ಜಪಾನ್​ನಲ್ಲಿ ಸ್ವಾಮಿ ವಿವೇಕಾನಂದರನ್ನು ನೆನೆದ ನರೇಂದ್ರ ಮೋದಿ

New Project
Published on

ಟೋಕಿಯೋ(ಜಪಾನ್): ಜಪಾನ್​ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಟೋಕಿಯೋದಲ್ಲಿ ಸೋಮವಾರ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನಿ ಅವರು ವೇದಿಕೆ ಹತ್ತಿರ ಬರುತ್ತಿದ್ದಂತೆ 'ಮೋದಿ, ಮೋದಿ, ಜೈಶ್ರೀರಾಮ್​' ಎಂಬ ಘೋಷಣೆ ಮೊಳಗಿದವು.

ಜಪಾನ್‌ನಲ್ಲಿರುವ ಭಾರತೀಯ ಸಮುದಾಯಕ್ಕೆ ನನ್ನ ಕೃತಜ್ಞತೆಗಳು ಎನ್ನುತ್ತಾ ಭಾಷಣ ಆರಂಭಿಸಿದ ನರೇಂದ್ರ ಮೋದಿ, ಜಪಾನ್​ ಸಂಸ್ಕೃತಿಯನ್ನು ಸ್ವಾಮಿ ವಿವೇಕಾನಂದರು ಹೊಗಳುತ್ತಿದ್ದರು. ಜಪಾನ್​ನಿಂದ ವಿವೇಕಾನಂದರು ಸ್ಫೂರ್ತಿ ಪಡೆದಿದ್ದರು ಎಂದು ಸ್ಮರಿಸಿದರು. ನಾನು ಜಪಾನ್​ಗೆ ಬಂದಾಗಲೆಲ್ಲ ಇಲ್ಲಿನ ಜನರಿಂದ ಅಪಾರ ಪ್ರೀತಿ ಸಿಗುತ್ತದೆ. ಭಾರತದ ಅನೇಕರು ಜಪಾನ್​​ನಲ್ಲಿ ಉಳಿದುಕೊಂಡು, ಇಲ್ಲಿನ ಸಂಸ್ಕೃತಿ ಅಳವಡಿಸಿಕೊಂಡಿದ್ದೀರಿ. ಆದರೂ, ಭಾರತದ ಸಂಸ್ಕೃತಿ ಮತ್ತು ಭಾಷೆ ಬಗ್ಗೆ ಅಪಾರ ಪ್ರೀತಿ ಹೊಂದಿರುವುದು ಹೆಮ್ಮೆಯ ವಿಚಾರ ಎಂದರು.

ಭಾರತ, ಅಮೆರಿಕ, ಜಪಾನ್ ಹಾಗೂ ಆಸ್ಟ್ರೇಲಿಯಾ ರಾಷ್ಟ್ರಗಳು ರಚನೆ ಮಾಡಿಕೊಂಡಿರುವ ಬಲಿಷ್ಠ ಕ್ವಾಟ್ ಕೂಡದ ಮಹತ್ವದ ಸಭೆ ಸೋಮವಾರ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮೋದಿಯವರಿಗೆ ಆಹ್ವಾನ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮೋದಿಯವರು ಭೇಟಿ ಕೊಟ್ಟಿದ್ದು, ಅವರಿಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ಕಳೆದ 8 ವರ್ಷಗಳಲ್ಲಿ ಜಪಾನ್‌ಗೆ 5ನೇ ಭೇಟಿ ಇದಾಗಿದೆ.

ನಾವೀನ್ಯತೆಯ ಹೂಡಿಕೆಗಳು, ತಂತ್ರಜ್ಞಾನದಿಂದ ಜವಳಿ, ಸುಧಾರಣೆಗಳು ಸ್ಟಾರ್ಟ್‌ಅಪ್‌ಗಳು ಸೇರಿ ವಿವಿಧ ವಿಷಯಗಳ ಮೇಲೆ ಈ ಸಭೆ ಕೇಂದ್ರೀಕೃತವಾಗಿದೆ. ಭಾರತದ ಕಡೆಗೆ ಹೆಚ್ಚಿನ ಉತ್ಸಾಹವಿದೆ ಮತ್ತು ಭಾರತದ ಯುವಕರ ಉದ್ಯಮಶೀಲತೆಯ ಕೌಶಲದತ್ತ ಆಕರ್ಷಣೆ ಹೆಚ್ಚುತ್ತಿದೆ ಎಂದು ನರೇಂದ್ರ ಮೋದಿ ಟ್ವೀಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net