

ಬೆಂಗಳೂರು: ದಿನನಿತ್ಯ ಮದ್ಯ ಸೇವಿಸಲು ಹಣಕ್ಕಾಗಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಗಿರಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಲಕ್ಷ್ಮಣ್(೨೭) ಬಂಧಿತ ಆರೋಪಿ. ಈತನಿಂದ ೧೧.೫೫ ಲಕ್ಷ ರೂ.ಮೌಲ್ಯದ ೨೦ ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಆರೋಪಿಯು ಅ.೨೮ ರಂದು ಮಹಿಳೆಯೊಬ್ಬರು ತಮ್ಮ ಸ್ಕೂಟರ್ ಅನ್ನು ವಿವೇಕಾನಂದ ಪಾರ್ಕ್‌ಗೇಟ್ ಮುಂಭಾಗದಲ್ಲಿ ನಿಲ್ಲಿಸಿ ಪಾರ್ಕ್‌ಗೆ ಹೋಗಿದ್ದರು. ಪುನಃ ಬಂದು ನೋಡಿದ್ದಾಗ ವಾಹನ ಅಲ್ಲಿ ಇರಲಿಲ್ಲ. ಈ ಸಂಬಂಧ ಗಿರಿ ನಗರ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನವಾಗಿರುವ ಬಗ್ಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಬಿಡಿಭಾಗ ಕಳಚಿ ಮಾರಾಟ:
ಆರೋಪಿಯು ಒಂದು ಏರಿಯಾದಲ್ಲಿ ದ್ವಿಚಕ್ರ ವಾಹನವನ್ನು ಕದ್ದು ಅದರ ಬ್ಯಾಟರಿ, ಟೈರ್ ಹಾಗೂ ವಸ್ತುಗಳನ್ನು ತೆಗೆದು ಮಾರಾಟ ಮಾಡಿ ಅದನ್ನು ಮತ್ತೊಂದು ಏರಿಯಾದಲ್ಲಿ ಬಿಟ್ಟು ಹೋಗುತ್ತಿದ್ದನು.
ದಿನನಿತ್ಯ ಮದ್ಯ ಸೇವಿಸಲು ಹಣಕ್ಕಾಗಿ ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದ ಈತ, ಮದ್ಯ ಸೇವಿಸಲು ಬೈಕ್ ಕದ್ದು ಬ್ಯಾಟರಿ ಮಾರಾಟ ಮಾಡಿ ಬಂದ ಹಣದಲ್ಲಿ ಮದ್ಯ ಸೇವನೆ ಮಾಡುತ್ತಿದ್ದನು.
ಕೆಲವು ತಿಂಗಳ ಹಿಂದೆ ಪೊಲೀಸರ ಕೈಗೆ ಸಿಕ್ಕಿ ಬಿದಿದ್ದ ಆರೋಪಿಯು ಜೈಲು ಸೇರಿದ್ದ. ನಂತರ ಜೈಲಿಂದ ಬಿಡುಗಡೆಯಾದ ಬಳಿಕವು ಮತ್ತೆ ಬೈಕ್ ಕಳ್ಳತನ ಮುಂದುವರಿಸಿದ್ದ. ಈತನ ಬಂಧನದಿಂದ ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು ೧೫ ಪ್ರಕರಣಗಳು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.