ಹಣ ಕಳೆದುಕೊಂಡು ದಿಕ್ಕುತೋಚದೆ ಕುಳಿತ ಮಾತುಬಾರದ ವ್ಯಕ್ತಿಯನ್ನೇ ಹುಡುಕಿಕೊಂಡು ಬಂದ ಅದೃಷ್ಟಲಕ್ಷ್ಮೀ!

New Project(3)
Published on

ತೀರ್ಥಹಳ್ಳಿ: ಪ್ರಯಾಣದ ಸಂದರ್ಭದಲ್ಲಿ ಹಣ, ಪರ್ಸ್, ಮೊಬೈಲ್ ಕಳೆದುಕೊಳ್ಳುವ ಪ್ರಕರಣಗಳು ಹೊಸದಲ್ಲ. ಕಳೆದುಕೊಂಡವರು ಪೊಲೀಸ್ ಠಾಣೆಗೆ ಹೋಗಿ ದೂರು ಕೊಡುತ್ತಾರೆ. ಆದರೆ ಕಳೆದುಕೊಂಡ ವಸ್ತುಗಳು ಸಿಗುತ್ತವೋ ಇಲ್ಲವೋ ಗೊತ್ತಿಲ್ಲ. ಮೇಲಿನಕುರುವಳ್ಳಿಯಲ್ಲಿ ಕ್ಯಾಂಟೀನ್ ನಡೆಸುತ್ತಿರುವ ಆದರ್ಶ ಎಂಬುವರು ಸ್ಕೂಟಿಯಲ್ಲಿ ತೆರಳುವಾಗ 21 ಸಾವಿರ ರೂ. ಕಳೆದುಕೊಂಡಿದ್ದರು. ಅವರಿಗೆ ಮಾತು(ಮೂಗ) ಬರುವುದಿಲ್ಲ. ಹಣ ಕಳೆದುಕೊಂಡ ನೋವಲ್ಲಿ ಠಾಣೆಗೆ ಹೋಗಿ ಹಣ ಹುಡುಕಿಕೊಡಿ ಎಂದು ಕೇಳಲೇ ಇಲ್ಲ. ಆದರೂ ಅವರು ಕಳೆದುಕೊಂಡಿದ್ದ ಹಣ ಕೈ ಸೇರಿದೆ.

ಕಳೆದುಕೊಂಡ ಹಣ ಸಿಕ್ಕಿದ್ಹೇಗೆ?: ಆದರ್ಶ ಸ್ಕೂಟಿಯಲ್ಲಿ ಪೇಟೆಯಲ್ಲಿರುವ ಮೀನು ಮಾರುಕಟ್ಟೆಗೆ ಹೋಗುವ ವೇಳೆ ಪ್ಲಾಸ್ಟಿಕ್ ಕವರಿನಲ್ಲಿ ಹಾಕಿಕೊಂಡು ಚಡ್ಡಿ ಕಿಸೆಯಲ್ಲಿ ಇಟ್ಟುಕೊಂಡಿದ್ದ ಹಣ ಬಿದ್ದು ಹೋಗಿತ್ತು. ಅದೇ ಮಾರ್ಗದಲ್ಲಿ ಬೈಕ್​ನಲ್ಲಿ ಬರುತ್ತಿದ್ದ ಹುಲಿಗುದ್ದು ಗ್ರಾಮದ ವಸಂತ ಮತ್ತು ಗೋಪಾಲ ಶೆಟ್ಟಿ ಅವರಿಗೆ ಮೇಲಿನಕುರುವಳ್ಳಿಯ ಮಟನ್ ಸ್ಟಾಲ್ ಬಳಿ ಈ ಹಣ ಸಿಕ್ಕಿತ್ತು. ಲಕ್ಷ್ಮೀ ಸಿಕ್ಕಿದ್ದಾಳೆ ಎಂದು ಅವರು ಖುಷಿ ಪಡಲಿಲ್ಲ. ಹಣ ಕಳೆದುಕೊಂಡವರು ಎಷ್ಟು ಕಷ್ಟದಲ್ಲಿದ್ದಾರೋ? ಯಾವ ಉದ್ದೇಶಕ್ಕೆ ಈ ಹಣ ತೆಗೆದುಕೊಂಡು ಹೋಗುತ್ತಿದ್ದಾರೋ ಎಂದು ಆಲೋಚಿಸಿದರು. ಹಣದ ಜತೆಗೆ ಕವರ್​ನಲ್ಲಿ ಒಂದು ಚೀಟಿ ಕೂಡ ಇತ್ತು.

ವಸಂತ ಮತ್ತು ಗೋಪಾಲ ಶೆಟ್ಟಿ ಅಲ್ಲೇ ಸಮೀಪದಲ್ಲಿದ್ದ ಅಂಗಡಿಯ ಮಾಲೀಕ ಹರೀಶ ಎಂಬುವವರಿಗೆ ಹಣ ಸಿಕ್ಕ ವಿಚಾರ ತಿಳಿಸಿ ಯಾರಾದರೂ ಹಣ ಕಳೆದುಕೊಂಡವರು ಬಂದು ಕೇಳಿದರೆ ಕಳೆದುಕೊಂಡ ಹಣ ತಮ್ಮದೇ ಎನ್ನುವುದನ್ನು ದೃಢಪಡಿಸಿ ಹಣ ತೆಗೆದುಕೊಂಡು ಹೋಗಲು ಹೇಳಿ ಎಂದು ತಿಳಿಸಿದ್ದರು. ಹರೀಶ ನೀಡಿದ ಮಾಹಿತಿ ಆಧಾರದಲ್ಲಿ ವಾರಸುದಾರ ಆದರ್ಶ ಅವರನ್ನು ಪತ್ತೆ ಮಾಡಿ 21 ಸಾವಿರ ರೂ. ತಲುಪಿಸಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಸಂತ ಮತ್ತು ಗೋಪಾಲಶೆಟ್ಟಿ ಅವರ ಪ್ರಾಮಾಣಿಕತೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net