ನಕ್ಸಲ್​ ಪ್ರಭಾ ಯಾನೆ ಸಂಧ್ಯಾ ಪೊಲೀಸರಿಗೆ ಶರಣಾಗತಿ! ಉಡುಪಿ, ಶಿವಮೊಗ್ಗ ಜಿಲ್ಲೆಯಲ್ಲಿ ಈಕೆ ಮೇಲಿವೆ ಹತ್ತಾರು ಪ್ರಕರಣ

1205636
Published on

ಶಿವಮೊಗ್ಗ/ಹೆಬ್ರಿ(ಉಡುಪಿ): ಶಿವಮೊಗ್ಗ ಜಿಲ್ಲೆ ಆಗುಂಬೆ ಸಮೀಪದ ಹೊಸಗದ್ದೆಯ ಪ್ರಭಾ ಯಾನೆ ಸಂಧ್ಯಾ ತಮಿಳುನಾಡಿನ ವೆಲ್ಲೂರಿನಲ್ಲಿ ಭಾನುವಾರ ಪೊಲೀಸರಿಗೆ ಶರಣಾಗಿದ್ದಾಳೆ.

ಈಕೆ ಕಾಲೇಜು ದಿನಗಳಲ್ಲೇ ನಕ್ಸಲ್​ ಚಟುವಟಿಕೆಯತ್ತ ಪ್ರಭಾವಿತಳಾಗಿದ್ದಳು. 2010ರವರೆಗೆ ಉಡುಪಿ ಜಿಲ್ಲೆಯ ಕಬ್ಬಿನಾಲೆ, ಹಳ್ಳಿಹೊಳೆ, ಕಾರ್ಕಳ, ನಾಡ್ಪಾಲು, ಆಗುಂಬೆ, ಹೆಬ್ರಿ ಭಾಗಗಳಲ್ಲಿ ನಡೆದ ನಕ್ಸಲ್​ ಚಟುವಟಿಕೆಗಳಲ್ಲಿ ತೊಡಗಿದ್ದಳು. ಹೆಬ್ರಿ ತಾಲೂಕಿನ ನಾಡ್ಪಾಲು ಭೋಜ ಶೆಟ್ಟಿ ಮೇಲೆ ಮಾರಣಾಂತಿಕ ಹಲ್ಲೆ, ಹಳ್ಳಿಹೊಳೆ ಗುರುದತ್ತ ಚಾತ್ರ ಮೇಲಿನ ದಾಳಿ, 15 ವರ್ಷದ ಹಿಂದೆ ಮತ್ತಾವು ಪ್ರದೇಶದಲ್ಲಿ ಸಂಭವಿಸಿದ ಬಾಂಬ್​ ದಾಳಿಯಲ್ಲೂ ಈಕೆ ಪ್ರಮುಖ ಆರೋಪಿಯಾಗಿದ್ದಳು. ಹೆಬ್ರಿ ಠಾಣೆಯಲ್ಲಿ ಎರಡು ಪ್ರಕರಣ ಸೇರಿ ಜಿಲ್ಲೆಯಲ್ಲಿ ಪ್ರಭಾ ಯಾನೆ ಸಂಧ್ಯಾ ವಿರುದ್ಧ 7 ಪ್ರಕರಣಗಳು ದಾಖಲಾಗಿವೆ.

ಶಿವಮೊಗ್ಗ ಜಿಲ್ಲೆಯಲ್ಲೂ ಈಕೆಯ ವಿರುದ್ಧ 4 ಪ್ರಕರಣ ದಾಖಲಾಗಿವೆ. 2007ರಲ್ಲಿ ಆಗುಂಬೆ ಸಮೀಪ ಕೆಎಸ್​ಆರ್​ಟಿಸಿ ಬಸ್​ಗೆ ಬೆಂಕಿ ಹಚ್ಚಿದ ಆರೋಪವೂ ಈಕೆ ಮೇಲಿದೆ. 2005ರಲ್ಲಿ ಸಾಕೇತ್​ ರಾಜನ್​ ಎನ್​ಕೌಂಟರ್​ ಬಳಿಕ ಪಶ್ಚಿಮಟ್ಟದಲ್ಲಿ ನಕ್ಸಲ್​ ಚಳವಳಿಯನ್ನು ಕಟ್ಟಿ ಬೆಳೆಸುವ ಜವಾಬ್ದಾರಿ ಹೊತ್ತವರ ಪೈಕಿ ಹೊಸಗದ್ದೆ ಪ್ರಭಾ ಕೂಡ ಒಬ್ಬಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net