ತಿಂಗಳು ಪೂರ್ತಿ ದೊಡ್ಡ ದ್ಯಾವರ ಸಂಭ್ರಮ

klr dyavara, webp
Published on

ಕಿರುವಾರ ಎಸ್​.ಸುದರ್ಶನ್​ ಕೋಲಾರ

ಮೇ ತಿಂಗಳು ಬಂತೆಂದರೆ ಅವಿಭಜಿತ ಕೋಲಾರ ಜಿಲ್ಲೆಯ ಒಕ್ಕಲಿಗ ಸಮುದಾಯದ ದೊಡ್ಡ ದ್ಯಾವರ ಸಂಭ್ರಮ ಮನೆ ಮಾಡುತ್ತದೆ. ಊರು ಬಿಟ್ಟು ವಿವಿಧೆಡೆ ವಾಸವಿರುವವರೆಲ್ಲ ಒಂದೆಡೆ ಸೇರಿ ಸಂಭ್ರಮಿಸುವ ಕ್ಷಣಕ್ಕೆ ಈ ಹಬ್ಬ ಸಾಯಾಗಿದೆ.

ಜಿಲ್ಲೆಯ ಕೋಲಾರ ತಾಲೂಕಿನ ಸೀತಿ, ಶ್ರೀನಿವಾಸಪುರ ತಾಲೂಕಿನ ಪುಂಗನೂರು ಕ್ರಾಸ್​ ಭೈರೇಶ್ವರ ದೇಗುಲದ ಆವರಣದಲ್ಲಿ ಮೇ ತಿಂಗಳ ಪ್ರತಿ ಭಾನುವಾರ ದೊಡ್ಡಮಟ್ಟದಲ್ಲಿ ನಡೆಯುವ ದ್ಯಾವರ ಕಾರ್ಯಕ್ರಮಕ್ಕೆ ಜನ ಸಾಗರವೇ ಹರಿದುಬರುತ್ತದೆ.

ಒಕ್ಕಲಿಗ ದಂಪತಿ, ಮಕ್ಕಳೊಂದಿಗೆ ಬಂದು ದ್ಯಾವರ ಮಾಡಿಕೊಳ್ಳುತ್ತಾರೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿನ ಒಕ್ಕಲಿಗರು ದ್ಯಾವರದಲ್ಲಿ ಪಾಲ್ಗೊಂಡು ಕುಲದ ಕುಲಾಚಾರಣೆಯಲ್ಲಿ ಭಾಗಿಯಾಗುವ ವಾಡಿಕೆಯನ್ನೂ ಇಂದಿಗೂ ಮುಂದುವರಿಸಿಕೊಂಡು ಬಂದಿದ್ದಾರೆ.

ಭೈರವೇಶ್ವರಸ್ವಾಮಿಗೆ ದೀಪ ಹೊರುವುದರೊಂದಿಗೆ ದ್ಯಾವರ ಆರಂಭಗೊಳ್ಳುತ್ತದೆ. ಅನಂತರ ದಂಪತಿ ಹಾಗೂ ಮಕ್ಕಳು ಕ್ರಮವಾಗಿ ಕರಗ ಹಾಗೂ ಹೂಬುಟ್ಟಿ ಹೊತ್ತು ಸಾಲಿನಲ್ಲಿ ದೇವಾಲಯ ಅಥವಾ ಕೃತಕವಾಗಿ ಲಕ್ಕೀ ಸೊಪ್ಪಿನಿಂದ ನಿರ್ಮಿಸಿದ ಗುಡಿಯಲ್ಲಿ ಪೂಜೆ ಸಲ್ಲಿಸುತ್ತಾರೆ.

ಈ ಹಿಂದೆ ದ್ಯಾವರ ಆಯಾ ಕುಟುಂಬಕ್ಕೆ ಮಾತ್ರ ಸೀಮಿತವಾಗಿತ್ತು. ಸದ್ದು ಗದ್ದಲವಿಲ್ಲದೆ ಸರಳವಾಗಿ ನಡೆದುಹೋಗುತ್ತಿತ್ತು. ಆದರೆ ಈಗ ದ್ಯಾವರ ದೊಡ್ಡದಾಗಿ ಸದ್ದುಮಾಡುತ್ತಿದೆ. ಕಾರ್ಯಕ್ರಮಕ್ಕೆ ಉಡುಗೊರೆಗಳು ಹರಿದು ಬರುವುದನ್ನು ಇಂದಿಗೂ ಕಾಣಬಹುದಾಗಿದೆ.

* ದ್ಯಾವರ ಒಕ್ಕಲಿಗರ ಕುಲಾಚಾರ

ದ್ಯಾವರ ಎನ್ನುವುದು ಒಕ್ಕಲಿಗರಲ್ಲಿರುವ ಒಂದು ಕುಲಾಚಾರ. ದ್ಯಾವರ ಆದ ದಂಪತಿಗಳಿಗೆ ಕುಟುಂಬ ವ್ಯವಸ್ಥೆಯಲ್ಲಿ ವಿಶೇಷ ಸ್ಥಾನಮಾನ. ಅಂಥವರಿಗೆ ಕೆಲವು ವಿಶೇಷ ಆಚರಣೆಗಳಲ್ಲಿ ಭಾಗವಹಿಸುವ ಹಕ್ಕು ಸಿಕ್ಕಂತಾಗುತ್ತದೆ.

ಸಮುದಾಯದ ನಿಯಮದಂತೆ, ದೊಡ್ಡ ದ್ಯಾವರ ಆಗದ ದಂಪತಿ ಸಿಮೀತ ಸಂಪ್ರದಾಯಗಳಲ್ಲಿ ಪಾಲ್ಗೊಳ್ಳಲು ಅವಕಾಶವಿರುವುದಿಲ್ಲ. ಕನ್ಯಾದಾನ ಮಾಡುವಂತಿಲ್ಲ, ಯಾವುದೇ ಮದುವೆಯಲ್ಲಿ ಅಕ್ಷತೆ ಹಾಕುವಂತಿಲ್ಲ, ಹೆಣ್ಣು ಮಕ್ಕಳಿಗೆ ದ್ಯಾವರ ಆಗದೇ ಕಿವಿ ಚುಚ್ಚುವಂತೆಯೂ ಹೀಗೆ ಹಲವು ಷರತ್ತುಗಳಿರುತ್ತವೆ.

* ಬೆರಳು ಕೊಡುವ ಆಚರಣೆ ನಿಷೇಧ

ಸುಮಾರು ದಶಕಗಳ ಹಿಂದೆ ಸೀತಿ ಬೆಟ್ಟದ ದೇವಾಲಯದ ಸಮೀಪ ಅಕ್ಕಸಾಲಿಗರು ಬೆರಳು ಕತ್ತರಿಸುವ ಕಾರ್ಯ ಮಾಡುತ್ತಿದ್ದರು. ಬದಲಾದ ಕಾಲಟ್ಟದಲ್ಲಿ ಹಿರಿಯರು ಕೆಲ ನಿಯಮಗಳನ್ನು ಸಡಲೀಕರಣಗೊಳಿಸಿದ್ದಾರೆ. ಸಮುದಾಯದ ಗುರುತಿಗಾಗಿ ಬಲಗೈ ಹೆಬ್ಬೆರಳನ್ನು ಬಲಿಗೊಡುತ್ತಿದ್ದರು. ಆಗ ಸ್ಥಳದಲ್ಲಿ ಆಯುರ್ವೇದ ವೈದ್ಯರು ಗಾಯಕ್ಕೆ ನಾಟಿ ಔಷಧ ಹಾಕಿ ಚಿಕಿತ್ಸೆ ನೀಡುತ್ತಿದ್ದರು. ಈ ಪದ್ಧತಿಯನ್ನು ಬ್ರಿಟಿಷ್​ ಸರ್ಕಾರವೇ ನಿಷೇಧಿಸಿದೆ ಎಂದು ಹಿರಿಯರು ಹೇಳುವ ಮಾತು. ಇದರಿಂದಾಗಿ ಈಗ ಹೆಬ್ಬೆರಳಿಗೆ ಹೂವು ಕಟ್ಟಿಕೊಂಡು ಹೂವು ಕತ್ತರಿಸಲಾಗುತ್ತಿದೆ.

ಬ್ಯಾಕ್ಸ್​..

ದೊಡ್ಡ ದ್ಯಾವರಗಳಿಗೆ ಸಾ

ಸುಮಾರು 3-4 ದಶಕಗಳು ಕಳೆದರೂ ಚೌಡೇಶ್ವರಮ್ಮ ಒಕ್ಕಲಿಗರಲ್ಲಿ ದ್ಯಾವರ ಕಾರ್ಯಕ್ರಮ ಆಗಿರಲಿಲ್ಲ. ಈ ಬಾರಿ ಕೋಲಾರ ತಾಲೂಕಿನ ಚೌಡದೇನಹಳ್ಳಿ ಗ್ರಾಮದಲ್ಲಿ ಸಚಿವ ಕೃಷ್ಣಬೈರೇಗೌಡ ಹಾಗೂ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಕುಟುಂಬಸ್ಥರು ಮನೆ ದೇವರಿಗೆ ತೆರಳಿ ಸುಮಾರು ನಾಲ್ಕೆ$ದು ದಿನಗಳ ಕಾಲ ದ್ಯಾವರ ಕಾರ್ಯಕ್ರಮ ಆಚರಿಸಿದರು. ಹಿಂದಿನ ವರ್ಷಗಳಿಗೆ ಹೊಲಿಸಿದರೆ ಈ ಬಾರಿ ದೊಡ್ಡ ಮಟ್ಟದಲ್ಲಿ ದ್ಯಾವರ ಕಾರ್ಯಕ್ರಮಗಳು ನಡೆದಿರುವುದಕ್ಕೆ ಜಿಲ್ಲೆಯೂ ಸಾಯಾಗಿದೆ.

ಕೋಟ್​...

ದೊಡ್ಡ ದ್ಯಾವರ ಎಂಬುದು ಒಕ್ಕಲಿಗರ ಕುಲಾಚಾರವಾಗಿದ್ದು, ಇದನ್ನು ಬಿಡುವಂತಿಲ್ಲ. ಸಮುದಾಯದ ಗೌರವ ಹೆಚ್ಚಿಸುವ ಪದ್ಧತಿಯಾಗಿದ್ದು, ಸಂಪ್ರದಾಯದಂತೆ ಆಚರಿಸಿಕೊಂಡು ಬರಲಾಗುತ್ತಿದೆ.

- ನಾರಾಯಣಸ್ವಾಮಿ, ವೆಂಕಟಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net