ವಾಹನದ ಮೇಲಿಂದ ಆಯ ತಪ್ಪಿ ಬಿದ್ದು ವ್ಯಕ್ತಿ ಸಾವು

accident-15
Published on

ಬೆಂಗಳೂರು: ವಾಟರ್ ಟ್ಯಾಂಕರ್ ವಾಹನದ ಮೇಲಿಂದ ಆಯ ತಪ್ಪಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಸಿದ್ದಾಪುರದ ನಾರಾಯಣಸ್ವಾಮಿ(೫೯) ಮೃತರು. ಸೋಮವಾರ ಬೆಳಗ್ಗೆ ೧೧.೪೫ರ ಸುಮಾರಿಗೆ ನಲ್ಲೂರಹಳ್ಳಿ ಕ್ರಾಸ್‌ನಲ್ಲಿ ಈ ಘಟನೆ ನಡೆದಿದೆ. ನಲ್ಲೂರಹಳ್ಳಿ ಕ್ರಾಸ್ ಕಡೆಯಿಂದ ನಲ್ಲೂರು ಕಡೆಗೆ ವಾಟರ್ ಟ್ಯಾಂಕರ್ ವಾಹನ ಹೋಗುತ್ತಿತ್ತು. ಈ ವೇಳೆ ಟ್ಯಾಂಕರ್ ಮೇಲೆ ಕುಳಿತ್ತಿದ್ದ ನಾರಾಯಣಸ್ವಾಮಿ ಆಯ ತಪ್ಪಿ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ವಾಟರ್ ಟ್ಯಾಂಕರ್ ವಾಹನದ ಹಿಂಬದಿ ಚಕ್ರಕ್ಕೆ ಸಿಲುಕಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ವಾಟರ್ ಟ್ಯಾಂಕರ್ ವಾಹನದ ಚಾಲಕನ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಘಟನೆಗೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಸಂಬಂಧ ವಾಟರ್ ಟ್ಯಾಂಕರ್ ವಾಹನದ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಈ ಸಂಬಂಧ ವೈಟ್‌ಫೀಲ್ಡ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net