

ಬೆಂಗಳೂರು: ಡಿ.ಕೆ. ಶಿವಕುಮಾರ್ ಕಲೆಕ್ಷನ್ ಗಿರಾಕಿ, ಪಟ್ಟು ಹಿಡಿದು ಡಿಕೆಶಿ ಅವರನ್ನು ಅಧ್ಯಕ್ಷನ್ನಾಗಿ ಮಾಡಿದ್ದು ನಾವು, ಆದರೂ ತಕ್ಕಡಿ ಏಳುತ್ತಿಲ್ಲ... ಎಂದು ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ಮತ್ತು ಸಂಸದ ಉಗ್ರಪ್ಪ ನಡೆಸಿದ ಸಂಭಾಷಣೆ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದ್ದು, ಸ್ವಪಕ್ಷೀಯರಿಂದಲೇ ತಮ್ಮ ವಿರುದ್ಧ ಮಾತನಾಡಿರುವುದು ಡಿಕೆಶಿಗೆ ಭಾರೀ ಮುಜುಗರ ತಂದೊಡ್ಡಿದೆ. ಅತ್ತ ಇದನ್ನೇ ಬಂಡವಾಳ ಮಾಡಿಕೊಂಡ ಬಿಜೆಪಿ, ಸಾಮಾಜಿಕ ಜಾಲತಾಣದಲ್ಲಿ ಡಿಕೆಶಿಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಳ್ಳುತ್ತಿದೆ. ಇದರ ಬೆನ್ನಲ್ಲೇ ಸಂಸದ ಉಗ್ರಪ್ಪ ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳ ವಿರುದ್ಧ ಹರಿಹಾಯ್ದಿದ್ದಾರೆ. 'ಡಿಕೆಶಿ ಅವರನ್ನು ಅಧ್ಯಕ್ಷನ್ನಾಗಿ ಮಾಡಿದ್ದೇವೆ, ತಕ್ಕಡಿ ಏಳುತ್ತಿಲ್ಲ' ಎಂದು ನಾನು ಹೇಳಿದ್ದು ನಿಜ ಎಂದೂ ಒಪ್ಪಿಕೊಂಡಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಗ್ರಪ್ಪ, ಕಮೀಷನ್ ಹಾಗೂ ಭ್ರಷ್ಟಾಚಾರ ಕಾಂಗ್ರೆಸ್ಗೆ ದೂರ. ನಮ್ಮ ಅಧ್ಯಕ್ಷರಿಗಂತೂ ದೂರ. ಭ್ರಷ್ಟಾಚಾರಾದ ಗಂಗೋತ್ರಿ ಹರಿಸುತ್ತಿರುವುದು ಬಿಜೆಪಿಯವರು. ರಾಜ್ಯ ಕಾಂಗ್ರೆಸ್ನಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಎಲ್ಲರೂ ಒಟ್ಟಾಗಿ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಡಿಕೆಯನ್ನು ಮೂರು ದಶಕದಿಂದ ಬಲ್ಲೆ. ಅವರು ರಾಜ್ಯದ ಬಗ್ಗೆ ಬದ್ಧತೆ ಇರುವ ರಾಜಕಾರಣಿ. ಪಾವಗಡದಲ್ಲಿ ಸೋಲಾರ್ ಪಾರ್ಕ್ ಆಗಲು ಇವರೇ ಕಾರಣ ಎಂದು ಹೊಗಳಿದರು.
ನಿನ್ನೆ(ಮಂಗಳವಾರ) ಕೆಪಿಸಿಸಿ ಮಾಧ್ಯಮ ವಿಭಾಗದ ಕೋ ಆರ್ಡಿನೇಟರ್ ಸಲೀಂ ನನ್ನ ಕಿವಿಯಲ್ಲಿ ಗುನುಗುಟ್ಟಿದರು. ಜನ ಹೀಗೆ ಮಾತನಾಡುತ್ತಿದ್ದಾರೆ. ನೀರಾವರಿ ಹಗರಣದ ಬಗ್ಗೆ ಬಿಜೆಪಿಯವರು ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಹೇಳಿದ್ದರು. ಸಲೀಂ ಹೇಳಿದ್ದನ್ನು ಮಾಧ್ಯಮದಲ್ಲಿ ಬಿಂಬಿಸುತ್ತಿದ್ದಾರೆ. ಇದು ಪತ್ರಿಕಾ ಮೌಲ್ಯಕ್ಕೆ ಸರಿಯಾದುದಲ್ಲ. ಡಿಕೆಶಿ ಆಸ್ತಿ ಗಳಿಸಿದ್ದು ರಾಜಕೀಯದಿಂದಲ್ಲ, ಅವರ ವ್ಯವಹಾರದಿಂದ. ಅಧ್ಯಕ್ಷರು ಎಂದೂ ಕಮೀಷನ್ ಪ್ರವೃತ್ತಿ ಬೆಳೆಸಿದವರಲ್ಲ ಎಂದ ಉಗ್ರಪ್ಪ, ಮಾಧ್ಯಮಗಳಿಗೆ ಮೌಲ್ಯ ಇರಬೇಕು. ಏನು ಪ್ರಸಾರ ಮಾಡಬೇಕು, ಏನು ಪ್ರಸಾರ ಮಾಡಬೇಕೆಂದು ಅರಿವಿರಬೇಕಿತ್ತು. ಸಲೀಂ ಏನೋ ಹೇಳಿದ್ದಾರೆ. ಕಲೆಕ್ಷನ್ ಗಿರಾಕಿ ಎಂದು ಹೇಳಿದ್ದು ನೆನಪಿಲ್ಲ ಎಂದು ನುಣಿಚಿಕೊಂಡರು.
ಡಿಕೆಶಿ ಅವರನ್ನು ಅಧ್ಯಕ್ಷನ್ನಾಗಿ ಮಾಡಿದ್ದೇವೆ, ತಕ್ಕಡಿ ಏಳುತ್ತಿಲ್ಲ ಎಂದು ಹೇಳಿದ್ದು ನಿಜ. ಇನ್ನಷ್ಟು ಚೆನ್ನಾಗಿ ಆಗಬೇಕೆಂಬುದು ನಮ್ಮ ಉದ್ದೇಶ ಎಂದು ಉಗ್ರಪ್ಪ ಸ್ಪಷ್ಟನೆ ನೀಡಿದರು.