

ಬೆಂಗಳೂರು: ಪತಿಯ ಮೇಲಿನ ಸಿಟ್ಟಿನಿಂದಾಗಿ ಸ್ವಂತ ಮಗನನ್ನು ತಾಯಿಯೇ ಸ್ನೇಹಿತನೊಂದಿಗೆ ಸೇರಿ
ಅಪಹರಿಸಿಕೊಂಡು ಹೋಗಿರುವ ವಿಚಿತ್ರ ಘಟನೆ ನಗರದಲ್ಲಿ ನಡೆದಿದೆ.
ಕೆ.ಆರ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕೊಡಿಗೇಹಳ್ಳಿಯ ಕಾಸಾ ಗ್ರಾಂಡ್ ಅಪಾರ್ಟ್‌ಮೆಂಟ್ ಬಳಿ ಈ ಘಟನೆ ನಡೆದಿದೆ. ಈ ಸಂಬಂಧ ಠಾಣೆಯಲ್ಲಿ ಮಗುವಿನ ತಾತ ಸುಂದರ್ ರಾಜ್ ಪ್ರಕರಣ ದಾಖಲಿಸಿದ್ದಾರೆ.
ತಾತ ತನ್ನ ಮೊಮ್ಮಗನನ್ನು ಶಾಲೆ ಬಿಡಲು ಬಂದಾಗ ಈ ಘಟನೆ ನಡೆದಿದೆ. ೬ ವರ್ಷದ ಬಾಲಕನ ತಂದೆ ಸಿದ್ಧಾರ್ಥ ಗುರುವಾರ ಚೆನ್ನೈ ನ್ಯಾಯಾಲಯದಲ್ಲಿ ವಿಚಾರಣೆ ಇದ್ದ ಸಂಬಂಧ ಚೆನ್ನೈಗೆ ತೆರಳಿದರು. ಈ ಸಂದರ್ಭದಲ್ಲಿ ಸಿದ್ಧಾರ್ಥ್ ತಂದೆ ಸುಂದರ್ ರಾಜ್ ತನ್ನ ಮೊಮ್ಮಗನನ್ನು ಶಾಲೆಗೆ ಬಿಡಲು ಗುರುವಾರ ಬೆಳಿಗ್ಗೆ ಅಪಾರ್ಟ್‌ಮೆಂಟ್ ಮುಂಭಾಗದಲ್ಲಿ ಬಸ್ ಕಾಯುತ್ತಿದ್ದಾಗ ಮಗುವಿನ ತಾಯಿ ಅನುಪಮ ತನ್ನ ಗಂಡನ ಮೇಲಿನ ಸಿಟ್ಟಿನಿಂದ ಬೆಳಿಗ್ಗೆ ೮:೩೦ ವೇಳೆಯಲ್ಲಿ ತನ್ನ ಸ್ನೇಹಿತ ನೀಲಕಂಠ ತೆಯಲ್ಲಿ ಕಾರಿನಲ್ಲಿ ಬಂದು ಮಗುವನ್ನು ತಾತನಿಂದ ಮಗನನ್ನು ಕಸಿದುಕೊಂಡು ತೆರಳಿದ್ದಾರೆ. ಮಗುವನ್ನು ತಾತನಿಂದ ಕಸಿದುಕೊಂಡು ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸುಂದರ್ ರಾಜ್ ಅವರು ಸೊಸೆ ಅನುಪಮ ಅಪರಿಚಿತರೊಂದಿಗೆ ಕಾರಿನಲ್ಲಿ ಬಂದು ತನ್ನ ಮೊಮ್ಮಗನನ್ನು ಅಪಹರಿಸಿಕೊಂಡು ಹೋಗಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.
ಸ್‌ಟಾವೇರ್ ಉದ್ಯೋಗಿಯಾಗಿರುವ ಸಿದ್ಧಾರ್ಥ ಜತೆ ಅನುಪಮ ಅವರು ೨೦೧೪ರಲ್ಲಿ ವಿವಾಹವಾಗಿದ್ದರು. ದಂಪತಿಗೆ ಒಂದು ಗಂಡುಮಗುವಿದ್ದು, ಬಳಿಕ ಇಬ್ಬರ ಮಧ್ಯೆ ಕೌಟುಂಬಿಕ ಕಲಹ ಉಂಟಾದ ಹಿನ್ನೆಲೆಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ೨೦೧೬ರಲ್ಲಿ ದೂರಾಗಿದ್ದರು. ಆ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ. ೨೦೨೨ ರಲ್ಲಿ ಅನುಪಮ ತನಗೆ ಗಂಡ ಮತ್ತು ಮಗು ಬೇಡವೆಂದು ತಿಳಿಸಿದ್ದು, ಚೆನ್ನೈ ವೆಲ್ಪೇರ್ ಕಮಿಟಿ ಆರು ವರ್ಷದ ಮಗುವನ್ನು ಪತಿ ಸಿದ್ಧಾರ್ಥಗೆ ವಶಕ್ಕೆ ನೀಡಿ ಆದೇಶಿಸಿತ್ತು. ನಂತರ ಸಿದ್ಧಾರ್ಥ ತನ್ನ ತಂದೆ ಮತ್ತು ಮಗನೊಂದಿಗೆ ಬೆಂಗಳೂರಿನ ಮನೆಯಲ್ಲಿ ವಾಸವಾಗಿದ್ದರು.
ಮಗ ಸಿದ್ಧಾರ್ಥ ವಿರುದ್ಧ ಚೆನ್ನೈನಲ್ಲಿ ನಾಲ್ಕೈದು ಪ್ರಕರಣ ದಾಖಲಿಸಿರುವ ಅನುಪಮ ತನ್ನ ಗಂಡನ ಮೇಲಿನ ಸಿಟ್ಟಿನಿಂದ ಮಗುವನ್ನು ಅಪಹರಿಸಿಕೊಂಡು ಹೋಗಿದ್ದಾರೆ ಎಂದು ತಾತ ಆರೋಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.