

ಬೆಂಗಳೂರು: ಮನೆಯಿಂದ ನಾಪತ್ತೆಯಾಗಿದ್ದ ಪ್ರೇಮಿಗಳು ನೈಸ್ ರಸ್ತೆ ಸಮೀಪದ ಅಂಜನಾಪುರದ ತುಳಸಿಪುರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇಬ್ಬರ ಮೃತದೇಹ ಪತ್ತೆಯಾಗಿದೆ.
ತಲಘಟ್ಟಪುರ ಸಮೀಪದ ಅಂಜನಾಪುರದ ನಿವಾಸಿ ಅಂಜನಾ(೨೦) ಮತ್ತು ಕೋಣನಕುಂಟೆ ನಿವಾಸಿ ಶ್ರೀಕಾಂತ್ (೨೪) ಆತ್ಮಹತ್ಯೆಗೆ ಶರಣಾದವರು. ಇವರಿಬ್ಬರೂ ಜುಲೈ ೧ರಂದು ನಾಪತ್ತೆಯಾಗಿದ್ದರು.
ಈಗಾಗಲೇ ಮದುವೆಯಾಗಿದ್ದ ಶ್ರೀಕಾಂತ್ ಸಿಲಿಕಾನ್ ಸಿಟಿ ಕಾಲೇಜಿನಲ್ಲಿ ಬಿ.ಕಾಂ ಅಂತಿಮ ವರ್ಷದಲ್ಲಿ ಓದುತ್ತಿದ್ದ. ಸಂಜೆ ಹೊತ್ತು ಆಟೋ ಕೂಡ ಓಡಿಸುತ್ತಿದ್ದ. ಎರಡುವರೆ ವರ್ಷದ ಹಿಂದೆ ಸಹನ ಎಂಬ ಯುವತಿಯನ್ನು ವಿವಾಹವಾಗಿದ್ದ ಶ್ರೀಕಾಂತ್ ವಿದ್ಯಾಭ್ಯಾಸವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿದ್ದ ಈ ಹಿನ್ನೆಲೆಯಲ್ಲಿ ಮತ್ತೆ ಕಾಲೇಜಿಗೆ ಸೇರ್ಪಡೆಯಾಗಿದ್ದ. ಇದೇ ಕಾಲೇಜಿನಲ್ಲಿ ಓದುತ್ತಿದ್ದ ಅಂಜನಾ ಎಂಬ ಯುವತಿಯ ಪರಿಚಯವಾಗಿದ್ದು ಬಳಿಕ ಇಬ್ಬರ ನಡುವೆ ಪ್ರೀತಿ ಬೆಳೆದಿದೆ. ಈ ವಿಚಾರಕ್ಕೆ ಶ್ರೀಕಾಂತ್ ಮತ್ತು ಆತನ ಪತ್ನಿಯ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ. ಅಲ್ಲದೇ ಅಂಜನಾ ಪಾಲಕರು ಸಹ ಇಬ್ಬರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಇದರಿಂದ ಬೇಸರಗೊಂಡಿದ್ದ ಶ್ರೀಕಾಂತ್ ಪ್ರೇಯಸಿ ಅಂಜನಾ ಜತೆ ಮನೆ ಬಿಟ್ಟು ಹೋಗಿದ್ದ. ಈ ಸಂಬಂಧ ಕೋಣನಕುಂಟೆ ಮತ್ತು ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ನಾಪತ್ತೆ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ಕೈಗೊಂಡಿದ್ದರು.
ಕೈಗೆ ಹಗ್ಗ ಕಟ್ಟಿಕೊಂಡು ಕೆರೆಗೆ ಹಾರಿದರು:
ಸೋಮವಾರ ಸಂಜೆ ತಳಸಿಪುರ ಕೆರೆ ಸಮೀಪ ಆಟೋದಲ್ಲಿ ಬಂದಿದ್ದ ಇಬ್ಬರು ಕೆರೆ ಬಳಿ ಇಬ್ಬರು ಚಪ್ಪಲಿ ಬಿಟ್ಟು ನಮ್ಮ ಸಾವಿಗೆ ಯಾರು ಕಾರಣರಲ್ಲ ಎಂದು ಡೆತ್‌ನೋಟ್ ಬರೆದಿದ್ದು, ಬಳಿಕ ಕೈಗಳಿಗೆ ಪರಸ್ಪರ ಹಗ್ಗಕಟ್ಟಿಕೊಂಡು ಹಾರಿ ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರ ಮಧ್ಯಾಹ್ನ ಇಬ್ಬರ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಬ್ಬರು ಒಟ್ಟಿಗೆ ಬದುಕಲು ಆಗಲ್ಲ:
ಶ್ರೀಕಾಂತ್‌ಗೆ ಈಗಾಗಲೇ ಮದುವೆಯಾಗಿದ್ದರೂ ಸಹ ಕಾಲೇಜು ವಿದ್ಯಾರ್ಥಿನಿಯಾಗಿದ್ದ ಅಂಜನಾಳನ್ನ ಪ್ರೀತಿ ಮಾಡುತ್ತಿದ್ದ. ಆದರೆ ಇಬ್ಬರು ಒಟ್ಟಿಗೆ ಬದುಕಲು ಆಗಲ್ಲ ಎಂದು ತಿಳಿದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಅಚ್ಚರಿಯ ಸಂಗತಿ ಅಂದರೆ ಶ್ರೀಕಾಂತ್ ಪತ್ನಿ ಸಹ ವಿಚ್ಛೇದನ ನೀಡುತ್ತೇನೆ ನಿನ್ನ ಪ್ರೇಯಸಿಯ ಜತೆ ಸಂತೋಷದಿಂದ ಇರು ಎಂದು ಹೇಳಿದ್ದಳಂತೆ. ಆದರೂ ಸಹ ಶ್ರೀಕಾಂತ್ ಪ್ರೇಯತಮೆ ಜೊತೆ ಸಾವಿಗೆ ಶರಣಾಗಿದ್ದಾನೆ ಎನ್ನಲಾಗಿದೆ.
ವಿಡಿಯೋ ಮಾಡಿಟ್ಟಿದ್ದ ಜೋಡಿ
ಇನ್ನು ಸಾವಿಗೂ ಮುನ್ನ ಯುವತಿ ಅಂಜನಾ, ಮೊಬೈಲ್ನಲ್ಲಿ ವಿಡಿಯೋ ಮಾಡಿದ್ದಾಳೆ. ನಮ್ಮ ಸಾವಿಗೆ ಯಾರು ಕಾರಣ ಅಲ್ಲ. ನಾವಿಬ್ಬರು ಒಟ್ಟಿಗೆ ಬದುಕಲು ಆಗಲ್ಲ. ಹಾಗಾಗಿ ಸಾಯುತ್ತಿದ್ದೇವೆ ಎಂದು ವಿಡಿಯೋ ಮಾಡಿ ಮೊಬೈಲ್ ಅನ್ನು ಆಟೋದಲ್ಲಿಟ್ಟು ಕೆರೆಗೆ ಹಾರಿದ್ದಾರೆ. ಮೊಬೈಲ್ ಅನ್ನು ತಲಘಟ್ಟಪುರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.