

ವಿಜಯನಗರ: ಆಕೆ ವಿದ್ಯಾವಂತೆ, ರೂಪವತಿ. ಎಂಸ್ಸಿ ಓದು ಮುಗಿಸಿದ್ದ ಆಕೆಗೆ ಪಿಎಚ್‌ಡಿ ಮಾಡಬೇಕು ಎಂಬ ಮಹದಾಸೆ. ಇದಕ್ಕೆ ಮನೆಯಲ್ಲಿ ವಿರೋಧ ಬಂತೆಂದು ದುಡುಕಿದ ಯುವತಿ, ಮಂಗಳವಾರ ರಾತ್ರಿ ಬಾರದ ಲೋಕಕ್ಕೆ ಹೋಗಿಬಿಟ್ಟಿದ್ದಾಳೆ. 'ಅಯ್ಯೋ ಮಗಳೇ, ಆ ಒಂದು ಮಾತಿಗೆ ಎಂಥಾ ನೋವು ಕೊಟ್ಟವ್ವಾ...' ಎಂದು ಮೃತಳ ತಂದೆ ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಇಂತಹ ಘಟನೆ ವಿಜಯನಗರ ಜಿಲ್ಲೆಯ ಕೊಟ್ಟುರು ತಾಲೂಕಿನ ಉಜ್ಜಿನಿ ಗ್ರಾಮದಲ್ಲಿ ಸಂಭವಿಸಿದೆ. 24 ವರ್ಷದ ಯು.ಪೂಜಾ ಮೃತ ದುರ್ದೈವಿ.
ಪಿಎಚ್‌ಡಿ ಮಾಡುತ್ತೇನೆ ಎಂದು ಮನೆಯಲ್ಲಿ ಪೂಜಾ ಹೇಳಿದ್ದಕ್ಕೆ ತಂದೆ ನಾಗರಾಜ್, ಈಗ ಹಣವಿಲ್ಲ. ಪಿಎಚ್‌ಡಿ ಓದು ಸದ್ಯಕ್ಕೆ ಬೇಡ ಎಂದಿದ್ದಾರೆ. ಆದರೂ ನಾನು ಓದಲೇಬೇಕೆಂದು ಹಠ ಮಾಡಿದ್ದು, ತಂದೆ ಒಪ್ಪಿಗೆ ಸೂಚಿಸಿರಲಿಲ್ಲ. ಇಷ್ಟಕ್ಕೆ ಮನನೊಂದ ಪೂಜಾ, ಕೋಣೆಯ ಬಾಗಿಲು ಹಾಕಿಕೊಂಡು ನೇಣಿಗೆ ಕೊರಳೊಡ್ಡಿದ್ದಾಳೆ. ಎಷ್ಟೊತ್ತಾದರೂ ರೂಂನ ಬಾಗಿಲು ತೆರೆಯದಿದ್ದಾಗ, ಬಾಗಿಲು ಒಡೆದು ನೋಡಿದಾಗ ಮಗಳು ಶವವಾಗಿದ್ದಳು ಎಂದು ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಮೃತಳ ತಂದೆ ದೂರು ನೀಡಿದ್ದಾರೆ.