More

    ಸಹೋದ್ಯೋಗಿ ಪತ್ನಿಯ ಮೇಲೆ 8 ಕಾನ್​ಸ್ಟೇಬಲ್​ಗಳಿಂದ ನಿರಂತರ ಅತ್ಯಾಚಾರ: ಆರೋಪಿಗಳಿಗೆ ಹೈಕೋರ್ಟ್​ನಲ್ಲೂ ಹಿನ್ನಡೆ

    ಬೆಂಗಳೂರು: ಸಹೋದ್ಯೋಗಿಯೊಬ್ಬರ ಪತ್ನಿಯ ಮೇಲೆ ಅನೇಕ ಬಾರಿ ಅತ್ಯಾಚಾರವೆಸಗಿದ ಆರೋಪದಲ್ಲಿ 8 ಕಾನ್​ಸ್ಟೇಬಲ್​ಗಳನ್ನು ಕೆಲಸದಿಂದ ವಜಾಗೊಳಿಸಿದ್ದ ಶಿಸ್ತು ಪ್ರಾಧಿಕಾರದ ಕ್ರಮವನ್ನು ಹೈಕೋರ್ಟ್​ ವಿಭಾಗೀಯ ಪೀಠ ಎತ್ತಿ ಹಿಡಿದಿದೆ.

    ಬ್ಲ್ಯಾಕ್​​ಮೇಲ್​ ಮಾಡಿ ರೇಪ್​: ಸಂತ್ರಸ್ತ ಮಹಿಳೆಯ ಪತಿಯ ಸಹೋದ್ಯೋಗಿಗಳಾಗಿದ್ದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ(ಸಿಐಎಸ್​ಎಫ್) 8 ಮಂದಿ ಕಾನ್​ಸ್ಟೇಬಲ್​ಗಳು ಸರ್ಕಾರಿ ಕ್ವಾಟ್ರಸ್​ನಲ್ಲಿ ನೆಲೆಸಿದ್ದರು. 2015ರ ಮಾರ್ಚ್​-ಜೂನ್​ ಅವಧಿಯಲ್ಲಿ ವಿಕಾಸ್​ ವರ್ಮ ಮೊದಲು ಮಹಿಳೆಯನ್ನು ಪರಿಚಯಿಸಿಕೊಂಡಿದ್ದ. ಆಕೆಯ ಪತಿ ಕೆಲಸದ ನಿಮಿತ್ತ ದೂರದ ಸ್ಥಳಕ್ಕೆ ತೆರಳಿರುವುದನ್ನು ತಿಳಿದು ತಡರಾತ್ರಿ ಕರೆ ಮಾಡಿ ಮಾತನಾಡುತ್ತಿದ್ದ ವಿಕಾಸ್​, ಆರಂಭದಲ್ಲಿ ಆರೋಗ್ಯ ಮತ್ತು ಕೌಟುಂಬಿಕ ವಿಚಾರಗಳನ್ನು ಚರ್ಚಿಸುತ್ತಿದ್ದ. ಬಳಿಕ ಲೈಂಗಿಕ ವಿಚಾರಗಳ ಬಗ್ಗೆ ಮಾತನಾಡುತ್ತಾ ದೈಹಿಕ ಸಂಬಂಧ ಹೊಂದುವ ಬಯಕೆ ವ್ಯಕ್ತಪಡಿಸಿದ್ದ. ಒಂದು ರಾತ್ರಿ ಸಂತ್ರಸ್ತೆಯ ಮನೆ ಬಳಿ ತೆರಳಿ ಕರೆ ಮಾಡಿದ್ದ ವಿಕಾಸ್, ನಿನ್ನ ಮನೆಯ ಹೊರಗಿದ್ದೇನೆ. ಲೈಂಗಿಕ ಸಂಪರ್ಕಕ್ಕೆ ಒಪ್ಪದಿದ್ದರೆ ಇಬ್ಬರ ನಡುವಿನ ಮೊಬೈಲ್​ ಮಾತುಕತೆಯನ್ನು ಪತಿಗೆ ತಿಳಿಸುವುದಾಗಿ ಬೆದರಿಕೆ ಹಾಕಿದ್ದ.

    ಬಲವಂತವಾಗಿ ಮನೆಯ ಬಾಗಿಲು ತೆಗೆಸಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ ವಿಕಾಸ್​, ಆ ನಂತರವೂ ನಿರಂತರವಾಗಿ ಅತ್ಯಾಚಾರ ಮಾಡಿದ್ದ. ಅದಾದ ಬಳಿಕ ಉಳಿದ ಆರೋಪಿಗಳು ಮಹಿಳೆಗೆ ಕರೆ ಮಾಡಿ, ವಿಕಾಸ್​ ವರ್ಮನೊಂದಿಗಿನ ಅಕ್ರಮ ಸಂಬಂಧದ ವಿಚಾರ ನಮಗೆ ತಿಳಿದಿದೆ. ನಮ್ಮೊಂದಿಗೂ ಲೈಂಗಿಕ ಸಂಪರ್ಕ ಬೆಳೆಸದಿದ್ದರೆ ವಿಷಯವನ್ನು ನಿನ್ನ ಪತಿಗೆ ಹೇಳುತ್ತೇವೆ ಎಂದು ಬ್ಯ್ಲಾಕ್​ಮೇಲ್​ ಮಾಡಿ ಅತ್ಯಾಚಾರ ಎಸಗಿದ್ದರು.

    ಸೇವೆಯಿಂದ ವಜಾ: ಮಹಿಳೆಯ ಪತಿಗೆ 2015ರ ಜೂ.28ರಂದು ವಿಚಾರ ತಿಳಿದಿತ್ತು. ಜು.2ರಂದು ಸಂತ್ರಸ್ತೆ ದೂರು ನೀಡಿದ್ದರು. ವಿಚಾರಣೆ ನಡೆಸಿದ್ದ ಶಿಸ್ತು ಪ್ರಾಧಿಕಾರ ಹಾಗೂ ಮೇಲ್ಮನವಿ ಪ್ರಾಧಿಕಾರ ಕಾನ್​ಸ್ಟೇಬಲ್​ಗಳಾದ ವಿಕಾಸ್​ ವರ್ಮ(26), ಅಂಕುರ್​ ಪೂನಿಯಾ (27), ಪಿಂಕು ಕುಮಾರ್​ (26), ಜೀತೇಂದ್ರ ಸಿಂಗ್​ (26), ಯೋಗೇಂದ್ರ (26), ವಿಕಾಸ್​ ಕೆ. ತಿವಾರಿ (27), ಚಂದನ್​ ಕುಮಾರ್​ (27) ಹಾಗೂ ರಾಹುಲ್​ ದಿವಾಕರ್​ (27) ಅವರನ್ನು ಅತ್ಯಾಚಾರ ಮತ್ತು ಬ್ಲ್ಯಾಕ್​ಮೇಲ್​ ಕೇಸ್​ನಡಿ ಕೆಲಸದಿಂದ ವಜಾಗೊಳಿಸಿ 2015ರ ಆ.2ರಂದು ಆದೇಶಿಸಿತ್ತು. ಇದನ್ನು ಹೈಕೋರ್ಟ್​ನಲ್ಲಿ ಪ್ರಶ್ನಿಸಲಾಗಿತ್ತು. ವಜಾ ಆದೇಶವನ್ನು ಏಕಸದಸ್ಯ 2017ರ ಆ.8ರಂದು ಎತ್ತಿಹಿಡಿದಿತ್ತು. ಬಳಿಕ ಆರೋಪಿಗಳು ಇಲಾಖಾ ವಿಚಾರಣೆ ನಡೆಸದೆ ನಮ್ಮನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಆಕ್ಷೇಪಿಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

    ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಲೋಕ್​ ಅರಾಧೆ ಹಾಗೂ ನ್ಯಾಯಮೂರ್ತಿ ಜೆ.ಎಂ. ಖಾಜಿ ಅವರಿದ್ದ ಪೀಠ, ಮೇಲ್ಮನವಿದಾರರ ವಿರುದ್ಧದ ಆರೋಪ ಸಾಬೀತುಪಡಿಸಲು ಸಾಕಷ್ಟು ದಾಖಲೆಗಳಿವೆ. ಲಭ್ಯವಿರುವ ದಾಖಲೆಗಳನ್ನು ಪರಿಗಣಿಸಿಯೇ ಶಿಸ್ತು ಪ್ರಾಧಿಕಾರ ಅವರನ್ನು ಕೆಲಸದಿಂದ ವಜಾ ಮಾಡಿದೆ. ಈ ಘಟನೆ ಅಪರೂಪದಲ್ಲಿ ಅಪರೂಪದ್ದಾಗಿದೆ ಹಾಗೂ ಸಿಐಎಸ್​ಎಫ್​ನ ಶಿಸ್ತು ಮತ್ತು ಸದಾಚಾರಕ್ಕೆ ವಿರುದ್ಧವಾಗಿದೆ. ಆದ್ದರಿಂದ, ಅವರನ್ನು ವಜಾಗೊಳಿಸಿರುವ ಆದೇಶ ಸೂಕ್ತವಾಗಿದ್ದು, ನ್ಯಾಯಾಲಯ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಮೇಲ್ಮನವಿಯನ್ನು ವಜಾಗೊಳಿಸಿದೆ.

    ಇತರರ ಮೇಲೂ ಪರಿಣಾಮ: ದೂರುದಾರ ಮಹಿಳೆ ಪತಿ ಕರ್ತವ್ಯ ನಿಮಿತ್ತ ದೂರ ಉಳಿದಿದ್ದ ಸಂದರ್ಭದಲ್ಲಿ ಇಂಥ ಹೀನ ಕೃತ್ಯವೆಸಗಲಾಗಿದೆ. ಈ ಕುರಿತು ಇಲಾಖಾ ತನಿಖೆ ನಡೆಸಿದ್ದರೆ, ಆ ಸುದ್ದಿ ಎಲ್ಲೆಡೆ ಹಬ್ಬುವ ಸಾಧ್ಯತೆ ಇರುತ್ತದೆ. ಇಂಥ ಘಟನೆಗಳು ಇತರ ಸಿಬ್ಬಂದಿಯ ಮನೋಸ್ಥೈರ್ಯ ಕುಗ್ಗಿಸುತ್ತವೆ. ಕುಟುಂಬ ಬಿಟ್ಟು ಕರ್ತವ್ಯ ನಿರ್ವಹಣೆಗಾಗಿ ಬೇರೆ ಊರುಗಳಿಗೆ ತೆರಳುವ ಸಿಬ್ಬಂದಿಯಲ್ಲಿ ಅಭದ್ರತೆ ಮೂಡಿಸುತ್ತದೆ. ಆದ್ದರಿಂದ, ಇಲಾಖಾ ವಿಚಾರಣೆ ನಡೆಸದೆಯೇ ವಜಾಗೊಳಿಸಿರುವ ಶಿಸ್ತು ಪ್ರಾಧಿಕಾರದ ಆದೇಶ ಸೂಕ್ತವಾಗಿದೆ ಎಂದಿರುವ ಹೈಕೋರ್ಟ್​, ಶಿಸ್ತು ಪ್ರಾಧಿಕಾರದ ಆದೇಶವನ್ನು ಎತ್ತಿಹಿಡಿದಿದೆ.

    ಮದ್ವೆಯಾಗಿ ಇಬ್ಬರು ಮಕ್ಕಳಿದ್ರೂ 21 ವರ್ಷದ ಅರ್ಚಕನ ಜತೆ 35ರ ಮಹಿಳೆ ಪರಾರಿ! ಮಧ್ಯರಾತ್ರಿ ಕಾಡಲ್ಲಿ ಈಕೆ ಪಟ್ಟ ಪಾಡು ಅಷ್ಟಿಷ್ಟಲ್ಲ

    ಹೆಂಡ್ತಿ ಬಂದ್ಲು, ಗಂಡ ಹೋದ! ಕಾಡಿಬೇಡಿ ಪತ್ನಿಯನ್ನು ತವರಿಂದ ಕರೆತಂದವ ಮರುದಿನ ಹೀಗಾ ಮಾಡ್ಹೋದು?

    ಕುಜ ದೋಷಕ್ಕೆ ಮಹಿಳಾ ಪೊಲೀಸ್​ ಬಲಿ! ಮದ್ವೆ ನಿರಾಕರಿಸಿ ವಿಷ ಕುಡಿಸಿದ್ದ ಪ್ರಿಯಕರ… ಶಿವಮೊಗ್ಗದಲ್ಲಿ ಮನಕಲಕುವ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts