

ತುಮಕೂರು: ಪ್ರಬುದ್ಧ ಹಾಗೂ ಪ್ರಜಾಪ್ರಭುತ್ವ ರಾಷ್ಟ್ರ ಕಟ್ಟಲು ಶಿಕ್ಷಣದಿಂದ ಸಾಧ್ಯ, ಸಕಾರಾತ್ಮಕ ಚಿಂತನೆಗಳಿಂದಷ್ಟೇ ಬದುಕು ಕಟ್ಟಲು ಸಾಧ್ಯ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀವೀರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನ ಘಟಕ ಐಕ್ಯೂಎಸಿ ಮತ್ತು ಪಿಎಂಇಬಿ ವಿಭಾಗಗಳ ವತಿಯಿಂದ ಬುಧವಾರ ಆಯೋಜಿಸಿದ್ದ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳ ಸ್ವಾಗತ ಅನಿಕೇತನ ಕಾರ್ಯಕ್ರಮ ಉದ್ಘಾಟಿಸಿ, ಆಶೀರ್ವಚನ ನೀಡಿದರು.
ಡಾ.ಅಬ್ದುಲ್ ಕಲಾಂ, ಸ್ವಾಮಿ ವಿವೇಕಾನಂದರ ಜೀವನಾದರ್ಶ, ವ್ಯಕ್ತಿತ್ವ, ತತ್ವ್ತ, ಆತ್ಮವಿಶ್ವಾಸ, ನಡವಳಿಕೆ, ಆಲೋಚನೆ, ಸರಿ ಆಯ್ಕೆಗಳನ್ನು ಅಳವಡಿಸಿಕೊಂಡರೆ ಅದುವೇ ನಿಮ್ಮ ಬೆಳವಣಿಗೆಯ ಮೇಲೆ ಪ್ರಭಾವ ಬೀರಲಿದೆ ಎಂದರು.
ಸಮಾಜ ಸೇವೆ ಎಂಬುದು ಋಣ ಸಂದಾಯವಿದ್ದಂತೆ ಎಂಬ ವಿವೇಕಾನಂದರ ಮಾತುಗಳನ್ನು ನಾವು ಮರೆಯಬಾರದು. ಯೌವ್ವನ ಎಂದರೆ ಶಾರೀರಿಕ, ಮಾನಸಿಕ, ಬೌದ್ಧಿಕ ಮತ್ತು ನೈತಿಕವಾಗಿ ಸದೃಢರೂ ಸಬಲರೂ ಆಗಿರುವ ವಯೋಮಾನ. ಇವೆಲ್ಲವೂ ಸಕಾರಾತ್ಮಕವಾಗಿ ಬಳಕೆಯಾಗುವುದು ಶಿಕ್ಷಣದಿಂದ ಸಾಧ್ಯ ಎಂದರು.
ವಿದ್ಯಾರ್ಥಿ ಜೀವನದಲ್ಲಿ ಅವಕಾಶ ವಂಚಿತರಾಗದೆಯೇ, ಅದ್ಭುತ ದೃಷ್ಟಿಕೋನದ ಶಿಕ್ಷಣಕ್ಕೆ ಬೆಲೆಕೊಟ್ಟು, ಶಿಕ್ಷಣದ ನಿಜವಾದ ಉದ್ದೇಶ ತಿಳಿದುಕೊಂಡಾಗಲೇ ಪ್ರತಿಯೊಬ್ಬರೂ ವಿಕಸನಗೊಳ್ಳುವುದು ಎಂದು ಹೇಳಿದರು.
ಭಾವನಾತ್ಮಕ ಬೌದ್ಧಿಕ ಸಾಮಾಜಿಕ ಸಂಬಂಧ ಬದುಕು ರೂಪಿಸುತ್ತದೆ, ತಾಯಿ ಮೊದಲ ಗುರುವಾದರೆ, ಶಿಕ್ಷಕ ಪೂರ್ಣ ಬದುಕಿನ ಗುರುವಾಗುತ್ತಾನೆ. ಶಿಕ್ಷಣ ಸಂಬಂಧಗಳು ಜೀವನದ ಕುರಿತು ಸ್ವಾಮಿ ವಿವೇಕಾನಂದರು ಹೇಳಿರುವ ವಿಚಾರಗಳನ್ನು ವಿದ್ಯಾರ್ಥಿಗಳು ಅರಿತು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ತುಮಕೂರು ವಿವಿ ಮೌಲ್ಯಮಾಪನ ಕುಲಸಚಿವ ಡಾ.ಕೆ.ಪ್ರಸನ್ನ ಕುಮಾರ್, ವಿದ್ಯಾರ್ಥಿ ಕ್ಷೇಮಪಾಲನ ಘಟಕದ ನಿರ್ದೇಶಕ ಪ್ರೊ.ಪಿ.ಪರಮಶಿವಯ್ಯ, ಐಕ್ಯೂಎಸಿ ನಿರ್ದೇಶಕ ಡಾ.ಬಿ.ರಮೇಶ್, ಪಿಎಂಇಬಿ ನಿರ್ದೇಶಕ ಡಾ.ಬಿ.ಟಿ.ಸಂಪತ್ ಕುಮಾರ್, ಪ್ರಾಧ್ಯಾಪಕ ಡಾ. ರೂಪೇಶ್‌ಕುಮಾರ್ ಮತ್ತಿತರರು ಇದ್ದರು.
ನೂರಾರು ಕನಸುಗಳನ್ನು ಹೊತ್ತು ಸಂಸ್ಥೆಗೆ ಸೇರಿದ್ದೀರಿ. ವಿವಿ ಘನತೆ, ಗೌರವ, ಶಿಸ್ತು ಕಾಪಾಡುವಲ್ಲಿ ಹಿಂದೆ ಬೀಳಬೇಡಿ. ಎಲ್ಲ ವಿದ್ಯಾರ್ಥಿಗಳಿಗೂ ನಾವೇ ಪೋಷಕರು. ನಿಮ್ಮ ತಪ್ಪುಗಳನ್ನು ಸರಿಪಡಿಸಿ, ಸರಿದಾರಿಯತ್ತ ಕೊಂಡೊಯ್ಯುವಲ್ಲಿ, ಸಮಾಜಮುಖಿ ಶಿಲ್ಪಿಗಳಾಗಿ ನಿಮ್ಮನ್ನು ರೂಪಿಸುವಲ್ಲಿ ನಮ್ಮ ಶಿಕ್ಷಕರು ಹಗಲಿರುಳು ಶ್ರಮಿಸುತ್ತಾರೆ. | ಪ್ರೊ.ಎಂ.ವೆಂಕಟೇಶ್ವರಲು ಕುಲಪತಿ ಅಸ್ತಿತ್ವ ಮತ್ತು ಜ್ಞಾನವೇ ಅನಂತ ಮಾರ್ಗ, ವಿಶ್ವವಿದ್ಯಾನಿಲಯದ ಸಂಪನ್ಮೂಲಗಳನ್ನು ಬಳಸಿಕೊಂಡು ಸಾಧನೆ ಮಾಡಿ, ಮುಂದಿನ ಎರಡು ವರ್ಷ ನಿಮ್ಮ ಭವಿಷ್ಯ ರೂಪಿಸಿಕೊಳ್ಳುವುದರಲ್ಲಿ ನಮ್ಮ ಸಂಸ್ಥೆ ಮೈಲಿಗಲ್ಲಾಗಲಿ.|ಪ್ರೊ.ಕೇಶವ ಕುಲಸಚಿವ
A nation enlightened by education;