

ಢಾಕಾ: ಕಾರ್ಖಾನೆಯೊಂದರಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿ 52ಕ್ಕೂ ಹೆಚ್ಚು ಮಂದಿ ಸಜೀವ ದಹನಗೊಂಡಿದ್ದು, ಕನಿಷ್ಠ 30 ಜನ ಗಾಯಗೊಂಡಿರುವ ಘಟನೆ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಸಂಭವಿಸಿದೆ.
ನಾರಾಯಂಗಂಜ್ನಲ್ಲಿರುವ ಪಾನೀಯ ಮತ್ತು ಆಹಾರ ಕಾರ್ಖಾನೆಯಲ್ಲಿ ಗುರುವಾರ ತಡರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲಗೆಯಲ್ಲಿ ಅಲ್ಲಿದ್ದ ಕಾರ್ಮಿಕರು ಸುಟ್ಟು ಕರಕಲಾಗಿದ್ದಾರೆ.
6 ಅಂತಸ್ತಿನ ಕಟ್ಟಡಕ್ಕೂ ಬೆಂಕಿಯ ಕೆನ್ನಾಲಗೆ ವ್ಯಾಪಿಸಿತ್ತು. ಕೆಲವರು ಬಹುಮಹಡಿ ಕಟ್ಟಡದಿಂದ ಜಿಗಿದು ಪ್ರಾಣ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಹಲವರು ನಾಪತ್ತೆಯಾಗಿದ್ದಾರೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಶುಕ್ರವಾರ ಬೆಳಗ್ಗೆಯೂ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆದಿದೆ.