

ಮೈಸೂರು: ಪೂಜೆ ಮಾಡಿಸುವ ನೆಪದಲ್ಲಿ ಚಿನ್ನವನ್ನು ಕದ್ದಿದ್ದ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೆ.ಆರ್.ನಗರ ತಾಲೂಕಿನ ಸಾತಿಗ್ರಾಮದ ಚೌಡೇಶ್ವರಿ ದೇವಾಲಯದ ಪೂಜಾರಿ ಮನು (28) ಬಂಧಿತ.
ಈತ ಮನೆಯೊಂದರಲ್ಲಿ ಪೂಜೆ ಮಾಡಿಸಿದ್ದ. ಅಕ್ಕಿಯೊಂದಿಗೆ ಚಿನ್ನದ ಒಡವೆಗಳನ್ನು ಇಟ್ಟರೆ ಇನ್ನೂ ಒಳಿತಾಗುತ್ತದೆ ಎಂದು ಹೇಳಿದ್ದ. ಅದನ್ನು ನಂಬಿ ಮನೆಯವರು 456 ಗ್ರಾಂ. ಚಿನ್ನವನ್ನು ಪೂಜೆಗೆ ಇಟ್ಟಿದ್ದರು.
ಮನು ಚಿನ್ನದ ಒಡವೆಗಳಿಗೆ ಪೂಜೆ ಮಾಡಿಸಿ, ಅದನ್ನು ಬೀರುವಿನಲ್ಲಿ ಇಡಿಸಿದ್ದ. ಅದಾದ ಬಳಿಕ ಬಟ್ಟೆ ಬದಲಿಸುವ ನೆಪವೊಡ್ಡಿ ಅದೇ ಕೋಣೆಗೆ ಹೋಗಿ ಚಿನ್ನವನ್ನು ಎಗರಿಸಿದ್ದ. ಅಕ್ಕಿಯ ಗಂಟಿನಲ್ಲಿ ಚಿನ್ನವನ್ನು ಹಾಕಿಕೊಂಡಿದ್ದ. ನಂತರ ಬಂದು ಮನೆಯವರ ಎದುರು ಆಯುಧ ಪೂಜೆ ಬಳಿಕ ಬೀರು ತೆಗೆದು ನೋಡಿ. ಅಲ್ಲಿಯವರೆಗೂ ನೋಡಬೇಡಿ ಎಂದು ಹೇಳಿದ್ದ. ಆಯುಧ ಪೂಜೆಯ ನಂತರ ಮನೆಯವರು ಬೀರುವಿನ ಬಾಗಿಲು ತೆಗೆದಾಗ ಅವರಿಗೆ ಶಾಕ್ ಕಾದಿತ್ತು.
ನಂತರ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಇದೀಗ ಮನುವನ್ನು ಬಂಧಿಸಿದ್ದಾರೆ. ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.