

ಹೊಳೆಹೊನ್ನೂರು: ಪಟ್ಟಣದ ನಿವಾಸಿ ಎಚ್.ಅನಿಲ್ಕುಮಾರ್ 21 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿ ತವರೂರಿಗೆ ಆಗಮಿಸಿದಾಗ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು. ಊರಿನ ಪ್ರಮುಖರು, ಒಟ್ಟಿಗೆ ಶಿಕ್ಷಣ ಪಡೆದ ಗೆಳೆಯರು, ಸುತ್ತಮುತ್ತಲಿನ ನಾಗರಿಕರು ಎಚ್.ಅನಿಲ್ಕುಮಾರ್ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು.
ಅನಿಲ್ಕುಮಾರ್ ಮಾತನಾಡಿ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಹೆಮ್ಮೆ. ಸೇನೆ ಅಂದ ಮಾತ್ರಕ್ಕೆ ಬರೀ ಮದ್ದು ಗುಂಡು, ಯುದ್ಧ, ಹೋರಾಟ ಎಂದು ಭಾವಿಸಬೇಕಿಲ್ಲ. ಭಾರತೀಯ ಸೇನೆ ಅಂದರೆ ಅದೊಂದು ಶಿಸ್ತು, ಸಂಯಮ, ಮಾತಾಡುವ ಕಲೆ, ಜೀವನ ಮೌಲ್ಯಗಳನ್ನು ಅರ್ಥ ಮಾಡಿಸುವ ಶಾಲೆ ಇದ್ದಂತೆ. ಪ್ರತಿಯೊಬ್ಬ ಭಾರತೀಯ ಸೇನೆಯಲ್ಲಿ ಸೇವೆ ಮಾಡುವ ಹಂಬಲ ಹೊಂದಿರಬೇಕು. ಇತ್ತೀಚಿನ ದಿನಗಳಲ್ಲಿ ಕನಿಷ್ಠ 4 ವರ್ಷಗಳ ಸೇವೆ ಸಲ್ಲಿಸುವಂತಹ ಅವಕಾಶವನ್ನು ಭಾರತ ಸರ್ಕಾರ ಒದಗಿಸಿದೆ. ಈ ಸೌಲಭ್ಯವನ್ನು ಪ್ರತಿಯೊಬ್ಬರೂ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಅನಿಲ್‌ಕುಮಾರ್ ಪರಿಚಯ: ನಿವೃತ್ತ ಯೋಧ ಅನಿಲ್ಕುಮಾರ್ ಹಳದಪ್ಪ ಮತ್ತು ಕೆಂಚಮ್ಮ ಅವರ 7ನೇ ಪುತ್ರ. 2004ರ ಜ.23ರಲ್ಲಿ ಸೇನೆಗೆ ಆಯ್ಕೆಯಾಗಿ ಹೈದರಾಬಾದ್‌ನಲ್ಲಿ ಒಂದು ವರ್ಷ ತರಬೇತಿ, ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಗೆ ಮೊದಲ ಪೋಸ್ಟಿಂಗ್, ನಂತರ ಪಂಜಾಬ್‌ನ ಪಠಾಣ್‌ಕೋಟ್, ಜಮ್ಮು-ಕಾಶ್ಮೀರದ ಲೈನ್ ಆ್ ಕಂಟ್ರೋಲ್, ಹಿಮಾಲಯ ಪ್ರದೇಶದ ಧರ್ಮಶಾಲಾ, ಜಮ್ಮು-ಕಾಶ್ಮೀರದ ಅಥಣಿ ಟಾಪ್, ಲಡಾಕ್, ಚೆನ್ನೈನ ಆವಡಿ, ಉತ್ತರಾಖಂಡ್ ಡೆಹರಾಡೂನ್, ಪಶ್ಚಿಮ ಬಂಗಾಳದ ಚಾಲ್ಸಾ, ಕೊನೆಯದಾಗಿ ಮಹಾರಾಷ್ಟ್ರದ ನಾಸಿಕ್ ಸೇರಿ 8 ರಾಜ್ಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಈ ಅವಧಿಯಲ್ಲಿ ಒಟ್ಟು ಆರು ಸೇವಾ ಪದಕಗಳನ್ನು ಪಡೆದಿರವುದು ಹೆಮ್ಮೆಯ ಸಂಗತಿ.
ಗ್ರಾಮಸ್ಥರಾದ ಬಿ.ಮಂಜುನಾಥ, ಪರಶುರಾಮ್ ರಾವ್, ರಘು, ಮಾರುತಿ, ಬಸವರಾಜ್, ಆರ್.ಉಮೇಶ್, ನಾಗೇಶ್, ರಮೇಶ್ ಇತರರಿದ್ದರು.