

ರಾಮನಗರ: ಕೋವಿಡ್ ಕಾರಣದಿಂದ ಅರ್ಧಕ್ಕೆ ಮೊಟಕುಗೊಂಡಿದ್ದ ಮೇಕೆದಾಟು ಪಾದಯಾತ್ರೆಗೆ ಇಂದು(ಭಾನುವಾರ) ರಾಮನಗರದಲ್ಲಿ ಚಾಲನೆ ಸಿಕ್ಕಿದೆ.
ಶನಿವಾರ ರಾತ್ರಿ ಆದಿ ಚುಂಚನಗಿರಿ ಮಠದಲ್ಲೇ ವಾಸ್ತವ್ಯ ಹೂಡಿದ್ದ ಡಿಕೆಶಿ, ಭಾನುವಾರ ಬೆಳಗ್ಗೆ ಗವಿಗಂಗಾಧರೇಶ್ವನ ದರ್ಶನ ಪಡೆದರು. ಬಳಿಕ ನಗರದ ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಎಂಜಿ ರಸ್ತೆಯಲ್ಲಿನ ಪೀರನ್ ಷಾ, ವಲಿ ಷಾ ದರ್ಗಾದಲ್ಲಿ ಪ್ರಾರ್ಥಿಸಿದರು. ಬಳಿಕ ಅಲ್ಲಿಂದಲ್ಲೇ ಪೂರ್ಣಕುಂಭದೊಂದಿಗೆ ಮೆರವಣಿಗೆಯಲ್ಲಿ ಸಾಗಿ ಕನಕಪುರ ವೃತದಲ್ಲಿನ ಟಿ.ಆರ್. ಮಿಲ್ನಲ್ಲಿ ಸಿದ್ಧಪಡಿಸಿದ್ದ ವೇದಿಕೆ ತಲುಪಿದರು.
10 ಗಂಟೆ ನಂತರ ವೇದಿಕೆ ಕಾರ್ಯಕ್ರಮ ಆರಂಭಗೊಂಡಿತು. ಬಿ.ಕೆ.ಹರಿಪ್ರಸಾದ್, ಸಿದ್ದರಾಮಯ್ಯ, ರಣದೀಪ್ ಸಿಂಗ್ ಸುರ್ಜೆವಾಲ, ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್, ಮಾಜಿ ಶಾಸಕ ಚೆಲುವರಾಯಸ್ವಾಮಿ, ನರೇಂದ್ರ ಸ್ವಾಮಿ, ಅಲ್ಲಂ ವೀರಭದ್ರಪ್ಪ, ಧೃವನಾರಾಯಣ್, ಸಲೀಂ ಅಹಮ್ಮದ್, ಯು.ಟಿ.ಖಾದರ್, ಎಚ್.ಕೆ.ಪಾಟೀಲ್, ರಾಮಲಿಂಗರೆಡ್ಡಿ, ಕುಸುಮಾ, ಪುಷ್ಪ ಅಮರನಾಥ್, ಜಿಲ್ಲಾಧ್ಯಕ್ಷ ಗಂಗಾಧರ್ ಇತರರು ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಇನ್ನು ಕೆಲವೇ ಕ್ಷಣದಲ್ಲಿ ಬೆಂಗಳುರಿನತ್ತ ಪಾದಯಾತ್ರೆ ಹೊರಡಲಿದೆ.
ಕೋವಿಡ್ನಿಂದಾಗಿ ಪಾದಯಾತ್ರೆ ಜ.13ಕ್ಕೆ ಅಂತ್ಯಕಂಡಿತ್ತು. ಇದೀಗ ಮತ್ತೆ ಆರಂಭಗೊಂಡಿದೆ. ರಾಮನಗರದಿಂದ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನಕ್ಕೆ ಒಟ್ಟಾರೆ 80 ಕಿ.ಮೀ. ದೂರವನ್ನು 5 ದಿನಗಳಲ್ಲಿ ಕ್ರಮಿಸಲಿದೆ.