

ಭುವನೇಶ್ವರ: ಕರುಳ ಕುಡಿಯೊಂದನ್ನು ಕಳೆದುಕೊಂಡ ತಾಯಿ, ತನ್ನ ಇನ್ನೊಬ್ಬ ಮಗನೊಂದಿಗೆ ವಿಧಾನಸಭೆಯ ಮುಂದೆಯೇ ಬೆಂಕಿ ಹಚ್ಚಿಕೊಂಡು ಸಾಯಲು ಯತ್ನಿಸಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಪೊಲೀಸರು ನ್ಯಾಯ ಒದಗಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ತಾವು ಈ ದುಸ್ಸಾಹಸಕ್ಕೆ ಕೈ ಹಾಕಿದ್ದಾಗಿ ತಾಯಿ ಮಗ ಹೇಳಿಕೊಂಡಿದ್ದಾರೆ.
ಒಡಿಶಾದ ಸುಲೋಚನಾ ದಾಸ್ ಮತ್ತು ಆಕೆಯ ಮಗ ಸುಬ್ರತ್ ದಾಸ್ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದವರು. ಸುಲೋಚನ ಅವರ ಹಿರಿಯ ಮಗ ಅಂಬ್ರುತ್ ದಾಸ್ 2019ರ ಜುಲೈ 20ರಂದು ಕೊಲೆಯಾಗಿದ್ದಾನೆ. ಮೊದಲಿಗೆ ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಂತರ ಸಾಕ್ಷ್ಯಾಧಾರ ಸಿಕ್ಕಿಲ್ಲವೆಂದು ಹೇಳಿ ಕೇಸ್ನ್ನು ಮುಚ್ಚಿ ಹಾಕಿದ್ದಾರೆ ಎಂದು ಸುಲೋಚನ ಅವರು ಆರೋಪಿಸಿದ್ದಾರೆ.
ನನ್ನ ಅಣ್ಣನದ್ದು ಕೊಲೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದರೆ ಪೊಲೀಸರು ನಮಗೆ ನ್ಯಾಯ ದೊರಕಿಸಿಕೊಡುವಲ್ಲಿ ವಿಫಲವಾಗಿದ್ದಾರೆ. ನಾವು ಎಲ್ಲ ಫೋರಂಗಳಲ್ಲಿ ಈ ವಿಚಾರವಾಗಿ ಮಾತನಾಡಿದ್ದೇವೆ. ಆದರೆ ಏನೂ ಪ್ರಯೋಜನವಾಗಿಲ್ಲ. ಇದರಿಂದಾಗಿ ನಾವು ಸಾಕಷ್ಟು ನೊಂದಿದ್ದು, ಅದೇ ಕಾರಣಕ್ಕೆ ಆತ್ಮಹತ್ಯೆಗೆ ಮುಂದಾಗಿದ್ದೆವು ಎಂದು ಸುಬ್ರತ್ ದಾಸ್ ತಿಳಿಸಿದ್ದಾರೆ.
ಈ ಹಿಂದೆಯೂ ಎರಡು ಇದೇ ರೀತಿಯ ಆತ್ಮಹತ್ಯಾ ಪ್ರಯತ್ನ ಪ್ರಕರಣಗಳು ಒಡಿಶಾ ವಿಧಾನಸಭೆಯ ಆವರಣದಲ್ಲಿ ನಡೆದಿತ್ತು. ಆ ಕಾರಣ ಹೆಚ್ಚಿನ ಭದ್ರತೆಯನ್ನು ನೀಡಲಾಗಿದೆ. ಸುಲೋಚನ ಮತ್ತು ಆಕೆಯ ಮಗ ಬೆಂಕಿ ಹಚ್ಚಿಕೊಳ್ಳಲು ಪ್ರಯತ್ನಿಸುತ್ತಿದ್ದಂತೆ, ಪೊಲೀಸರು ಅವರನ್ನು ತಡೆದಿದ್ದು, ವಶಕ್ಕೆ ಪಡೆದಿದ್ದರು. (ಏಜೆನ್ಸೀಸ್)