'2021 ವಿಶ್ವ ಸುಂದರಿ' ಕಿರೀಟಕ್ಕೆ ಮುತ್ತಿಟ್ಟ ಪೋಲಾಂಡ್​ನ ಕರೊಲಿನಾ ಬಿಲಾವ್​ಸ್ಕಾ

Karolina Bielawska
Published on

ಪ್ಯೂರ್ಟೋ ರಿಕೊ: 2021ನೇ ವಿಶ್ವ ಸುಂದರಿ ಕಿರೀಟ ಪೋಲಾಂಡ್​ನ ಕರೊಲಿನಾ ಬಿಲಾವ್​ಸ್ಕಾ ಅವರ ಮುಡಿಗೇರಿದೆ. ಅಮೆರಿಕದ ಶ್ರೀಸೈನಿ ಮೊದಲ ರನ್ನರ್ ಅಪ್​ ಪಟ್ಟ ಅಲಂಕರಿಸಿದರು. ಭಾರತವನ್ನು ಪ್ರತಿನಿಧಿಸಿದ್ದ ವಾರಣಾಸಿಯ ಮಾನಸಾ ಸಮಿಫೈನಲ್​ ಪ್ರವೇಶಿಸಿ ಗಮನ ಸೆಳೆದರು. ಮಾನಸಾಗೆ ಟಾಪ್​ 13ನೇ ಸ್ಥಾನ ಸಿಕ್ಕಿದೆ.

ಪ್ಯೂರ್ಟೋ ರಿಕೊದ ಸ್ಯಾನ್ ಜುವಾನ್‌ನಲ್ಲಿರುವ ಕೋಕಾ-ಕೋಲಾ ಮ್ಯೂಸಿಕ್ ಹಾಲ್​ನಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಕರೊಲಿನಾ ಬಿಲಾವ್​ಸ್ಕಾ ಅವರು MISS WORLD 2021 ಆಗಿ ಹೊರ ಹೊಮ್ಮಿದರು. ಜಮೈಕಾದ ಟೋನಿ ಆನ್​ಸಿಂಗ್​ ಅವರು ಕರೊಲಿನಾ ಬಿಲಾವ್​ಸ್ಕಾಗೆ ವಿಶ್ವಸುಂದರಿ ಕಿರೀಟ ತೊಡಿಸಿದರು. 'ನನ್ನ ಹೆಸರು ಘೋಷಣೆ ಆಗಿದ್ದು ಕೇಳಿ ನನಗೆ ಶಾಕ್​ ಆಯ್ತು. ಈಗಲೂ ನನಗೆ ನಂಬೋಕೆ ಆಗ್ತಿಲ್ಲ. ವಿಶ್ವ ಸುಂದರಿ ಕಿರೀಟದ ಮೇಲೆ ಅಪಾರ ಗೌರವ ಇದೆ. ಇದನ್ನು ನಾನು ಧರಿಸಿದ್ದು ತುಂಬಾ ಖುಷಿ ಇದೆ. ಈ ಕ್ಷಣವನ್ನು ನನ್ನ ಜೀವಮಾನದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲ. ಇದೊಂದು ಅವಿಸ್ಮರಣೀಯ ಕ್ಷಣ ಎನ್ನುತ್ತಲೇ ವಿಶ್ವಸುಂದರಿ ಕರೊಲಿನಾ ಭಾವುಕರಾದರು.

ಮ್ಯಾನೇಜ್​​ಮೆಂಟ್​ ವಿಷಯದಲ್ಲಿ ಕರೊಲಿನಾ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಸೌಂದರ್ಯದ ಮತ್ತೊಂದು ಮುಖ ಸಾಮಾಜಿಕ ಸೇವೆ. ಕರೊಲಿನಾಗೆ ಸ್ಕ್ಯೂಬಾ ಡ್ರೈವಿಂಗ್, ಸ್ವಿಮ್ಮಿಂಗ್​, ಸ್ಫೂರ್ತಿದಾಯಕ ಭಾಷಣ, ಟೆನ್ನಿಸ್​ ಮತ್ತು ಬ್ಯಾಟ್​ಮಿಂಟನ್​ ಆಡುವ ಹವ್ಯಾಸ ಇದೆ. ಅಷ್ಟೇ ಅಲ್ಲ, ಸ್ವಯಂ ಕಾರ್ಯಕರ್ತೆಯಾಗಿ ಸಾಮಾಜಿಕ ಕಾರ್ಯದಲ್ಲೂ ತೊಡಗಿದ್ದಾರೆ. ನಿರಾಶ್ರಿತರಿಗೆ ನೆರವು ನೀಡುತ್ತಾ, ಪ್ರತಿ ಭಾನುವಾರ ಬಡವರಿಗೆ ಊಟ, ಬಟ್ಟೆ, ಆಹಾರ ಸಮಾಗ್ತಿ ವಿತರಣಾ ಕಾರ್ಯ ಮಾಡುವ ಜತೆಗೆ ಕಾನೂನು ಸಲಹೆ, ವೈದ್ಯಕೀಯ ಸೇವೆಯನ್ನೂ ಒದಗಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net