ಯುವತಿ ಮೊಬೈಲ್ ಹೊತ್ತೊಯ್ದು ಮರವೇರಿದ ಮಂಗ !

monkey fallen into a tree
Published on

ಶಿವಮೊಗ್ಗ: ನಗರದ ಕುವೆಂಪು ರಸ್ತೆಯ ನಂಜಪ್ಪ ಆಸ್ಪತ್ರೆ ಸಮೀಪ ಮಂಗವೊಂದು ಬುಧವಾರ ಮಧ್ಯಾಹ್ನ ಯುವತಿಯ ಮೊಬೈಲ್ ಹೊತ್ತೊಯ್ದು ಮರದ ಮೇಲೆ ಕುಳಿತು ಸುಮಾರು ಒಂದು ಗಂಟೆ ಪ್ರಹಸನದ ಬಳಿಕ ಮೊಬೈಲ್ ಬಿಟ್ಟು ಪರಾರಿಯಾಗಿದೆ.

ಕುವೆಂಪು ರಸ್ತೆಯ ನಂಜಪ್ಪ ಆಸ್ಪತ್ರೆಯ ಕಿಟಕಿಯೊಳಗೆ ಕೈ ಹಾಕಿದ ಮಂಗ ಆಸ್ಪತ್ರೆ ಸಿಬ್ಬಂದಿ ರೇಷ್ಮಾ ಎಂಬವರ ಮೊಬೈಲ್ ಎತ್ತಿಕೊಂಡು ಪರಾರಿಯಾಗಿ ಮರವೇರಿ ಕುಳಿತ್ತಿತ್ತು. ಮರದ ತುದಿಗೆ ಏರಿ ರೆಂಬೆಯೊಂದರ ಮೇಲೆ ಕುಳಿತುಕೊಂಡು ಆಗಾಗ ಮೊಬೈಲ್ ಅನ್ನು ಎದೆಗವಚಿಕೊಳ್ಳುತ್ತಿತ್ತು. ಮತ್ತೆ ಕೆಲವೊಮ್ಮೆ ಮೊಬೈಲ್ ಪರದೆ ಗಮನಿಸುತ್ತಿತ್ತು. ಮಗದೊಮ್ಮೆ ಮೊಬೈಲ್ ಪರದೆ ಮೇಲೆ ಬೆರಳು ಆಡಿಸುತ್ತಾ, ಕಿವಿಗೆ ಹಿಡಿದು ಕುಳಿತುಕೊಳ್ಳುವ ಮೂಲಕ ಕುತೂಹಲ ಮೂಡಿಸಿತ್ತು.

ಮೊಬೈಲ್ ಹಿಡಿದು ಮರವೇರಿದ್ದ ಮಂಗದ ಹಾವಾಭಾವ ಗಮನಿಸಲು ಕುವೆಂಪು ರಸ್ತೆಯಲ್ಲಿ ದೊಡ್ಡ ಸಂಖ್ಯೆಯ ಜನರು ಸೇರಿದ್ದರು. ಮಂಗದ ಕೈಯಿಂದ ಮೊಬೈಲ್ ಕಸಿದುಕೊಳ್ಳಲು ಏನೆಲ್ಲ ಸರ್ಕಸ್ ಮಾಡಿದರೂ ಪ್ರಯೋಜನ ಆಗಲೇ ಇಲ್ಲ. ಮರವೇರಿದ್ದ ಮಂಗನ ಅವಾಂತರಗಳನ್ನು ಸಾರ್ವಜನಿಕರು ಮೊಬೈಲ್‌ಗಳಲ್ಲಿ ಈ ದೃಶ್ಯ ಸೆರೆ ಹಿಡಿಯುತ್ತಿದ್ದರು.

ಸವಾರರು ಮಂಗಾಟ ಗಮನಿಸಲು ವಾಹನ ನಿಲ್ಲಿಸುತ್ತಿದ್ದರಿಂದ ಸಂಚಾರ ಸಿಕ್ಕು ಉಂಟಾಗಿತ್ತು. ನಂಜಪ್ಪ ಆಸ್ಪತ್ರೆ ಸಿಬ್ಬಂದಿ ಕಟ್ಟಡದ ಮೇಲೇರಿ ಬಾಳೆಹಣ್ಣು ತೋರಿಸಿ ಮಂಗನ ಗಮನ ಸೆಳೆದರು. ಆಸೆಯಿಂದ ಕಟ್ಟಡದ ಮೇಲೆ ಬಂದು ಬಾಳೆ ಹಣ್ಣು ತೆಗೆದುಕೊಳ್ಳುತ್ತಿದ್ದಂತೆ ಪಟಾಕಿ ಸಿಡಿಸಿದರು. ಕೊನೆಗೆ ಬಾಳೆಹಣ್ಣು ಎತ್ತಿಕೊಂಡು ಮೊಬೈಲ್ ಬಿಟ್ಟು ಪರಾರಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net