NEET SS Result: ಬಾಗಲಕೋಟೆ ಮೂಲದ ಡಾ.ಚಿದಾನಂದ ದೇಶಕ್ಕೆ ಪ್ರಥಮ ರ‌್ಯಾಂಕ್!

1229213
Published on

ಬಾಗಲಕೋಟೆ: 2021ನೇ ಸಾಲಿನ ನೀಟ್​ ಸೂಪರ್​ ಸ್ಪೆಷಾಲಿಟಿ ಪರೀಕ್ಷೆಯಲ್ಲಿ ಡಿಎಂ ಗ್ಯಾಸೋಯೆಂಟರಾಲಜಿ(ಡೈಜೆಸ್ಟಿವ್​ ಸಿಸ್ಟಂ) ಮತ್ತು ಡಿಎಂ ಹೆಪಟಾಲಜಿ(ಲಿವರ್​ ಸ್ಪೆಷಲಿಸ್ಟ್​) ಎರಡೂ ವಿಭಾಗದಲ್ಲಿ ಮುಧೋಳ ಮೂಲದ ಡಾ.ಚಿದಾನಂದ ಕುಂಬಾರ ಮೊದಲ ರ‌್ಯಾಂಕ್​ ಪಡೆದಿದ್ದಾರೆ.

ಕಲ್ಲಪ್ಪ ಕುಂಬಾರ ಮತ್ತು ಕಸ್ತೂರಿ ದಂಪತಿಯ ಪುತ್ರ ಡಾ. ಚಿದಾನಂದ ಕುಂಬಾರ. ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡ ಡಾ.ಚಿದಾನಂದ ಅವರನ್ನ ತಂದೆ ಕಷ್ಟಪಟ್ಟು ಬೆಳೆಸಿದರು. ಬಡತನದಲ್ಲೂ ಮಗನ ವಿದ್ಯಾಭ್ಯಾಸಕ್ಕೆ ನೆರವಾದರು.

ರನ್ನಬೆಳಗಲಿಯ ಸರ್ಕಾರಿ ಎಂಪಿಎಸ್​ ಶಾಲೆಯಲ್ಲಿ 1ರಿಂದ7ನೇ ತರಗತಿ, ಬಿವಿವಿಎಸ್​ ಪ್ರೌಢಶಾಲೆಯಲ್ಲಿ 8-10ನೇ ತರಗತಿ, ಜಮಖಂಡಿಯ ಬಿಎಲ್​ಡಿಇ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮುಗಿಸಿದ್ದಾರೆ. ಹುಬ್ಬಳ್ಳಿಯ ಕಿಮ್ಸ್​ನಲ್ಲಿ ಎಂಬಿಬಿಎಸ್ ಮುಗಿಸಿ, ಒಂದು ವರ್ಷದ ಹಿಂದೆ ದೆಹಲಿ ಏಮ್ಸ್​ನಲ್ಲಿ ಎಂಡಿ ಮುಗಿಸಿದ್ದಾರೆ. ಸದ್ಯ ಹೈದರಾಬಾದ್​ನ ಗ್ಲೋಬಲ್ ಆಸ್ಪತ್ರೆಯಲ್ಲಿ ಕೆಸಲ ಮಾಡುತ್ತಿರುವ ಚಿದಾನಂದ, 2021ನೇ ಸಾಲಿನ ಸೂಪರ್​ ಸ್ಪೆಷಾಲಿಟಿ ವಿಭಾಗದ ನೀಟ್​ ಪರೀಕ್ಷೆ ಬರೆದಿದ್ದರು. ಕಳೆದ ಜನವರಿ 31ರಂದು ಫಲಿತಾಂಶ ಪ್ರಕಟಗೊಂಡಿದ್ದು, 759 ಅಂಕಗಳಿಸಿ ರಾಷ್ಟ್ರಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ದೇಶಾದ್ಯಂತ 20 ಸಾವಿರ ಮಂದಿ ಈ ಪರೀಕ್ಷೆ ಬರೆದಿದ್ದರು.

ಡಾ.ಚಿದಾನಂದ ಕುಂಬಾರ ಅವರು ಮೊದಲ ರ‌್ಯಾಂಕ್ ಪಡೆದ ವಿಚಾರ ತಿಳಿದು ಮುಧೋಳ ಶಾಸಕರೂ ಆದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net