ಸಂಪಾದಕೀಯ | ರಾಷ್ಟ್ರೀಯ ನೀತಿ ಅಗತ್ಯ

women safety
Published on

ದೇಶದಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ. ಕಾನೂನಿನ ಭಯವೇ ಇಲ್ಲದಂತೆ ದುರುಳರು ರಾಕ್ಷಸೀ ಕೃತ್ಯಗಳನ್ನು ನಡೆಸುತ್ತಿದ್ದಾರೆ. ಮಹಿಳಾ ಮುಖ್ಯಮಂತ್ರಿಯೇ ಇರುವ ಪಶ್ಚಿಮ ಬಂಗಾಳದ ಪರಿಸ್ಥಿತಿಯಂತೂ ಕಳವಳಕಾರಿಯಾಗಿದೆ. ಪ.ಬಂಗಾಳದ ಪಶ್ಚಿಮ ಬರ್ದಮಾನ್ ಜಿಲ್ಲೆಯ ದುರ್ಗಾಪುರದ ಖಾಸಗಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ತಲ್ಲಣದ ಜತೆಗೆ ದೇಶದಾದ್ಯಂತ ಭಾರಿ ಆಕ್ರೋಶವನ್ನು ಹುಟ್ಟುಹಾಕಿದೆ. ಕೋಲ್ಕತ್ತದ ಖಾಸಗಿ ವೈದ್ಯಕೀಯ ಕಾಲೇಜಿನ 26 ವರ್ಷದ ಯುವತಿಯ ಅತ್ಯಾಚಾರ ಮತ್ತು ಹತ್ಯೆಯ ದಾರುಣ ಘಟನೆಯ 14 ತಿಂಗಳಲ್ಲೇ ಬರ್ದಮಾನ್ ಕೃತ್ಯ ಸಂಭವಿಸಿದೆ.

ಮಹಿಳೆಯರಿಗೆ ಸುರಕ್ಷಿತ ವಾತಾವರಣ ಕಲ್ಪಿಸಬೇಕಾದ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಪ್ರಯತ್ನಿಸಬೇಕಾದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂಥ ಸೂಕ್ಷ್ಮ ಸಂದರ್ಭದಲ್ಲಿ ಸಂವೇದನೆಯನ್ನೇ ಮರೆತು, ವಿವಾದಾತ್ಮಕ ಹೇಳಿಕೆ ನೀಡಿರುವುದು ಖಂಡನೀಯ. ‘ಯುವತಿಯರು ರಾತ್ರಿ ಹೊತ್ತಿನಲ್ಲಿ ಹೊರಗಡೆ ಹೋಗಬಾರದು. ಇದ್ದಲ್ಲೇ ಇದ್ದು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು’ ಎಂದು ಹೇಳುವ ಮೂಲಕ ಮಮತಾ ಬ್ಯಾನರ್ಜಿ ಉತ್ತರದಾಯಿತ್ವದಿಂದ ನುಣುಚಿಕೊಳ್ಳಲು ಯತ್ನಿಸುತ್ತಿರುವುದು ಸ್ಪಷ್ಟ. ಅಷ್ಟೇ ಅಲ್ಲ, ‘ಇತರ ರಾಜ್ಯಗಳಲ್ಲೂ ಇಂಥ ಕೃತ್ಯಗಳು ನಡೆದಿವೆಯಲ್ಲ...’ ಎಂದು ಹೇಳುವ ಮೂಲಕ ಮಹಿಳೆಯರ ಸುರಕ್ಷತೆ ಬಗೆಗೆ ಉಡಾಫೆಯ ಮಾತುಗಳನ್ನಾಡಿದ್ದಾರೆ. ಸೂಕ್ಷ್ಮ ಹಾಗೂ ಗಂಭೀರ ಸನ್ನಿವೇಶಗಳಲ್ಲೂ ರಾಜಕೀಯ ಲಾಭದ ಬಗ್ಗೆಯೇ ಯೋಚಿಸುವ ಇಂಥ ತಥಾಕಥಿತ ನಾಯಕ/ನಾಯಕಿಯರಿಗೆ ವಿವೇಚನೆ ಮತ್ತು ವಿವೇಕದ ಕೊರತೆ ಕಾಡುತ್ತಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್​ಸಿಆರ್​ಬಿ) ಇತ್ತೀಚೆಗೆ 2023ರ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, 2023ರಲ್ಲಿ ಇಂಥ 34,691 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 1,111 ಅತ್ಯಾಚಾರ ಪ್ರಕರಣಗಳಿವೆ. ಹಾಗಂತ ದೇಶದ ಇತರ ರಾಜ್ಯಗಳ ಸ್ಥಿತಿಯೂ ಭಿನ್ನವೇನಿಲ್ಲ. ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ದೇಶದಲ್ಲೇ ಅತಿ ಹೆಚ್ಚು ಸಂಭವಿಸಿರುವುದು ಉತ್ತರ ಪ್ರದೇಶದಲ್ಲಿ (663,81). ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ (47,101), ರಾಜಸ್ಥಾನ (45,450) ಇದೆ. ಕರ್ನಾಟಕದಲ್ಲಿ 2022ರಲ್ಲಿ 595 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದರೆ, 2023ರಲ್ಲಿ 656 ಪ್ರಕರಣ ದಾಖಲಾಗಿವೆ. ಇತ್ತೀಚೆಗೆ ಮೈಸೂರಿನಲ್ಲಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ ನಡೆದಿದ್ದು, ಆತಂಕ ಮೂಡಿಸಿದೆ.

ಮಹಿಳಾ ಸುರಕ್ಷತೆಯ ದೃಷ್ಟಿಯಲ್ಲಿ ರಾಷ್ಟ್ರೀಯ ನೀತಿಯನ್ನು ರೂಪಿಸಿ, ಜಾರಿಗೆ ತರಲು ಇದು ಸಕಾಲ. ಕಾನೂನಿನ ಕ್ರಮದ ಜತೆಗೆ ಮಹಿಳೆಯರ ಬಗೆಗಿನ ಮನೋಭಾವ ಕೂಡ ಸಮಾಜದಲ್ಲಿ ಬದಲಾಗಬೇಕಿದೆ. ಹೆಣ್ಣನ್ನು ಭೋಗದ ವಸ್ತುವಾಗಿ ಬಿಂಬಿಸುತ್ತಿದ್ದು, ಹೆಣ್ಣಿನ ಶಕ್ತಿ, ಅಸ್ಮಿತೆಯನ್ನು ಗೌಣವಾಗಿಸಲಾಗುತ್ತಿದೆ. ಶಿಕ್ಷಣ ಹಂತದಲ್ಲೂ ನೈತಿಕ ಮೌಲ್ಯ, ಸಂಸ್ಕಾರಗಳಿಗೆ ಒತ್ತು ಸಿಗಬೇಕಿದೆ. ಸಮಾಜದಲ್ಲಿ ಮಹಿಳೆ ಇಂದಿಗೂ ಅಸುರಕ್ಷಿತ ಭಾವ ಎದುರಿಸುತ್ತಿದ್ದಾಳೆ ಎಂಬುದೇ ಒಂದು ಕಪುಚುಕ್ಕೆ. ಇಂಥ ಸೂಕ್ಷ್ಮ ವಿಷಯಗಳಿಗೆ ಪರಿಹಾರವನ್ನು ಸಂವೇದನೆಯ ನೆಲೆಯಲ್ಲಿ ಹುಡುಕಬೇಕಿದೆ. ಯಾರದೋ ಮೇಲೆ ತಪ್ಪು ಹೊರಿಸಿ, ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ. ಹೆಣ್ಣಿಗೆ ಸುರಕ್ಷಿತ ವಾತಾವರಣ ಕಲ್ಪಿಸಲು ಸಂಘಟಿತ ಪ್ರಯತ್ನಗಳಾಗಬೇಕು. ಅಪರಾಧ ತಡೆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ, ಸುರಕ್ಷಿತ ವಾತಾವರಣ ನಿರ್ವಿುಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net