ರೋಗಿಗೆ ಪುನರ್ಜನ್ಮ ನೀಡುವ ವೈದ್ಯ ವೃತ್ತಿ

20M.D.R.1
ಮದ್ದೂರಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ವೈದ್ಯರಾದ ಡಾ.ಜಿ.ಎನ್.ನರಸಿಂಹಮೂರ್ತಿ, ಡಾ.ಎಂ. ಕವಿತಾ ಅವರನ್ನು ಸನ್ಮಾನಿಸಲಾಯಿತು. ಪ್ರೊ.ಟಿ.ಎನ್.ಚಲುವೇಗೌಡ, ಮಹಾಲಿಂಗಯ್ಯ, ಆನಂದ, ಚಂದ್ರಶೇಖರ, ಪ್ರೊ.ಎಚ್.ಬಿ.ಶಿವಲಿಂಗಪ್ಪ, ಡಿ.ಪಿ.ಸ್ವಾಮಿ, ಆರ್.ನಾಗಭೂಷಣ್, ವಿ.ಹರ್ಷ ಪಣ್ಣೆದೊಡ್ಡಿ ಇದ್ದರು.
Published on

ಮದ್ದೂರು: ವೈದ್ಯಕೀಯ ವೃತ್ತಿ ಅತ್ಯಂತ ಪವಿತ್ರವಾಗಿದ್ದು, ಸಾವು ಬದುಕಿನ ನಡುವೆ ಹೋರಾಡುವ ರೋಗಿಗೆ ಪುನರ್ಜನ್ಮ ನೀಡುವ ಮಹತ್ತರವಾದ ವೃತ್ತಿಯಾಗಿದೆ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ.ಟಿ.ಎನ್.ಚಲುವೇಗೌಡ ಪ್ರಶಂಸೆ ವ್ಯಕ್ತಪಡಿಸಿದರು.


ಪಟ್ಟಣದ ಭಾರತ್ ವಿಕಾಸ್ ಪರಿಷದ್ ಸೇವಾ ಟ್ರಸ್ಟ್ ಭವನದಲ್ಲಿ ಭಾರತ್ ವಿಕಾಸ್ ಪರಿಷದ್ ಕದಂಬ ಶಾಖೆ ವತಿಯಿಂದ ಶನಿವಾರ ಆಯೋಜಿಸಿದ್ದ ವಿಶ್ವ ವೈದ್ಯರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಸಮಾಜದಲ್ಲಿ ಜನರ ಆರೋಗ್ಯವನ್ನು ಕಾಪಾಡುವಲ್ಲಿ ವೈದ್ಯರು ಅವಿರತವಾಗಿ ಶ್ರಮಿಸುತ್ತಿರುವುದು ಅವರ ಬಗ್ಗೆ ಗೌರವವನ್ನು ಇಮ್ಮಡಿಗೊಳಿಸಿದೆ. ಅನೇಕ ಮಹಾಮಾರಿಯ ರೋಗಗಳಿಗೆ ಎದೆಗುಂದದೆ ಎದುರಾಗಿ ನಿಂತು ಜನರನ್ನು ಬದುಕುಳಿಸುವ ಕಾಯಕದಲ್ಲಿ ವೈದ್ಯರು ನಿರತರಾಗಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು.


ನಮ್ಮ ಸಂಸ್ಕೃತಿಯಲ್ಲಿ ವೈದ್ಯರನ್ನು ಭಗವಂತ ನಾರಾಯಣನಿಗೆ ಹೋಲಿಸಿ ವರ್ಣಿಸಲಾಗಿದೆ. ಡಾ.ಬಿ.ಸಿ.ರಾಯ್ ಅವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ವೈದ್ಯ ದಿನಾಚರಣೆ ಪ್ರಸ್ತುತ ದಿನಗಳಲ್ಲಿ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ ಎಂದರು.


ವೈದ್ಯರಾದ ಡಾ.ಜಿ.ಎನ್.ನರಸಿಂಹಮೂರ್ತಿ, ಡಾ. ಎಂ ಕವಿತಾ ಹಾಗೂ ಡಾ.ಆಶಾರಾಣಿ ಅವರನ್ನು ರಾಷ್ಟ್ರೀಯ ವೈದ್ಯ ದಿನಾಚರಣೆ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು.


ಭಾರತ್ ವಿಕಾಸ್ ಪರಿಷತ್ ಕದಂಬ ಶಾಖೆ ಅಧ್ಯಕ್ಷ ಮಹಾಲಿಂಗಯ್ಯ, ಕಾರ್ಯದರ್ಶಿ ಆನಂದ, ಖಜಾಂಚಿ ಚಂದ್ರಶೇಖರ, ಮಾಜಿ ಅಧ್ಯಕ್ಷ ಪ್ರೊ.ಎಚ್.ಬಿ.ಶಿವಲಿಂಗಪ್ಪ, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ.ಪಿ.ಸ್ವಾಮಿ ಹಾಗೂ ಆರ್.ನಾಗಭೂಷಣ್, ವಿ.ಹರ್ಷ ಪಣ್ಣೆದೊಡ್ಡಿ, ದೇವ ಸುರೇಂದ್ರ ಬಾಬು, ಮಹೇಶ್, ಪ್ರಕಾಶ್, ರಾಮಚಂದ್ರು, ನಾರಾಯಣ್, ಸಿ.ಎಸ್.ಶಂಕರಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net