತು ಸೌದಿ ಅರೇಬಿಯಾದ ನಡುವೆ 1947ರಿಂದಲೂ ದ್ವಿಪಕ್ಷೀಯ ಸಂಬಂಧಗಳಿವೆ. 1951ರಲ್ಲಿ ಉಭಯ ರಾಷ್ಟ್ರಗಳ ನಡುವೆ ‘ಟ್ರೀಟಿ ಆಫ್ ಫ್ರೆಂಡ್​ಶಿಪ್’ಗೆ ಅಂಕಿತ ಹಾಕಲಾಗಿತ್ತು. 1965ರಲ್ಲಿ ಭಾರತದೊಂದಿಗಿನ ಸಮರದ ಸಂದರ್ಭದಲ್ಲಿ ಸೌದಿ ಪಾಕ್​ಗೆ ಶಸ್ತ್ರಾಸ್ತ್ರಗಳನ್ನು ಒದಗಿಸಿತ್ತು. 1967ರಲ್ಲಿ ಪಾಕ್-ಸೌದಿ ಅರೇಬಿಯಾ ನಡುವೆ ಮೊದಲ ರಕ್ಷಣಾ ಒಪ್ಪಂದ ಏರ್ಪಟ್ಟಿತ್ತು. 1971ರ ಭಾರತ-ಪಾಕ್ ಯುದ್ಧದ ಸಂದರ್ಭದಲ್ಲಿ ಸೌದಿ ಭಾರತದ ಮಿಲಿಟ್ರಿ ಆಕ್ಷನ್ ಅನ್ನು ‘ಮೋಸ’ ಮತ್ತು ‘ಅಂತಾರಾಷ್ಟ್ರೀಯ ಒಪ್ಪಂದಗಳ ವಿರುದ್ಧ’ ಎಂದು ಹೇಳಿತ್ತು. ಯುದ್ಧದ ಬಳಿಕ ಬಾಂಗ್ಲಾದೇಶ ಅಸ್ತಿತ್ವಕ್ಕೆ ಬಂದರೂ, ಸೌದಿ ಅದಕ್ಕೆ ಮಾನ್ಯತೆ ನೀಡಿರಲಿಲ್ಲ, 1975ರಲ್ಲಿ ಶೇಖ್ ಮುಜಿಬುರ್ ರೆಹಮಾನ್ ಹತ್ಯೆಯ ಬಳಿಕ ಸೌದಿ ಬಾಂಗ್ಲಾದೇಶವನ್ನು ಒಂದು ರಾಷ್ಟ್ರವಾಗಿ ಮಾನ್ಯ ಮಾಡಿತು. 1977ರಲ್ಲಿ ಸೌದಿ ಪಾಕ್​ಗೆ 1 ಮಿಲಿಯನ್ ಡಾಲರ್​ನ ಸಾಲ ನೀಡಿತ್ತು. ನಂತರ ಇದೇ ದುಡ್ಡಲ್ಲಿ ಪಾಕ್ ಅಮೆರಿಕದಿಂದ ಎಫ್-16 ಜೆಟ್​ಗಳನ್ನು ಖರೀದಿಸಿತು. ಅಷ್ಟೇ ಅಲ್ಲ, ಪಾಕ್​ನ ಅಣ್ವಸ್ತ್ರ ಕಾರ್ಯಕ್ರಮಕ್ಕೂ ಸೌದಿ ನೆರವು ನೀಡಿತು. ಪರಮಾಣು ಪರೀಕ್ಷೆ ಯಶಸ್ವಿಗೊಂಡ ಬಳಿಕ ಪಾಕ್ ಮೇಲೆ ಅಮೆರಿಕ ನಿರ್ಬಂಧ ಹೇರಿತು. ಆ ಸಂದರ್ಭದಲ್ಲಿ ಸೌದಿ ಪ್ರತಿನಿತ್ಯ ಪಾಕ್​ಗೆ 50 ಸಾವಿರ ಬ್ಯಾರೆಲ್ ಕಚ್ಚಾತೈಲವನ್ನು ಒದಗಿಸಿತು. 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲೇ ಸೌದಿಯ ಆಗಿನ ರಕ್ಷಣಾ ಸಚಿವ ಪ್ರಿನ್ಸ್ ಅಬ್ದುಲ್ ಅಜೀಜ್ ಪಾಕ್​ನ ಪರಮಾಣು ಮತ್ತು ಮಿಸೈಲ್ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು.

ಭಾರತ ಎಚ್ಚರಿಕೆ ಹೆಜ್ಜೆ

  • ಸೌದಿ ಅರೇಬಿಯಾದೊಂದಿಗೆ ರಾಜತಾಂತ್ರಿಕ ಹಾಗೂ ದ್ವಿಪಕ್ಷೀಯ ಸಂಬಂಧ ದೃಢಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಸಾಕಷ್ಟು ಶ್ರಮ ಹಾಕಿದ್ದರು. ಪ್ರಧಾನಿಯಾದ ಮೇಲೆ ಮೂರು ಬಾರಿ ಅವರು ಸೌದಿ ಪ್ರವಾಸ ಮಾಡಿದ್ದಾರೆ. ಸೌದಿ-ಪಾಕ್ ರಕ್ಷಣಾ ಒಪ್ಪಂದದಿಂದ ಸದ್ಯದ ಮಟ್ಟಿಗಂತೂ ಭಾರತಕ್ಕೆ ಹಿನ್ನಡೆಯಾಗಿದ್ದು, ಎಚ್ಚರಿಕೆಯ ಹೆಜ್ಜೆಗಳನ್ನು ಇರಿಸಬೇಕಿದೆ.
  • ಅಮೆರಿಕದೊಂದಿಗಿನ ಸುಂಕ ವಿವಾದದ ಸಂದರ್ಭದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ವಿರುದ್ಧ ಹಲವು ಹೇಳಿಕೆಗಳನ್ನು ನೀಡಿದರೂ, ಭಾರತ ತಾಳ್ಮೆ ಕಳೆದುಕೊಳ್ಳದೆ ಸಂಯಮದಿಂದ ಪ್ರತಿಕ್ರಿಯಿಸಿತು. ಅಂದರೆ, ಉಭಯ ರಾಷ್ಟ್ರಗಳ ದೀರ್ಘ ಹಾಗೂ ಆಳವಾದ ರಾಜತಾಂತ್ರಿಕ ಸಂಬಂಧಗಳಿಗೆ ಧಕ್ಕೆ ಬಾರದಂತೆ ನೋಡಿಕೊಂಡಿತು. ಸೌದಿ ಅರೇಬಿಯಾದೊಂದಿಗೂ ಭಾರತ ಸಂಬಂಧ ಕೆಡಿಸಿಕೊಳ್ಳುವುದಿಲ್ಲ ಎನ್ನುತ್ತಾರೆ ರಕ್ಷಣಾ ವಿಶ್ಲೇಷಕರು.
  • ಭವಿಷ್ಯದಲ್ಲಿ ಭಾರತ ಪಾಕಿಸ್ತಾನದ ಮೇಲೆ ದಾಳಿ ನಡೆಸಿದರೂ, ಸೌದಿ ಭಾರತದೊಂದಿಗಿನ ಸಂಬಂಧ ಹಾಳು ಮಾಡಿಕೊಳ್ಳುವ ತಪ್ಪು ಮಾಡುವುದಿಲ್ಲ. ಜಾಗತಿಕ ಮಟ್ಟದಲ್ಲಿ ಭಾರತದ ಮಹತ್ವ ಮತ್ತು ಶಕ್ತಿಯ ಅರಿವು ಸೌದಿ ಆಡಳಿತಕ್ಕಿದೆ. ಆದರೆ, ಇಸ್ರೇಲ್ ಸೌದಿ ಅರೇಬಿಯಾ ಮೇಲೆ ದಾಳಿ ನಡೆಸಿದರೆ ಇಸ್ಲಾಂ, ರಾಜನೀತಿ ಮತ್ತು ಒಪ್ಪಂದದ ನೆಪದಲ್ಲಿ ಪಾಕ್ ಸೌದಿಯ ನೆರವಿಗೆ ಧಾವಿಸಿ ಬರುವುದು ಖಚಿತ.
  • ಇಸ್ರೇಲ್ ತನ್ನ ಮೇಲೆ ಎರಗಿದರೆ ‘ನಮ್ಮ ಬಳಿ ಅಣ್ವಸ್ತ್ರಗಳಿವೆ’ ಎಂದು ತೋರಿ ಸಿಕೊಳ್ಳಲು ಸೌದಿ ಅರೇಬಿಯಾ ತರಾತುರಿಯಲ್ಲಿ ಪಾಕ್​ನೊಂದಿಗೆ ರಕ್ಷಣಾ ಒಪ್ಪಂದ ಮಾಡಿಕೊಂಡಿದೆ. ಆದರೆ, ಈ ಬೆಳವಣಿಗೆ ಭಾರತದ ಮಟ್ಟಿಗೆ ಕಳವಳಕಾರಿಯಾಗಿದ್ದು, ಹೊಸ ಶತ್ರುವೊಂದು ಉಗಮವಾದಂತೆ ಆಗಿದೆ.

ಪಾಕ್​ಗೆ ಹಲವು ಲಾಭ

  • ಸೌದಿ ಅರೇಬಿಯಾ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವ ಸಂಪನ್ನ ರಾಷ್ಟ್ರ. ಆದ್ದರಿಂದ ಮುಂಬರುವ ದಿನಗಳಲ್ಲಿ ಪಾಕಿಸ್ತಾನ ಮತ್ತು ಅದರ ಸೇನೆಯನ್ನು ಬಲಪಡಿಸಲು ಅದು ಆರ್ಥಿಕ ನೆರವನ್ನು ನೀಡಲಿದೆ. ಈ ನೆರವಿನಿಂದ ಪಾಕ್ ಅಮೆರಿಕ ಮತ್ತು ಚೀನಾದಿಂದ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಖರೀದಿಸಬಹುದು.
  • ಸೌದಿ ಅರೇಬಿಯಾದ ಬಳಿ ಅಮೆರಿಕದ ರಕ್ಷಣಾ ತಂತ್ರಜ್ಞಾನವೂ ಇದೆ. ಹೊಸ ಒಪ್ಪಂದದ ಪ್ರಕಾರ ಪಾಕಿಸ್ತಾನಕ್ಕೆ ಈ ತಂತ್ರಜ್ಞಾನ ವರ್ಗಾವಣೆ ಮಾಡಿದರೆ, ಪಾಕ್​ನಿಂದ ಶಸ್ತ್ರಾಸ್ತ್ರ ನಿರ್ಮಾಣ ಹಾಗೂ ಖರೀದಿಯ ವೇಗ ಹೆಚ್ಚಲಿದೆ.
  • ಆಪರೇಷನ್ ಸಿಂಧೂರದ ಸಮಯದಲ್ಲಿ ಪಾಕಿಸ್ತಾನ ಬಹುತೇಕ ಏಕಾಂಗಿಯಾಗಿತ್ತು. ಯಾವುದೇ ರಾಷ್ಟ್ರ ಮಿಲಿಟರಿ ನೆರವು ನೀಡಲು ಮುಂದೆ ಬಂದಿರಲಿಲ್ಲ. ಆದರೆ, ಈಗ ಸೌದಿಯಂಥ ಬಲಿಷ್ಠ ಮತ್ತು ಆರ್ಥಿಕ ಸಂಪನ್ನ ರಾಷ್ಟ್ರ ತನ್ನೊಂದಿಗೆ ಇದೆ ಎಂಬುದು ಪಾಕ್​ನ ಶಕ್ತಿಯನ್ನು ಹೆಚ್ಚಿಸಲಿದೆ.
  • ಕುಸಿಯುತ್ತಿರುವ ಆರ್ಥಿಕತೆ, ರಾಜಕೀಯ ಅಸ್ಥಿರತೆ ಮತ್ತು ಭಯೋತ್ಪಾದನೆಯನ್ನು ಪ್ರಾಯೋಜಿಸುವ ಕಾರಣದಿಂದ ಪಾಕಿಸ್ತಾನ ಜಾಗತಿಕ ಮಟ್ಟದಲ್ಲಿ ಏಕಾಂಗಿಯಾಗಿದೆ. ಸೌದಿಯ ಜತೆಗಿನ ಈ ಒಪ್ಪಂದದಿಂದ ದಕ್ಷಿಣ ಏಷ್ಯಾದಲ್ಲಿ ಪಾಕಿಸ್ತಾನದ ಪ್ರಭಾವ, ವರ್ಚಸ್ಸು ಹೆಚ್ಚಲಿದೆ. ಅಲ್ಲದೆ, ಚೀನಾ, ಪಾಕಿಸ್ತಾನ ಮತ್ತು ಟರ್ಕಿಯ ತ್ರಿಕೋನ ಶಕ್ತಿ ಏರ್ಪಡುವುದರಿಂದ, ಪಾಕ್ ವಿಶ್ವಾಸ ಹೆಚ್ಚಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net