

ಚಿಕ್ಕಬಳ್ಳಾಪುರ: ಕೂಲಿ ಕಾರ್ಮಿಕನಾಗಿ ಚಿಕ್ಕಬಳ್ಳಾಪುರ ಜಿಲ್ಲೆ ಪ್ರವೇಶಿಸಿದ ಆಂಧ್ರಪ್ರದೇಶದ ವ್ಯಕ್ತಿಯೊಬ್ಬ ಕೆಲವೇ ವರ್ಷಗಳಲ್ಲಿ ಕೋಟ್ಯಧೀಶನಾಗಿದ್ದಾನೆ. ಇವನ ಹೆಸರಲ್ಲಿ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಇದೆ. ಅಂದಹಾಗೆ ಈತನಿಗೇನೂ ಲಾಟರಿ ಮೂಲಕ ಅದೃಷ್ಟ ಲಕ್ಷ್ಮೀ ಒಲಿದಿಲ್ಲ! ಸಂಪಾದನೆಯ ಜಾಡು ಹಿಡಿದು ಹೊರಟ ಪೊಲೀಸರಿಗೆ ಸ್ಫೋಟಕ ಮಾಹಿತಿ ಸಿಕ್ಕಿದ್ದು, ಕೋಟ್ಯಧೀಶನನ್ನು ಬಂಧಿಸಿದ್ದಾರೆ.
ಆಂಧ್ರದ ಲೇಪಾ ಮೂಲದ ಕೋಟೇಶ್ವರರಾವ್ ಬಂಧಿತ. ಕಲ್ಲು ಗಣಿ ಕೇಂದ್ರದಲ್ಲಿ ಕೂಲಿ ಕಾರ್ಮಿಕನಾಗಿ ಚಿಕ್ಕಬಳ್ಳಾಪುರ ಜಿಲ್ಲೆ ಪ್ರವೇಶಿಸಿದ್ದವ ಬಾಗೇಪಲ್ಲಿ ಪಟ್ಟಣದ 5ನೇ ವಾರ್ಡ್ನಲ್ಲಿ ಎರಡು ಬೃಹತ್ ಕಟ್ಟಡ, ಕಾರಕೂರು ಕ್ರಾಸ್ ಬಳಿ ಎಕರೆಗಟ್ಟಲೆ ಜಮೀನು ಖರೀದಿಸಿದ್ದು, ಬೃಹತ್ ಕಲ್ಯಾಣ ಮಂಟಪ ನಿರ್ಮಿಸುತ್ತಿದ್ದಾನೆ. ಕೂಲಿ ಕಾರ್ಮಿಕನಿಗೆ ಕೋಟ್ಯಂತರ ಮೌಲ್ಯದ ಆಸ್ತಿ ಎಲ್ಲಿಂದ ಬರುತ್ತಿದೆ? ಎಂದು ಬೆನ್ನಟ್ಟಿದ್ದ ಪೊಲೀಸರಿಗೆ, ಆರೋಪಿಯು ಹಲವು ವರ್ಷಗಳಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋಟ್ಯಂತರ ರೂ. ಸಂಪಾದಿಸಿರುವುದು ತಿಳಿದುಬಂದಿದೆ.
ಆಂಧ್ರ, ತಮಿಳುನಾಡು, ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ನಕಲಿ ಗಣಿ ಪರವಾನಗಿ ಮತ್ತು ಅನುಮತಿ ತಯಾರಿಸಿ ಕೊಡುತ್ತಿದ್ದ ಚಾಲಾಕಿ ವಂಚಕ ಖಾಕಿ ಬಲೆಗೆ ಸಿಕ್ಕಿ ಬಿದ್ದಿದ್ದಾನೆ. ಈತನ ಅವ್ಯವಹಾರದ ತನಿಖೆ ನಡೆಸಿದ ಪೊಲೀಸರು, ನಕಲಿ ಪರವಾನಗಿ ಮತ್ತು ಸರ್ಕಾರಿ ಆದೇಶ ಪತ್ರಗಳು, ದಾಖಲೆ ಸೃಷ್ಟಿಗೆ ಬಳಸುತ್ತಿದ್ದ ಕಂಪ್ಯೂಟರ್, ಪ್ರಿಂಟರ್ ಹಾಗೂ ಹಾಲೋಗ್ರಾಂ ತಯಾರಿಕಾ ಯಂತ್ರವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.