ದೇಶಕ್ಕಿಂತ ವ್ಯಕ್ತಿ ದೊಡ್ಡವನಲ್ಲ: ಹೈಕೋರ್ಟ್ ಅಭಿಮತ

highcourt
Published on

ಬೆಂಗಳೂರು: ವ್ಯಕ್ತಿ ತಾನು ಹುಟ್ಟಿದ ದೇಶಕ್ಕಿಂತ ದೊಡ್ಡವನಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ರಾಷ್ಟ್ರದ ಸಾರ್ವಭೌಮತೆ, ಏಕತೆ ಹಾಗೂ ಸಮಗ್ರತೆ ಹಿತಾಸಕ್ತಿಗೆ ಸವಾಲು ಎದುರಾದ ಸಂದರ್ಭದಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಮನ್ನಣೆ ನೀಡಲಾಗದು ಎಂದಿದೆ. ಮಾತ್ರವಲ್ಲದೆ, ಕಾನೂನು ಬಾಹಿರವಾಗಿ ಯುವ ಸಮೂಹದ ಮಧ್ಯೆ ಇಸ್ಲಾಮಿಕ್ ಸಿದ್ದಾಂತವನ್ನು ಉತ್ತೇಜನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಅರತ್ ಅಲಿ ಎಂಬಾತನಿಗೆ ಜಾಮೀನು ನೀಡಲು ನ್ಯಾಯಪೀಠ ನಿರಾಕರಿಸಿದೆ.

ಇಸ್ಲಾಮಿಕ್ ಸ್ಟೇಟ್(ಐಸಿಸ್) ಸಂಘಟನೆಯಲ್ಲಿ ಸದಸ್ಯ ಎಂಬ ಆರೋಪದಲ್ಲಿ ಬಂಧಿತನಾಗಿರುವ ಅರತ್ ಎಂಬಾತ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ನ್ಯಾಯಮೂರ್ತಿ ಜೆ.ಎಂ.ಖಾಜಿ ಅವರ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಶಿವಮೊಗ್ಗ ನಗರದಲ್ಲಿ ಪ್ರೇಮಸಿಂಗ್ ಎಂಬ ಯುವಕನಿಗೆ ಚಾಕು ಇರಿದ ಘಟನೆ ಸಂಬಂಧ ಪ್ರಕರಣ ದಾಖಲಾಗಿತ್ತು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ್ದ ಕೇಂದ್ರ ಸರ್ಕಾರ 2022ರ ನ. 14ರಂದು ತನಿಖೆಯನ್ನು ಎನ್‌ಐಎಗೆ ವಹಿಸಿತ್ತು. ವಿಚಾರಣೆ ಸಂದರ್ಭದಲ್ಲಿ ಮೇಲ್ಮನವಿ ಅರ್ಜಿದಾರ (10ನೇ ಆರೋಪಿ)ನ ಯುವ ಸಮೂಹವನ್ನು ಉಗ್ರಗಾಮಿಗಳನ್ನಾಗಿ ಮಾಡಿದ ಮತ್ತು ಇಸ್ಲಾಮಿಕ್ ಸ್ಟೇಟ್(ಐಸಿಸ್) ಸಂಘಟನೆ ಉತ್ತೇಜನ ನೀಡಿರುವ ಕುರಿತು ಮಾಹಿತಿ ಲಭ್ಯವಾಗಿತ್ತು.

ಆದರೆ, ವಿದೇಶದಲ್ಲಿದ್ದ ಕಾರಣದಿಂದ ಬಂಧಿಸಲಾಗಿರಲಿಲ್ಲ. ಬಳಿಕ 2023ರ ಸೆ.14ರಂದು ಎನ್‌ಐಎ ಮೇಲ್ಮನವಿದಾರರನ್ನು ಬಂಧಿಸಿ ತನಿಖೆ ಕೈಗೊಂಡಿದ್ದು, ಅವರ ವಿರುದ್ಧ ಕಾನೂನಬಾಹಿರ ಚಟುವಟಿಕೆಗಳ(ತಡೆ) ಮತ್ತು ಐಪಿಸಿಯ ಅಡಿಯ ಹೆಚ್ಚುವರಿ ಆರೋಪ ಪಟ್ಟಿಯನ್ನು ಸಲ್ಲಿಸಿತ್ತು. ಈ ನಡುವೆ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ಫೆಬ್ರುವರಿಯಲ್ಲಿ ವಜಾಗೊಳಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net