

ಅವಶ್ಯಕತೆ ಇದ್ದಾಗ ಬರುವವರು ಬುದ್ಧಿವಂತರು. ಅವಶ್ಯಕತೆ ಮೀರಿ ನಮ್ಮ ಜೊತೆ ನಿಲ್ಲುವವರು ಹೃದಯವಂತರು. ಕೈ ತುಂಬಾ ಕೆಲಸ, ಕಣ್ತುಂಬ ನಿದ್ದೆ, ಮನಸ್ಸು ತುಂಬಾ ನೆಮ್ಮದಿ, ಹೃದಯ ತುಂಬಾ ಪ್ರೀತಿ ಮತ್ತು ಆರೋಗ್ಯ ಭಾಗ್ಯ ಇರುವಂತಹ ಜನರು ಜಗತ್ತಿನಲ್ಲಿ ನಿಜವಾದ ಶ್ರೀಮಂತರೆಂಬುದನ್ನು ನೆನಪಿಡಬೇಕಾ ಗುತ್ತದೆ. ಕೆಟ್ಟವರು ತುಂಬಾ ಬೆಳೆಯಬಹುದು. ಆದರೆ ಉಳಿಯಲು ಸಾಧ್ಯವಿಲ್ಲ. ಒಳ್ಳೆಯವರನ್ನು ತುಂಬಾ ತುಳಿಯಬಹುದು. ಆದರೆ ನಾಶ ಮಾಡಲು ಆಗುವುದಿಲ್ಲ. ಸಹನೆ ಇದ್ದರೆ ಸಮಯವೂ ಸಹಕರಿಸುತ್ತದೆ. ಸಹನೆ ಕಳೆದುಕೊಂಡರೆ ಸಮಯವೇ ಸಮಸ್ಯೆಯನ್ನು ಹುಟ್ಟು ಹಾಕುತ್ತದೆ.
ಹೂಗಳಿಂದ ತುಂಬಿದ ತೋಟ ಎಷ್ಟು ಸುಂದರವಾಗಿರುವುದೋ ಒಳ್ಳೆಯ ಆಲೋಚನೆಗಳಿಂದ ತುಂಬಿದ ಮನಸ್ಸು ಸಹ ಅಷ್ಟೇ ಸುಂದರ ವಾಗಿರುತ್ತದೆ. ಅರ್ಥವಿಲ್ಲದ ಓದು, ಶಾಂತಿಯಿಲ್ಲದ ಮನೆ, ರುಚಿಯಿಲ್ಲದ ಅಡಿಗೆ, ಖುಷಿಯಿಲ್ಲದ ಜೀವನ, ಮಧುರತೆಯಿಲ್ಲದ ಮಾತು, ನೀತಿ ಇಲ್ಲದ ಬದುಕು ನಿರರ್ಥಕವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಧರ್ಮ ಗ್ರ್ರಥದಲ್ಲಿ ಬೋಧಿಸಿದ್ದಾರೆ. ಸುಖ ದುಃಖಗಳ ಸಮ್ಮಿಶ್ರಣ ಈ ಜೀವನ. ಯಾವುದೂ ಸ್ಥಿರವಲ್ಲ. ಸುಖವೇ ಬರಲಿ ದುಃಖವೇ ಬರಲಿ ಬಾಳುವುದನ್ನು ಕಲಿಯಬೇಕು. ಕಷ್ಟಗಳು ಬರುವುದು ಜೀವನ ಒಳಿತಿಗಾಗಿ ಎಂಬುದನ್ನು ಮರೆಯದೇ ನಿರಂತರ ಪ್ರಯತ್ನ ಸಾಧನೆಯಿಂದ ಬದುಕು ಕಟ್ಟಿಕೊಳ್ಳಬೇಕಾದುದು ಅವಶ್ಯಕ.