ಸಂಪಾದಕೀಯ | ವ್ಯವಸ್ಥೆಯ ಅಣಕ

plant
Published on

ವಾಹನ ಡಿಕ್ಕಿಯಾಗಿ ಗಾಯಗೊಂಡಿದ್ದ ಕೂಲಿ ಕಾರ್ವಿುಕರೊಬ್ಬರನ್ನು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿಸಿದ ಪರಿಣಾಮ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ಅವರು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಇತ್ತೀಚೆಗೆ ಅಂಕೋಲಾದಲ್ಲಿ ನಡೆದಿದೆ. ಬೋಳೆ ಗ್ರಾಮದ ಚಂದ್ರಹಾಸ ಅಗೇರ ಎಂಬ 50 ವರ್ಷದ ವ್ಯಕ್ತಿ ಕೆಲಸ ಮುಗಿಸಿ ಕಾಲ್ನಡಿಗೆಯಲ್ಲಿ ಮನೆಗೆ ಹೋಗುತ್ತಿದ್ದಾಗ ಶೆಟಗೇರಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದು ಪರಾರಿಯಾಗಿತ್ತು. ತಲೆ ಮತ್ತು ಕಾಲಿಗೆ ಗಂಭೀರ ಗಾಯಗಳಾಗಿದ್ದವು. ಅವರನ್ನು ಆಸ್ಪತ್ರೆಗೆ ಸಾಗಿಸಲು 108 ಆರೋಗ್ಯ ಕವಚ ವಾಹನಕ್ಕೆ ಕುಟುಂಬಸ್ಥರು ಕರೆ ಮಾಡಿದರೂ ಸಮಯಕ್ಕೆ ಸರಿಯಾಗಿ ವಾಹನ ಬರಲಿಲ್ಲ.

ಪರಿಚಿತರ ಆಟೋರಿಕ್ಷಾದಲ್ಲಿ ಅಂಕೋಲಾ ತಾಲೂಕು ಆಸ್ಪತ್ರೆಗೆ ಸಾಗಿಸಬೇಕಾಯಿತು. ಆದರೆ ಅಲ್ಲಿನ ವೈದ್ಯರು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದರು. 35 ಕಿಮೀ ದೂರದ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಆಂಬುಲೆನ್ಸ್​ನಲ್ಲಿ ಸಾಗಿಸಲಾಯಿತು. 4 ಗಂಟೆಗಳ ಚಿಕಿತ್ಸೆಯ ನಂತರ ಅಲ್ಲಿನ ವೈದ್ಯರು ವೆನ್​ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದರು. 270 ಕಿಮೀ ದೂರದ ವೆನ್​ಲಾಕ್ ಆಸ್ಪತ್ರೆಗೆ ಅಪರಾತ್ರಿಯಲ್ಲಿ ತಲುಪಿದರೂ ಅಲ್ಲಿ ‘ಹಾಸಿಗೆ ಲಭ್ಯವಿಲ್ಲ’ ಎಂಬ ಉತ್ತರ ಕಾದಿತ್ತು. ಅಲ್ಲಿಂದ ಮತ್ತೊಂದು ಖಾಸಗಿ ಆಸ್ಪತ್ರೆಗೆ ಹೋದರೆ ಎರಡು ದಿನಗಳ ಆಸ್ಪತ್ರೆ ವೆಚ್ಚವಾಗಿ 30 ಸಾವಿರ ರೂ. ಪಾವತಿಸಿದರೆ ಮಾತ್ರ ದಾಖಲಿಸಿಕೊಳ್ಳುತ್ತೇವೆ ಎಂಬ ಮಾತು ಬಂದಿದೆ. ಆಯುಷ್ಮಾನ್ ಶಿಫಾರಸು ಪತ್ರವನ್ನು ಆ ಆಸ್ಪತ್ರೆ ಪರಿಗಣಿಸಿಲ್ಲ. ಅಲ್ಲಿಂದ ಇನ್ನೊಂದು ಆಸ್ಪತ್ರೆಗೆ ಹೋದರೆ ಅಲ್ಲಿಯೂ ಹಣಕ್ಕಾಗಿ ಒತ್ತಾಯ ಎದುರಾಗಿದೆ. ಇಬ್ಬರು ಹೆಣ್ಣು ಮಕ್ಕಳಿರುವ ಆ ಬಡ ಕುಟುಂಬ ಒಮ್ಮೆಲೇ ಅಷ್ಟು ಹಣ ಹೊಂದಿಸಲು ಹೇಗೆ ಸಾಧ್ಯ ಎಂಬುದನ್ನು ಯಾವ ಆಸ್ಪತ್ರೆಯವರೂ ಯೋಚಿಸಿಲ್ಲ.

ಅನಿವಾರ್ಯವಾಗಿ ಮತ್ತೆ ಕಾರವಾರಕ್ಕೆ ಮರಳುವ ಹೊತ್ತಿಗೆ ಚಂದ್ರಹಾಸ ಅಗೇರರ ಪ್ರಾಣಪಕ್ಷಿಯೇ ಹಾರಿಹೋಗಿದೆ. ಈ ಪೆಟ್ಟು ಸಾಲದೆಂಬಂತೆ ಆಂಬುಲೆನ್ಸ್​ನವರು 6 ಸಾವಿರ ರೂ. ಡೀಸೆಲ್ ವೆಚ್ಚವನ್ನು ವಸೂಲಿ ಮಾಡಿದ್ದಾರೆ. ಅದನ್ನೂ ಆ ಕುಟುಂಬದವರು ದಾನಿಗಳ ನೆರವಿನಿಂದ ಪಾವತಿಸಿದ್ದಾರೆ. ಸುಮಾರು 12 ತಾಸುಗಳ ಕಾಲ ಜೀವ ಕೈಯಲ್ಲಿ ಹಿಡಿದುಕೊಂಡು ಐದು ಆಸ್ಪತ್ರೆಗಳ ಕದ ತಟ್ಟಿ, ಅತಿ ತುರ್ತು ಚಿಕಿತ್ಸೆ ಅಗತ್ಯವಿದ್ದಾಗಲೂ ಆಂಬುಲೆನ್ಸ್​ನಲ್ಲಿ 600 ಕಿಮೀಗಳಷ್ಟು ದೂರ ಕ್ರಮಿಸಿಯೂ ಚಿಕಿತ್ಸೆ ಸಿಗದೇ ಇದ್ದುದು ಇಡೀ ವ್ಯವಸ್ಥೆಯ ಅಣಕ. ಆಸ್ಪತ್ರೆಗಳ ಸಿಬ್ಬಂದಿಯ ವರ್ತನೆಯಂತೂ ಅಮಾನವೀಯತೆಯ ಪರಾಕಾಷ್ಠೆ. ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗಳು ತಕ್ಷಣ ರೋಗಿಯನ್ನು ದಾಖಲು ಮಾಡಿಕೊಂಡು ಚಿಕಿತ್ಸೆ ನೀಡುವಂತಹ ವ್ಯವಸ್ಥೆ ಜಾರಿಗೆ ಬರಬೇಕು.

ಈ ದಿಸೆಯಲ್ಲಿ ಇತರ ರಾಜ್ಯಗಳಲ್ಲಿರುವ ನಿಯಮಗಳ ಉತ್ತಮ ಅಂಶಗಳನ್ನು ಪರಿಗಣಿಸಿ ಸಮಗ್ರ ಕಾನೂನು ರೂಪಿಸಲು ರಾಜ್ಯ ಸರ್ಕಾರ ಮುಂದಾಗಬೇಕು. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಆರೋಗ್ಯ ವಲಯದ ಮೂಲಸೌಕರ್ಯಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಬಲಪಡಿಸಬೇಕು. ಆರೋಗ್ಯ ಕವಚ 108 ಆಂಬುಲೆನ್ಸ್ ಸೇವೆಯಲ್ಲಿ ಕೃತಕ ಬುದ್ಧಿಮತ್ತೆಯಂತಹ ಆಧುನಿಕ ತಂತ್ರಜ್ಞಾನವನ್ನು ಮತ್ತು ತರಬೇತಿ ಹೊಂದಿದ ಸಿಬ್ಬಂದಿಯನ್ನು ಬಳಸಿ ಶೀಘ್ರವಾಗಿ ರೋಗಿಗಳಿಗೆ ಅದರ ಸೇವೆ ಸಿಗುವಂತೆ ಮಾಡಬೇಕು. ಬಜೆಟ್​ನಲ್ಲಿ ನೀಡುತ್ತಿರುವ ಅನುದಾನದ ಪ್ರಮಾಣವನ್ನು ಹೆಚ್ಚಿಸಿ, ಆರೋಗ್ಯ ವಲಯವನ್ನು ಇನ್ನಷ್ಟು ಜನಸ್ನೇಹಿಯಾಗಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net