ಯೋಗಭ್ಯಾಸದಿಂದ ಮನುಷ್ಯನಾಗುವನು ನಿರೋಗಿ

vv yoga
ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ವಿವಿಧ ಯೋಗ ಸಂಘಟನೆಗಳ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಯೋಗ ದಿನಾಚರಣೆಯನ್ನು ಶಬರೀಶ್ ಕಣ್ಣನ್, ಅನಿಲ್‌ಕುಮಾರ್ ಶೆಟ್ಟರ್ ಉದ್ಘಾಟಿಸಿದರು. ವಿನಾಯಕ ಬಾಯರಿ ಇತರರಿದ್ದರು.
Published on

ಶಿವಮೊಗ್ಗ: ಪ್ರತಿನಿತ್ಯ ತಪ್ಪದೆ ಯೋಗಾಸನ ಮಾಡುವವರೂ ಇಲ್ಲಿಗೆ ಬಂದಿದ್ದರು. ಮುಂಬರುವ ದಿನಗಳಲ್ಲಿ ನಿತ್ಯ ಯೋಗ ಮಾಡಬೇಕೆಂದು ಸಂಕಲ್ಪ ತೊಟ್ಟವರೂ ಆಗಮಿಸಿದ್ದರು. ಎರಡು ತಾಸಿನ ಕಾರ್ಯಕ್ರಮದಲ್ಲಿ ಹತ್ತಾರು ಆಸನಗಳನ್ನು ಮಾಡುವ ಮೂಲಕ 100ಕ್ಕೂ ಹೆಚ್ಚು ಮಂದಿ ಯೋಗದ ಮಹತ್ವವನ್ನು ಅನಾವರಣಗೊಳಿಸಿದರು.

ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ ಸಹಯೋಗದಲ್ಲಿ ದಿ ಆರ್ಟ್ ಆಫ್ ಲಿವಿಂಗ್, ಕಣಾದ ಯೋಗ ರೀಸರ್ಚ್ ಫೌಂಡೇಷನ್ ಮತ್ತಿತರ ಸಂಘಟನೆಗಳ ಆಶ್ರಯದಲ್ಲಿ ಶುಕ್ರವಾರ ಶುಭಮಂಗಳ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಚ್ಚುಕಟ್ಟಾಗಿ ನೆರವೇರಿತು.
ಬೆಳಗ್ಗೆ 5.50ಕ್ಕೆ ಆರಂಭವಾದ ಯೋಗ ದಿನಾಚರಣೆ ಮುಕ್ತಾಯವಾಗಿದ್ದು 7.50ಕ್ಕೆ. ಶನೈಶ್ಚರ ದೇವಾಲಯದ ಪ್ರಧಾನ ಅರ್ಚಕ ವಿನಾಯಕ ಬಾಯರಿ ಶಂಖನಾದ, ವೇದಘೋಷದೊಂದಿಗೆ ಯೋಗ ದಿನಾಚರಣೆಗೆ ಶ್ರೀಕಾರ ಹಾಡಿದರು. ನಂತರ ದೀಪ ಪ್ರಜ್ವಲನೆ ಮೂಲಕ ಯೋಗ ದಿನಾಚರಣೆಗೆ ಚಾಲನೆ ದೊರೆಯಿತು. ವಿವಿಧ ಯೋಗ ತರಬೇತುದಾರರ ಸೂಕ್ತ ಸೂಚನೆಗಳಂತೆ ನೆರೆದಿದ್ದವರು ವಿವಿಧ ಆಸನಗಳನ್ನು ಪ್ರದರ್ಶಿಸಿದರು.
ಯೋಗ ದಿನದ ಅಂಗವಾಗಿ ಏರ್ಪಡಿಸಿದ್ದ ಯೋಗಾಸನ, ಯೋಗ ಕುರಿತ ರಸ ಪ್ರಶ್ನೆ ಹಾಗೂ ಯೋಗ-ಆಹಾರ ವಿಷಯ ಕುರಿತು ಏರ್ಪಡಿಸಿದ್ದ ಪಿಕ್ ಆ್ಯಂಡ್ ಸ್ಪೀಚ್ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಪುಟ್ಟ ಮಕ್ಕಳು, ವಿದ್ಯಾರ್ಥಿಗಳು, ಯುವಕ-ಯುವತಿಯರು, ವಿವಿಧ ಕೇಂದ್ರಗಳ ಯೋಗಪಟುಗಳು ಸೇರಿ ಎಲ್ಲ ವಯೋಮಾನದವರು ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಪೂರ್ವ ಯೋಜನೆಯಂತೆ ಎಲ್ಲ ಆಸನಗಳು ನಿಗದಿತ ಸಮಯಕ್ಕೆ ಮುಗಿದು ಸಮಯ ಪರಿಪಾಲನೆ ಸಾಕಾರಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net