

Prediction : 'ಹೊಸ ಬಾಬಾ ವಂಗಾ' ಎಂದೇ ಕರೆಯಲ್ಪಡುವ ಜಪಾನಿನ ಮಂಗಾ ಕಲಾವಿದೆ ರಿಯೋ ಟ್ಯಾಟ್ಸುಕಿ, ಇಡೀ ಜಗತ್ತನ್ನೇ ಸಂಕಷ್ಟಕ್ಕೆ ಸಿಲುಕಿಸುವ ಭವಿಷ್ಯವೊಂದನ್ನು ನುಡಿದಿದ್ದಾರೆ. ಅದೇನೆಂದರೆ, ಮುಂದಿನ ಜುಲೈ ತಿಂಗಳಲ್ಲಿ ಜಪಾನ್‌ನಲ್ಲಿ ದೊಡ್ಡ ವಿಪತ್ತು ಸಂಭವಿಸಲಿದೆ ಎಂದಿದ್ದಾರೆ.
ರಿಯೋ ಟ್ಯಾಟ್ಸುಕಿ ನುಡಿದ ಭವಿಷ್ಯದ ಬೆನ್ನಲ್ಲೇ ಜಪಾನ್‌ಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ. ಈ ತಿಂಗಳ ಅಂತ್ಯದಿಂದ ಜುಲೈ ಆರಂಭದ ನಡುವಿನ ವಿಮಾನ ಬುಕಿಂಗ್‌ಗಳು ಗಮನಾರ್ಹವಾಗಿ ಕುಸಿದಿವೆ.
ಇದೀಗ ರಿಯೋ ಟ್ಯಾಟ್ಸುಕಿ ಅವರು 'ಮಹಾ ವಿಪತ್ತು' ಸಂಭವಿಸುವ ದಿನಾಂಕ ಮತ್ತು ಸಮಯವನ್ನು ಸಹ ಬಿಡುಗಡೆ ಮಾಡಿದ್ದಾರೆ. ಟ್ಯಾಟ್ಸುಕಿ ಪ್ರಕಾರ, ಜುಲೈ 5 ರಂದು ಜಪಾನ್ ಮತ್ತು ಕೆಲವು ನೆರೆಯ ದೇಶಗಳಲ್ಲಿ ದೊಡ್ಡ ವಿಪತ್ತು ಸಂಭವಿಸಬಹುದು. ಅಲ್ಲದೆ, ಈ ವಿಪತ್ತು ವ್ಯಾಪಕ ವಿನಾಶಕ್ಕೆ ಕಾರಣವಾಗಬಹುದು ಎಂದು ತಮ್ಮ ಮಂಗಾ ಪುಸ್ತಕ 'ದಿ ಫ್ಯೂಚರ್ ಐ ಸೀ' ನಲ್ಲಿ ರಿಯೋ ಟ್ಯಾಟ್ಸುಕಿ ಹೇಳಿಕೊಂಡಿದ್ದಾರೆ.
ಈ ಭವಿಷ್ಯವಾಣಿಯು ಪೂರ್ವ ಏಷ್ಯಾದಲ್ಲಿ ತೀವ್ರ ಕಳವಳವನ್ನುಂಟುಮಾಡಿದೆ, ಇದರಿಂದಾಗಿ ಹಾಂಗ್ಕಾಂಗ್, ತೈವಾನ್ ಮತ್ತು ಚೀನಾದಂತಹ ಪ್ರದೇಶಗಳಿಂದ ಜಪಾನ್‌ಗೆ ಆಗಮಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಅಂದಾಜು 50-83% ಕಡಿತವಾಗಿದೆ. ಕೆಲವು ವಿಮಾನಯಾನ ಸಂಸ್ಥೆಗಳು ಜುಲೈನಲ್ಲಿ ನಿಗದಿಯಾಗಿದ್ದ ವಿಮಾನಗಳನ್ನು ಸಹ ರದ್ದುಗೊಳಿಸಿವೆ.
ಟ್ಯಾಟ್ಸುಕಿಯವರ ಪುಸ್ತಕದಲ್ಲಿ ಸಮುದ್ರ 'ಕುದಿಯುತ್ತಿರುವ' ಒಂದು ಗೊಂದಲದ ಚಿತ್ರವನ್ನು ಚಿತ್ರಿಸಲಾಗಿದ್ದು, ತಜ್ಞರು ಅದನ್ನು ನೀರೊಳಗಿನ ಜ್ವಾಲಾಮುಖಿ ಸ್ಫೋಟ ಅಥವಾ ಭೂಕಂಪನ ಎಂದು ವ್ಯಾಖ್ಯಾನಿಸುತ್ತಾರೆ. ಅವರ ಭವಿಷ್ಯವಾಣಿಯ ಪ್ರಕಾರ, ಜುಲೈ 5 ರಂದು ಬೆಳಗ್ಗೆ 4.18ಕ್ಕೆ ಜಪಾನ್ ಮತ್ತು ಫಿಲಿಪೈನ್ಸ್ ನಡುವಿನ ಸಾಗರ ತಳದಲ್ಲಿ ಎಲ್ಲೋ ಈ ವಿಪತ್ತು ಸಂಭವಿಸಬಹುದು. ಇದು 2011 ರಲ್ಲಿ ಸಂಭವಿಸಿದ ಸುನಾಮಿಯಕ್ಕಿಂತ ಹೆಚ್ಚು ಶಕ್ತಿಶಾಲಿ ಸುನಾಮಿಗೆ ಕಾರಣವಾಗುತ್ತದೆ ಎಂದು ಊಹಿಸಲಾಗಿದೆ.
ಈ ಭವಿಷ್ಯವಾಣಿಯು ಭೀತಿಯನ್ನು ಹುಟ್ಟುಹಾಕಿದೆ ಮತ್ತು ಜಪಾನ್ ಸರ್ಕಾರವು ಸಾರ್ವಜನಿಕರು ಶಾಂತವಾಗಿರಲು ಒತ್ತಾಯಿಸುವ ಹೇಳಿಕೆಗಳನ್ನು ನೀಡಿದೆ. ಮಿಯಾಗಿ ಪ್ರಾಂತ್ಯದ ಗವರ್ನರ್ ಯೋಶಿಹಿರೊ ಮುರೈ ಅವರು ಆಧಾರರಹಿತ ವದಂತಿಗಳಿಗೆ ಬಲಿಯಾಗದಂತೆ ನಾಗರಿಕರನ್ನು ಕೋರಿದ್ದಾರೆ. ಸರ್ಕಾರ ಮತ್ತು ವೈಜ್ಞಾನಿಕ ತಜ್ಞರು ಟ್ಯಾಟ್ಸುಕಿಯ ಭವಿಷ್ಯವಾಣಿಯನ್ನು ಬೆಂಬಲಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ.
ಬಲ್ಗೇರಿಯನ್ನ ನಿಗೂಢ ಮಹಿಳೆ, ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ ಅವರ ಭವಿಷ್ಯವಾಣಿ ಇದಾಗಲೇ ಜಗದ್ವಿಖ್ಯಾತಿ ಪಡೆದಿದೆ. ವರದಿಗಳ ಪ್ರಕಾರ, ಅವರು 1911ರಲ್ಲಿ ಉತ್ತರ ಮ್ಯಾಸಿಡೋನಿಯಾದ ಸ್ಟ್ರುಮಿಕಾದಲ್ಲಿ ಜನಿಸಿದರು. ಅವರ ಮೂಲ ಹೆಸರು ವಾಂಜೆಲಿಯಾ ಪಾಂಡೆವಾ ಡಿಮಿಟ್ರೋವಾ ಎಂದು. ತಮ್ಮ 12ನೇ ವಯಸ್ಸಿನಲ್ಲಿ ಭಾರೀ ಚಂಡಮಾರುತದ ಸಮಯದಲ್ಲಿ ನಿಗೂಢವಾಗಿ ದೃಷ್ಟಿ ಕಳೆದುಕೊಂಡರಂತೆ. 1996ರಲ್ಲಿ ಮೃತಪಟ್ಟಿರುವ ಬಾಬಾ ವಂಗಾ 5079ನೇ ಇಸವಿಯವರೆಗೂ ಏನೇನಾಗಲಿದೆ ಎನ್ನುವುದನ್ನು ಕಂಡು ಕೊಂಡಿದ್ದಾಗಿ ಹೇಳಿದ್ದು, ಅದನ್ನು ಸಮಾಜಕ್ಕೆ ತಿಳಿಸಿಯೇ ಕೊನೆಯುಸಿರೆಳೆದಿದ್ದರು ಎಂದು ಹೇಳಲಾಗಿದೆ. ಇದೀಗ ರಿಯೋ ಟ್ಯಾಟ್ಸುಕಿ ಅವರನ್ನು ಜಪಾನ್ನ ಬಾಬಾ ವಂಗಾ ಎಂದೇ ಕರೆಯುತ್ತಾರೆ.
ಅಂದಹಾಗೆ, ರಿಯೊ ಟ್ಯಾಟ್ಸುಕಿ ಹೇಳಿದ ಅನೇಕ ವಿಷಯಗಳು ಇಲ್ಲಿಯವರೆಗೆ ನಿಜವಾಗಿವೆ. ಅವಳು ಕನಸಿನಲ್ಲಿ ಏನು ಕಂಡರೂ ಅದು ನಿಜವಾಗುತ್ತದೆ ಎಂದು ಹೇಳಲಾಗುತ್ತದೆ. ರಾಜಕುಮಾರಿ ಡಯಾನಾ, ಗಾಯಕ ಫ್ರೆಡ್ಡಿ ಮರ್ಕ್ಯುರಿ ಅವರ ಮರಣವನ್ನು ಟಾಟ್ಸುಕಿ ಭವಿಷ್ಯ ನುಡಿದಿದ್ದರು, ಅದು ನಿಜವಾಯಿತು. ಇಷ್ಟು ಮಾತ್ರವಲ್ಲದೆ, ಅವರು 1999 ರಲ್ಲಿ ತಮ್ಮ ಪುಸ್ತಕದಲ್ಲಿ ಕರೊನಾ ಸಾಂಕ್ರಾಮಿಕ ರೋಗದ ಬಗ್ಗೆ ಭವಿಷ್ಯ ನುಡಿದಿದ್ದರು. ಇದು 2020ರಲ್ಲಿ ನಿಜವಾಗಿದೆ.
ರಿಯೊ ಟ್ಯಾಟ್ಸುಕಿ ತಮ್ಮ ಪುಸ್ತಕದಲ್ಲಿ ಮತ್ತೊಮ್ಮೆ ಕೊರೊನಾ ಸಾಂಕ್ರಾಮಿಕ ರೋಗದ ಮರಳುವಿಕೆಯ ಬಗ್ಗೆ ಬರೆದಿದ್ದಾರೆ. ಈ ಸಾಂಕ್ರಾಮಿಕ ರೋಗವು 2030 ರಲ್ಲಿ ಮತ್ತೊಮ್ಮೆ ಮರಳುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಈ ಸಾಂಕ್ರಾಮಿಕ ರೋಗವು ಕಣ್ಮರೆಯಾಗಿ 2030ರಲ್ಲಿ ಮತ್ತೆ ಮರಳುತ್ತದೆ ಮತ್ತು ಅಂತಹ ಪರಿಸ್ಥಿತಿಯಲ್ಲಿ ಜಗತ್ತಿನಲ್ಲಿ ಭೀಕರ ವಿನಾಶದ ಸಾಧ್ಯತೆಯಿದೆ ಎಂದು ಅವರು ಬರೆದಿದ್ದಾರೆ. (ಏಜೆನ್ಸೀಸ್)