

ಪಣಜಿ: ಏಕನಾಥ್ ಶಿಂಧೆಗೆ ಮಹಾರಾಷ್ಟ್ರ ಸಿಎಂ ಪಟ್ಟ ಘೋಷಣೆ ಆಗುತ್ತಿದ್ದಂತೆ ಗೋವಾದಲ್ಲಿ ಬೀಡುಬಿಟ್ಟಿರುವ ಶಿಂಧೆ ಬಣದ ಶಾಸಕರು ಮತ್ತು ಸಂಸದರು ಕುಣಿದು ಕುಪ್ಪಳಿಸಿದ್ದಾರೆ. ಏಕನಾಥ್ಗೆ ಜೈಕಾರ ಹಾಕುತ್ತಾ ಹಾಡಿನ ಹಿನ್ನೆಲೆಗೆ ತಕ್ಕಂತೆ ಭರ್ಜರಿ ಡಾನ್ಸ್ ಮಾಡಿದ್ದಾರೆ.
ಕ್ಷಣಕ್ಷಣಕ್ಕೂ ತಿರುವು ಪಡೆಯುತ್ತಿದ್ದ ಮಹಾರಾಷ್ಟ್ರ ರಾಜ್ಯ ರಾಜಕೀಯದಲ್ಲಿ ಗುರುವಾರ ಸಂಜೆ ಸ್ಫೋಟಕ ತಿರುವು ಪಡೆಯಿತು. ಬಿಜೆಪಿಯ ಪಡ್ನವೀಸ್ ಅವರೇ ಸಿಎಂ ಆಗ್ತಾರೆ. ಶಿಂಧೆಗೆ ಡಿಸಿಎಂ ಪಟ್ಟ ಸಿಗುತ್ತೆ ಎಂದೇ ಹೇಳಲಾಗಿತ್ತು. ಆದರೆ, ಅಚ್ಚರಿ ಬೆಳವಣಿಗೆ ಎಂಬಂತೆ ಕೊನೇ ಕ್ಷಣದಲ್ಲಿ ಮುಂಬೈನಲ್ಲಿ ಶಿಂಧೆ ಜತೆ ಜಂಟಿಸುದ್ದಿಗೋಷ್ಠಿ ನಡೆಸಿದ ಮಾಜಿ ಸಿಎಂ ದೇವೇಂದ್ರ ಪಡ್ನವಿಸ್, ಮಹಾರಾಷ್ಟ್ರದ ನೂತನ ಸಿಎಂ ಆಗಿ ಏಕನಾಥ್ ಶಿಂಧೆ ಆಯ್ಕೆ ಆಗಿದ್ದಾರೆ ಎಂದು ಘೋಷಣೆ ಮಾಡಿದರು. ಇದೇ ವೇಳೆ ಅತ್ತ ಗೋವಾದಲ್ಲಿ ಬೀಡುಬಿಟ್ಟಿದ್ದ ಶಿಂಧೆ ಬಣ, ಈ ಸುದ್ದಿ ಕೇಳಿ ಸಂಭ್ರಮಿಸಿದ್ದಾರೆ. ಡಾನ್ಸ್ ಮಾಡುತ್ತಾ ಶಿಂಧೆ.. ಶಿಂಧೆ.. ಏಕನಾಥ್ ಶಿಂಧೆ... ಎಂದು ಜೈಕಾರ ಹಾಕಿದ್ದಾರೆ. ಇವರು ಕುಣಿದು ಕುಪ್ಪಳಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
'ಏಕನಾಥ್ ಶಿಂಧೆ ಕಿಂಗ್ ಮೇಕರ್ ಅಲ್ಲ, ಅವರು ಕಿಂಗ್' ಎಂದು ದೇವೆಂದ್ರ ಪಡ್ನವಿಸ್ ಹೇಳುತ್ತಿದ್ದಂತೆ ಶಿಂಧೆ ಬೆಂಬಲಿಕ ಶಾಸಕರು ಜೋರಾಗಿ ಶಿಳ್ಳೆ ಹಾಕಿ, ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ ಇಂದು ಸಂಜೆ 7.30ಕ್ಕೆ ಮಹಾರಾಷ್ಟ್ರ ಸಿಎಂ ಆಗಿ ಶಿಂಧೆ ಪ್ರಮಾನವಚನ ಸ್ವೀಕರಿಸಲಿದ್ದಾರೆ. ಶಿಂಧೆಗೆ ಸಿಎಂ ಸ್ಥಾನ ಬಿಟ್ಟುಕೊಟ್ಟ ಪಡ್ನವಿಸ್ ನಡೆಯನ್ನ ಮತ್ತು ಬಿಜೆಪಿ ನಿರ್ಧಾರವನ್ನ ಶಿಂಧೆ ಬಣ ಕೊಂಡಾಡಿದೆ. ಬಿಜೆಪಿ ಬಳಿ 120 ಶಾಸಕರ ಬೆಂಬಲವಿದ್ದರೂ ಸಿಎಂ ಸ್ಥಾನವನ್ನ ನನಗೆ ಬಿಟ್ಟುಕೊಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ, ಪಡ್ನವಿಸ್ ಅವರಿಗೆ ಧನ್ಯವಾದಗಳು. ಇದನ್ನು ಬಾಳಾ ಸಾಹೇಬ್ ಠಾಕ್ರೆ ಅವರಿಗೆ ಅರ್ಪಿಸುವೆ ಎಂದು ಏಕನಾಥ್ ಶಿಂಧೆ ಪ್ರತಿಕ್ರಿಯಿಸಿದ್ದಾರೆ.
ನಮ್ಮ ಕ್ಷೇತ್ರದ ಅಭಿವೃದ್ಧಿ ಮಾಡಲು ಉದ್ಧವ್ ಠಾಕ್ರೆಗೆ ಮೇಲಿಂದ ಮೇಲೆ ತಿಳಿಸಿದರೂ ಅವರು ಪುರಸ್ಕರಿಸಲಿಲ್ಲ. ಹಾಗಾಗಿ ನಾವು ಅಘಾಡಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನ ಹಿಂಪಡೆದಿದ್ದೇವೆ ಎಂದು ಏಕನಾಥ್ ಶಿಂಧೆ ಸ್ಪಷ್ಟನೆ ನೀಡಿದ್ದಾರೆ.